ಬೆಂಗಳೂರು, ಸೆ. 21 : ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಲು ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ಕರ್ನಾಟಕ ಹೈಕೋರ್ಟ ಸೋಮವಾರ ಮಹತ್ವದ ಆದೇಶ ನೀಡಿದೆ. ಸಿಬಿಐ ತನಿಖೆಗೆ ಒಪ್ಪಿಸಬೇಕೆಂಬ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿಲ್ಲ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ಅಲೋಕ್ ಕುಮಾರ ನೇತೃತ್ವದ ಐವರು ಐಪಿಎಸ್ ಅಧಿಕಾರಿಗಳ ಎಸ್‌ಐಟಿ ರಚಿಸಿದೆ. ದಿವ್ಯಾ ವಿ. ಗೋಪಿನಾಥ್, ಅನೂಪ್ ಎ. ಶೆಟ್ಟಿ, ಕುಶಾಲ್ ಚೌಕ್ಸೆ ಹಾಗೂ ಕ್ಷಮಾ ಮಿಶ್ರಾ ತಂಡದ ಇತರ ಸದಸ್ಯರಾಗಿದ್ದಾರೆ. ತನಿಖೆಯನ್ನು 100 ದಿನಗಳೊಳಗೆ ಪೂರ್ಣಗೊಳಿಸುವಂತೆ ಸೂಚಿಸಿರುವ ನ್ಯಾಯಾಲಯ, ಪ್ರತಿ 30 ದಿನಗಳಿಗೊಮ್ಮೆ ತನಿಖೆಯ ಪ್ರಗತಿ ವರದಿಯನ್ನು ಸಲ್ಲಿಸಬೇಕೆಂದು ನಿರ್ದೇಶಿಸಿದೆ.
ಸಿಐಡಿ ದಾಖಲೆಗಳೆಲ್ಲ ಎಸ್‌ಐಟಿಗೆ
ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಹಾಗೂ ಸಂಬಂಧಿತ ಪೊಲೀಸ್ ಅಧಿಕಾರಿಗಳು ಈವರೆಗೆ ಸಂಗ್ರಹಿಸಿರುವ ದಾಖಲೆಗಳು, ಸಾಮಗ್ರಿಗಳು ಮತ್ತು ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಎಸ್‌ಐಟಿಗೆ ಹಸ್ತಾಂತರಿಸಬೇಕು. ಅಲ್ಲದೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾನಾಂತರ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದೊಂದಿಗೆ ಎಸ್‌ಐಟಿ ಸಹಕರಿಸಬೇಕು ಎಂದು ಹೈಕೋರ್ಟ ಸೂಚಿಸಿದೆ.
ಎಸ್‌ಐಟಿಗೆ ಪೊಲೀಸ್ ಠಾಣೆಯ ಸ್ಥಾನಮಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿದ್ದು, ಈ ಸಂಬಂಧ ಶೀಘ್ರ ಅಧಿಸೂಚನೆ ಹೊರಡಿಸಬೇಕೆಂದು ನ್ಯಾಯಾಲಯ ನಿರ್ದೇಶಿಸಿದೆ. ತನಿಖೆಯನ್ನು ಈಗಾಗಲೇ ದಾಖಲಾಗಿರುವ ಪ್ರಕರಣಗಳಲ್ಲಿನ ಆರೋಪಿಗಳಿಗೆ ಮಾತ್ರ ಸೀಮಿತಗೊಳಿಸದೆ, ತನಿಖೆಯಲ್ಲಿ ಹೊಸ ಸಾಕ್ಷ್ಯಗಳು ದೊರೆತರೆ ಇತರರ ಪಾತ್ರವನ್ನೂ ಪರಿಶೀಲಿಸಬೇಕು ಎಂದು ಹೇಳಿದೆ.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿ ಹೈಕೋರ್ಟ ಈ ಆದೇಶ ನೀಡಿದೆ. ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಸೇರಿದಂತೆ ವಿವಿಧ ನೇಮಕಾತಿಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಅರ್ಜಿದಾರರು ಕೋರಿದ್ದರು.
₹35 ಲಕ್ಷದಿಂದ ₹80 ಲಕ್ಷದವರೆಗೆ ಲಂಚದ ಆರೋಪ
400 ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಗಾಗಿ 2026ರ ಜನವರಿ 8 ಮತ್ತು 9ರಂದು ಪರೀಕ್ಷೆ ನಡೆದಿದ್ದು, ಜುಲೈ 17ರಂದು ಅಂತಿಮ ಆಯ್ಕೆಪಟ್ಟಿ ಪ್ರಕಟವಾಗಿತ್ತು. ನಂತರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂದಿದ್ದವು.
ಸಿಐಡಿ ತನಿಖೆಯಲ್ಲಿ ಕೆಲವು ಅಭ್ಯರ್ಥಿಗಳಿಂದ ಹುದ್ದೆಗಾಗಿ ₹35 ಲಕ್ಷದಿಂದ ₹80 ಲಕ್ಷದವರೆಗೆ ಹಣ ಪಡೆದಿರುವ ಆರೋಪಗಳು ಹೊರಬಂದಿವೆ. ಪರೀಕ್ಷಾ ಪ್ರಶ್ನೆಗಳನ್ನು ಆಯ್ದ ಅಭ್ಯರ್ಥಿಗಳಿಗೆ ಮುಂಚಿತವಾಗಿ ನೀಡಲಾಗಿದೆ ಎಂಬ ಆರೋಪವೂ ತನಿಖೆಯ ಭಾಗವಾಗಿದೆ. ಪ್ರಕರಣದಲ್ಲಿ ಕೆಪಿಎಸ್‌ಸಿಯ ಆಗಿನ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ ಗಂಗ್ವಾರ್ ಹಾಗೂ ಮಧ್ಯವರ್ತಿ ಬಸವರಾಜ ಕನ್ನಾಳೆ ವಿರುದ್ಧ ತನಿಖೆ ನಡೆಯುತ್ತಿದ್ದು, ಜಾರಿ ನಿರ್ದೇಶನಾಲಯವೂ ಅಕ್ರಮ ಹಣ ವರ್ಗಾವಣೆ ಆರೋಪಗಳ ಕುರಿತು ತನಿಖೆ ನಡೆಸುತ್ತಿದೆ.
ಈಗ ಹೈಕೋರ್ಟ ರಚಿಸಿರುವ ಎಸ್‌ಐಟಿ ಕೆಪಿಎಸ್‌ಸಿ ನೇಮಕಾತಿ ಅಕ್ರಮಗಳ ಕುರಿತು ಹೊಸದಾಗಿ ಸಮಗ್ರ ತನಿಖೆ ನಡೆಸಲಿದ್ದು, ಪ್ರತಿ 30 ದಿನಗಳಿಗೊಮ್ಮೆ ನ್ಯಾಯಾಲಯದ ಮೇಲ್ವಿಚಾರಣೆಗೆ ಪ್ರಗತಿ ವರದಿ ಸಲ್ಲಿಸಬೇಕಿದೆ.