LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಬಾಂದ್ರಾದ ಗರೀಬ ನಗರದಲ್ಲಿ ಭಾರಿ ತೆರವು ಕಾರ್ಯಾಚರಣೆ: ಮಳೆಗಾಲಕ್ಕೆ ಮುನ್ನ ಸಾವಿರಾರು ಜನ ಬೀದಿಗೆ

ಮುಂಬೈ, ಮೇ 23 : ಮುಂಬೈನ ಬಾಂದ್ರಾ ಪೂರ್ವದ ಗರೀಬ್ ನಗರ ಕೊಳೆಗೇರಿ ಪ್ರದೇಶದಲ್ಲಿ ಪಶ್ಚಿಮ ರೈಲ್ವೆ ಕೈಗೊಂಡಿರುವ ಭಾರಿ ತೆರವು ಕಾರ್ಯಾಚರಣೆ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಅಭಿವೃದ್ಧಿ ಮತ್ತು ಮಾನವೀಯತೆ ನಡುವಿನ ಸಂಘರ್ಷವನ್ನು ಮತ್ತೊಮ್ಮೆ ಬಹಿರಂಗಪಡಿಸಿರುವ ಈ ಕಾರ್ಯಾಚರಣೆಯಲ್ಲಿ 500ಕ್ಕೂ ಹೆಚ್ಚು ಅನಧಿಕೃತ ಮನೆಗಳು, ಅಂಗಡಿಗಳು, ಗೋದಾಮುಗಳು ಹಾಗೂ ಬಹುಮಹಡಿ ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ. ಕಳೆದ 3 ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಕಾರ್ಯಾಚರಣೆಯಿಂದ ಸಾವಿರಾರು ಜನರು ಮಳೆಗಾಲದ ಮುನ್ನವೇ ಆಶ್ರಯ ಕಳೆದುಕೊಂಡಿದ್ದಾರೆ.

ಬಾಂದ್ರಾ ರೈಲು ನಿಲ್ದಾಣದ ಪೂರ್ವ ಭಾಗದಲ್ಲಿ ರೈಲ್ವೆ ಹಳಿಗಳಿಗೆ ಅಂಟಿಕೊಂಡು ನಿರ್ಮಾಣವಾಗಿದ್ದ ಕಟ್ಟಡಗಳನ್ನು ತೆರವುಗೊಳಿಸಲಾಗುತ್ತಿದೆ. ರೈಲ್ವೆ ಅಧಿಕಾರಿಗಳ ಪ್ರಕಾರ, ಈ ಪ್ರದೇಶದ ಕಟ್ಟಡಗಳು ರೈಲು ಸಂಚಾರದ ಸುರಕ್ಷತೆಗೆ ಗಂಭೀರ ಅಪಾಯ ಉಂಟುಮಾಡುತ್ತಿದ್ದು, ಭವಿಷ್ಯದ ಅಭಿವೃದ್ಧಿ ಯೋಜನೆಗಳಿಗೆ ಅಡ್ಡಿಯಾಗಿದ್ದವು. ಬಾಂದ್ರಾ ಟರ್ಮಿನಸ್ ವಿಸ್ತರಣೆ, ಹೆಚ್ಚುವರಿ ರೈಲು ಮಾರ್ಗಗಳ ನಿರ್ಮಾಣ, ಉಪನಗರ ಹಾಗೂ ದೂರ ಪ್ರಯಾಣದ ರೈಲುಗಳ ಸಂಚಾರ ಹೆಚ್ಚಿಸುವುದು, ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಸಂಪರ್ಕ ಸುಧಾರಿಸುವುದು ಸೇರಿದಂತೆ ಹಲವು ಯೋಜನೆಗಳಿಗೆ ಈ ಭೂಮಿ ಅಗತ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸುಮಾರು 5,200ರಿಂದ 5,300 ಚದರ ಮೀಟರ್ ಪ್ರದೇಶವನ್ನು ತೆರವುಗೊಳಿಸಲಾಗಿದೆ. ದಶಕಗಳಿಂದ ಅತಿಕ್ರಮಣಕ್ಕೊಳಗಾಗಿದ್ದ ಈ ಭೂಮಿಯ ಅಂದಾಜು ಮೌಲ್ಯ ಸುಮಾರು ₹600 ಕೋಟಿ ಎಂದು ಹೇಳಲಾಗಿದೆ. ಈ ಯೋಜನೆ ಪೂರ್ಣಗೊಂಡ ಬಳಿಕ 50ಕ್ಕೂ ಹೆಚ್ಚು ಹೆಚ್ಚುವರಿ ರೈಲು ಸೇವೆಗಳನ್ನು ಆರಂಭಿಸಲು ಸಾಧ್ಯವಾಗಲಿದ್ದು, ಉಪನಗರ ರೈಲು ಮಾರ್ಗಗಳ ದಟ್ಟಣೆ ಕಡಿಮೆಯಾಗಲಿದೆ ಎಂದು ರೈಲ್ವೆ ಇಲಾಖೆ ನಿರೀಕ್ಷಿಸಿದೆ.

