ಹೊಸದಿಲ್ಲಿ, ಜೂನ್ 13 : ಹಾಲಿ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಜೂನ್ 30ರಂದು ನಿವೃತ್ತರಾಗಲಿರುವ ಹಿನ್ನೆಲೆಯಲ್ಲಿ, ಲೆಫ್ಟಿನೆಂಟ್ ಜನರಲ್ ಧೀರಜ ಸೇಠ್ ಅವರನ್ನು ಭಾರತೀಯ ಸೇನೆಯ ನೂತನ ಮುಖ್ಯಸ್ಥರಾಗಿ ಕೇಂದ್ರ ಸರ್ಕಾರ ನೇಮಿಸಿದೆ.
ಪ್ರಸ್ತುತ ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಧೀರಜ ಸೇಠ್, ಜುಲೈ 1ರಂದು ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಖಡಕ್ವಾಸ್ಲಾದ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿರುವ ಸೇಠ್ ಅವರನ್ನು ಡಿಸೆಂಬರ್ 1986ರಲ್ಲಿ ಆರ್ಮರ್ಡ್ ಕಾರ್ಪ್ಸ್‌ಗೆ ನಿಯೋಜಿಸಲಾಗಿತ್ತು. ಸುಮಾರು ನಾಲ್ಕು ದಶಕಗಳ ಸೇನಾ ಸೇವೆಯಲ್ಲಿ ಅವರು ಕಾರ್ಯಾಚರಣೆ, ಕಾರ್ಯತಂತ್ರ, ಸಾಮರ್ಥ್ಯ ಅಭಿವೃದ್ಧಿ ಹಾಗೂ ಸಾಂಸ್ಥಿಕ ನಿರ್ವಹಣೆ ಕ್ಷೇತ್ರಗಳಲ್ಲಿ ವಿಶಾಲ ಅನುಭವ ಗಳಿಸಿದ್ದಾರೆ.
ಭಾರತೀಯ ಸೇನೆಯ ಯುದ್ಧ ಸಾಮರ್ಥ್ಯ ವೃದ್ಧಿ ಮತ್ತು ಆಧುನೀಕರಣದಲ್ಲಿ ಅವರು ಮಹತ್ವದ ಕೊಡುಗೆ ನೀಡಿದ್ದಾರೆ. ಹೊಸ ತಂತ್ರಜ್ಞಾನಗಳನ್ನು ಸೇನಾ ಕಾರ್ಯಾಚರಣೆಗಳೊಂದಿಗೆ ಸಂಯೋಜಿಸುವುದು ಹಾಗೂ ಭವಿಷ್ಯದ ಯುದ್ಧ ಸವಾಲುಗಳಿಗೆ ತಕ್ಕಂತೆ ಸೇನೆಯ ಸಾಮರ್ಥ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಶಸ್ತ್ರಸಜ್ಜಿತ ರೆಜಿಮೆಂಟ್, ಶಸ್ತ್ರಸಜ್ಜಿತ ಬ್ರಿಗೇಡ್ ಹಾಗೂ ದಂಗೆ ನಿಗ್ರಹ ಪಡೆಯ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದ ಅವರು, ಬಳಿಕ ಭಾರತೀಯ ಸೇನೆಯ ಪ್ರಮುಖ ಸ್ಟ್ರೈಕ್ ರಚನೆಗಳಲ್ಲಿ ಒಂದಾದ ಸುದರ್ಶನ ಚಕ್ರ ಕಾರ್ಪ್ಸ್‌ನ ಕಮಾಂಡರ್ ಆಗಿದ್ದರು.
ಅಲ್ಲದೆ, ದಿಲ್ಲಿ ಪ್ರದೇಶದ ಜನರಲ್ ಆಫೀಸರ್ ಕಮಾಂಡಿಂಗ್ ಆಗಿಯೂ ಕಾರ್ಯನಿರ್ವಹಿಸಿದ್ದು, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಪ್ರಮುಖ ಸೇನಾ ಕಾರ್ಯಕ್ರಮಗಳ ಮೇಲ್ವಿಚಾರಣೆ ನಡೆಸಿದ್ದರು.ಸೇನಾ ಕಮಾಂಡರ್ ಹುದ್ದೆಗೆ ಬಡ್ತಿ ಪಡೆದ ಬಳಿಕ ಸೌತ್ ವೆಸ್ಟರ್ನ್ ಕಮಾಂಡ್ ಹಾಗೂ ಸದರ್ನ್ ಕಮಾಂಡ್‌ಗಳಿಗೆ ಮುಖ್ಯಸ್ಥರಾಗಿದ್ದರು. ಭಾರತೀಯ ಸೇನೆಯ ಎರಡು ಕಾರ್ಯಾಚರಣಾ ಕಮಾಂಡ್‌ಗಳಿಗೆ ನೇತೃತ್ವ ವಹಿಸಿದ ಅಪರೂಪದ ಅಧಿಕಾರಿಗಳಲ್ಲಿ ಅವರು ಒಬ್ಬರಾಗಿದ್ದಾರೆ. ಸೇಠ್ ಅವರು ಹೈಯರ್ ಕಮಾಂಡ್ ಕೋರ್ಸ್ ಹಾಗೂ ನ್ಯಾಷನಲ್ ಡಿಫೆನ್ಸ್ ಕಾಲೇಜಿನ ಪದವೀಧರರಾಗಿದ್ದು, ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ನಡೆಯುವ ಪ್ರತಿಷ್ಠಿತ ಕಮಾಂಡ್ ಮತ್ತು ಸ್ಟಾಫ್ ಕೋರ್ಸ್‌ನಲ್ಲಿಯೂ ಭಾಗವಹಿಸಿದ್ದಾರೆ.
ಜನರಲ್ ಉಪೇಂದ್ರ ದ್ವಿವೇದಿ ಅವರು 2024ರ ಜೂನ್‌ನಲ್ಲಿ 30ನೇ ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದರು. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಅವರು ಜೂನ್ 30ರಂದು ನಿವೃತ್ತರಾಗಲಿದ್ದಾರೆ.