ಬೆಳಗಾವಿ, ಜುಲೈ 18: ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ನುಗ್ಗಾನಟ್ಟಿ ಗ್ರಾಮದಲ್ಲಿ ಜಮೀನು ವಿವಾದದ ಹಿನ್ನೆಲೆ ನಡೆದಿದ್ದ ಅವಳಿ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಆಸ್ತಿ ಆಸೆಯಿಂದ ಹಿರಿಯ ಅತ್ತಿಗೆಯೇ ತನ್ನ ಇಬ್ಬರು ಮೈದುನರ ಹತ್ಯೆಗೆ ಸಂಚು ರೂಪಿಸಿದ್ದಳು ಎಂಬ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪ್ರಕರಣದಲ್ಲಿ ಪ್ರಮುಖ ಆರೋಪಿ ಅಣ್ಣವ್ವ ಸೇರಿದಂತೆ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಶನಿವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೃತರಾದ ಬಸಪ್ಪ ಹಾಗೂ ಲಗಮಣ್ಣ ಅವರ ತಂದೆ ಫಕ್ಕೀರಪ್ಪ ಅವರಿಗೆ ಯಲ್ಲಪ್ಪ, ಬಸಪ್ಪ ಮತ್ತು ಲಗಮಣ್ಣ ಎಂಬ ಮೂವರು ಪುತ್ರರಿದ್ದರು. ಹಿರಿಯ ಪುತ್ರ ಯಲ್ಲಪ್ಪ ಅವರ ಪತ್ನಿ ಅಣ್ಣವ್ವ ಹಲವು ವರ್ಷಗಳಿಂದ ತವರು ಮನೆಯಲ್ಲೇ ವಾಸವಾಗಿದ್ದರು. ಕುಟುಂಬದ ಒಂಬತ್ತು ಎಕರೆ ಜಮೀನಿನ ಪಾಲು ಹಂಚಿಕೆ ವಿಚಾರವಾಗಿ ಈ ಹಿಂದೆ ಉಂಟಾಗಿದ್ದ ವಿವಾದವನ್ನು ಗ್ರಾಮ ಹಿರಿಯರ ಮಧ್ಯಸ್ಥಿಕೆ ಹಾಗೂ ಬಳಿಕ ಕೋರ್ಟನಲ್ಲಿ ರಾಜಿ ಮೂಲಕ ಇತ್ಯರ್ಥಪಡಿಸಲಾಗಿತ್ತು.
ರಾಜಿ ಒಪ್ಪಂದದಂತೆ ಅಣ್ಣವ್ವ ಅವರಿಗೆ ₹2 ಲಕ್ಷ ಪರಿಹಾರ ನೀಡಲಾಗಿದ್ದು, ಅವರ ಪುತ್ರ ನೀಲಕಂಠ 18 ವರ್ಷ ಪೂರೈಸಿದ ಬಳಿಕ ಒಂದು ಎಕರೆ ಜಮೀನು ನೀಡಲು ಸಹ ಒಪ್ಪಂದವಾಗಿತ್ತು. ಆದರೆ ಇತ್ತೀಚೆಗೆ ಜಮೀನಿನ ಸರ್ವೆ ನಡೆಸುವ ವಿಚಾರವಾಗಿ ಮತ್ತೆ ಭಿನ್ನಾಭಿಪ್ರಾಯ ಉಂಟಾಗಿ, ಇದೇ ವೈಷಮ್ಯ ಕೊಲೆಗೆ ಕಾರಣವಾಗಿದೆ ಎಂದು ಎಸ್‌ಪಿ ಹೇಳಿದರು.
ಜುಲೈ 16ರ ಮಧ್ಯರಾತ್ರಿ ಬಸಪ್ಪ ಮತ್ತು ಲಗಮಣ್ಣ ಅವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ದಾಳಿಯಲ್ಲಿ ಫಕ್ಕೀರಪ್ಪ ಹಾಗೂ ಬಾಳೇಶ ಅವರ ಮೇಲೂ ಹಲ್ಲೆ ನಡೆಸಿ ಕೊಲೆ ಯತ್ನ ಮಾಡಲಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಪ್ರಕರಣದ ತನಿಖೆ ವೇಳೆ ಆಸ್ತಿ ವಿಚಾರದಲ್ಲಿ ಉಂಟಾಗಿದ್ದ ದ್ವೇಷದ ಹಿನ್ನೆಲೆಯಲ್ಲಿ ಅಣ್ಣವ್ವ ಸಂಚು ರೂಪಿಸಿ, ಇತರರ ಸಹಕಾರದೊಂದಿಗೆ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಬಂಧಿತ ಆರು ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಪ್ರಕರಣ ಸಂಬಂಧ ಮುರಗೋಡ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದ್ದು, ಎಲ್ಲ ಆಯಾಮಗಳಿಂದ ತನಿಖೆ ಮುಂದುವರಿದಿದೆ ಎಂದು ಕೆ. ರಾಮರಾಜನ್ ತಿಳಿಸಿದರು.