ಭೋಪಾಲ, ಮೇ 8 : ಮಧ್ಯಪ್ರದೇಶದ ಸತ್ನಾ ಕೇಂದ್ರ ಕಾರಾಗೃಹದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಜೈಲರ್ ಹಾಗೂ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸಿದ್ದ ಮಾಜಿ ಕೈದಿಯ ನಡುವೆ ಪ್ರೇಮ ವಿವಾಹ ನಡೆದಿರುವ ಘಟನೆ ಗಮನ ಸೆಳೆದಿದೆ.
ಬುಂದೇಲಖಂಡ ಪ್ರದೇಶದ ಛತ್ತರಪುರ ಜಿಲ್ಲೆಯ ಚಾಂಡ್ಲಾ ನಗರ ಪಾಲಿಕೆಯ ಅಂದಿನ ಉಪಾಧ್ಯಕ್ಷ ಕೃಷ್ಣ ದತ್ ದೀಕ್ಷಿತ್ ಹತ್ಯೆ ಪ್ರಕರಣದಲ್ಲಿ ಧರ್ಮೇಂದ್ರ ಸಿಂಗ್‌ಗೆ 2007ರಲ್ಲಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಹತ್ಯೆ ಬಳಿಕ ಮೃತದೇಹವನ್ನು ಹೂತು ಹಾಕಿದ್ದ ಆರೋಪವೂ ಆತನ ವಿರುದ್ಧ ಸಾಬೀತಾಗಿತ್ತು. ನಂತರ ಆತನನ್ನು ಸತ್ನಾ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು.
ಈ ಅವಧಿಯಲ್ಲಿ ಫಿರೋಝಾ ಖಾತೂನ ಅವರು ಸತ್ನಾ ಜೈಲಿನಲ್ಲಿ ಸಹಾಯಕ ಜೈಲು ಅಧೀಕ್ಷಕಿಯಾಗಿ ನೇಮಕಗೊಂಡಿದ್ದರು. ಅವರಿಗೆ ವಾರಂಟ್ ಉಸ್ತುವಾರಿ ಜವಾಬ್ದಾರಿ ನೀಡಲಾಗಿತ್ತು. ವಾರಂಟ್ ಸಂಬಂಧಿತ ಕೆಲಸಗಳಲ್ಲಿ ಧರ್ಮೇಂದ್ರ ಸಿಂಗ್ ಜೈಲು ಸಿಬ್ಬಂದಿಗೆ ನೆರವಾಗುತ್ತಿದ್ದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಪರಿಚಯ ಬೆಳೆದಿತ್ತು. ವೃತ್ತಿಪರ ಸಂಪರ್ಕದಿಂದ ಆರಂಭವಾದ ಪರಿಚಯ ಕ್ರಮೇಣ ಸ್ನೇಹಕ್ಕೆ, ಬಳಿಕ ಪ್ರೇಮಕ್ಕೆ ತಿರುಗಿತ್ತು ಎಂದು ಜೈಲು ಮೂಲಗಳು ತಿಳಿಸಿವೆ. ಹಲವು ವರ್ಷಗಳಿಂದ ಮುಂದುವರಿದಿದ್ದ ಈ ಸಂಬಂಧ, ಧರ್ಮೇಂದ್ರ ಸಿಂಗ್ ಬಿಡುಗಡೆಗೊಂಡ ಬಳಿಕವೂ ಮುಂದುವರಿದಿತ್ತು.
ಸುಮಾರು 14 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದ ಧರ್ಮೇಂದ್ರ ಸಿಂಗ್ ಉತ್ತಮ ನಡತೆಯ ಆಧಾರದ ಮೇಲೆ 4 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ. ಬಳಿಕ ಇಬ್ಬರೂ ವಿವಾಹವಾಗಲು ನಿರ್ಧರಿಸಿದ್ದರು.
ಮೇ 5ರಂದು ಛತ್ತರಪುರ ಜಿಲ್ಲೆಯ ಲವ್ ಕುಶ್ ನಗರದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹ ನೆರವೇರಿತು. ಆದರೆ ಫಿರೋಝಾ ಖಾತೂನ ಕುಟುಂಬ ಸದಸ್ಯರು ವಿವಾಹಕ್ಕೆ ಬೆಂಬಲ ಸೂಚಿಸದೆ ಕಾರ್ಯಕ್ರಮದಿಂದ ದೂರ ಉಳಿದಿದ್ದರು ಎಂದು ವರದಿಯಾಗಿದೆ.
ವಧುವಿನ ಕುಟುಂಬದವರು ಗೈರಾಗಿದ್ದ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ರಾಜ್ ಬಹದ್ದೂರ್ ಮಿಶ್ರಾ ಹಾಗೂ ಅವರ ಪತ್ನಿ ಕನ್ಯಾದಾನ ನೆರವೇರಿಸಿದರು. ವಿವಾಹ ಸಮಾರಂಭದಲ್ಲಿ ಬಜರಂಗದಳದ ಕಾರ್ಯಕರ್ತರೂ ಭಾಗವಹಿಸಿದ್ದರು. ನವದಂಪತಿಗೆ ಜೈಲು ಅಧಿಕಾರಿಗಳು ಹಾಗೂ ಧರ್ಮೇಂದ್ರ ಸಿಂಗ್‌ನ ಮಾಜಿ ಸಹ ಕೈದಿಗಳು ಶುಭಾಶಯ ಕೋರಿದ್ದಾರೆ.