9 ವರ್ಷಗಳ ಕಾನೂನು ಹೋರಾಟ

ಗರೀಬ್ ನಗರದಲ್ಲಿನ ತೆರವು ಪ್ರಕ್ರಿಯೆ ಹೊಸದಲ್ಲ. 2017ರಲ್ಲಿ ಪಶ್ಚಿಮ ರೈಲ್ವೆ ಸಾರ್ವಜನಿಕ ಆಸ್ತಿ ಕಾಯ್ದೆಯಡಿ ಮೊದಲ ಬಾರಿಗೆ ನಿವಾಸಿಗಳಿಗೆ ತೆರವು ನೋಟಿಸ್ ನೀಡಿತ್ತು. ರೈಲ್ವೆ ಭೂಮಿಯ ಮೇಲೆ ಅನಧಿಕೃತ ಕಟ್ಟಡಗಳು ನಿರ್ಮಾಣವಾಗಿದ್ದು, ಅವುಗಳನ್ನು ತೆರವುಗೊಳಿಸುವುದು ಅಗತ್ಯ ಎಂದು ಇಲಾಖೆ ವಾದಿಸಿತ್ತು.

ಆದರೆ ಸ್ಥಳೀಯ ನಿವಾಸಿಗಳು ಮತ್ತು ವಿವಿಧ ಸಂಘಟನೆಗಳು ಬಾಂಬೆ ಹೈಕೋರ್ಟ ಮೊರೆ ಹೋಗಿ ಕಾರ್ಯಾಚರಣೆಗೆ ತಡೆ ತಂದಿದ್ದವು. ಅನೇಕ ಕುಟುಂಬಗಳು ದಶಕಗಳಿಂದ ಅಲ್ಲೇ ವಾಸಿಸುತ್ತಿದ್ದೇವೆ, ಸರ್ಕಾರವೇ ವಿದ್ಯುತ್, ನೀರು ಹಾಗೂ ಇತರ ಮೂಲಸೌಕರ್ಯ ಒದಗಿಸಿದೆ, ಆಧಾರ್‌, ರೇಷನ್ ಕಾರ್ಡ್‌, ಮತದಾರರ ಗುರುತಿನ ಚೀಟಿ ಸೇರಿದಂತೆ ಎಲ್ಲಾ ದಾಖಲೆಗಳಿವೆ ಎಂದು ನ್ಯಾಯಾಲಯದಲ್ಲಿ ವಾದಿಸಿವೆ.

ಹಲವು ವರ್ಷಗಳ ವಿಚಾರಣೆ ಬಳಿಕ ಈ ವರ್ಷ ಏಪ್ರಿಲ್ 29ರಂದು ಬಾಂಬೆ ಹೈಕೋರ್ಟ ರೈಲ್ವೆ ಪರವಾಗಿ ಆದೇಶ ನೀಡಿತು. ರೈಲ್ವೆ ಭೂಮಿಯ ಮೇಲಿನ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ಅವಕಾಶ ನೀಡಿದ ನ್ಯಾಯಾಲಯ, 2021ರಲ್ಲಿ ನಡೆದ ಜಂಟಿ ಸಮೀಕ್ಷೆಯಲ್ಲಿ ಅರ್ಹರೆಂದು ಗುರುತಿಸಲಾದ ಕೆಲವು ಕುಟುಂಬಗಳಿಗೆ ಮಾತ್ರ ಸೀಮಿತ ರಕ್ಷಣೆ ನೀಡಿತು.

ನಂತರ ನಿವಾಸಿಗಳ ಕೆಲವು ಸಂಘಟನೆಗಳು ಸುಪ್ರೀಂ ಕೋರ್ಟ್ ಮೊರೆ ಹೋದರೂ, ಅಲ್ಲಿಯೂ ಮಧ್ಯಂತರ ತಡೆ ಸಿಗಲಿಲ್ಲ. ನ್ಯಾಯಾಲಯದ ಆದೇಶದ ಬೆನ್ನಲ್ಲೇ ರೈಲ್ವೆ ಇಲಾಖೆ ಭಾರಿ ಪೊಲೀಸ್ ಭದ್ರತೆಯೊಂದಿಗೆ ಕಾರ್ಯಾಚರಣೆ ಆರಂಭಿಸಿತು.

ಸಾವಿರಕ್ಕೂ ಹೆಚ್ಚು ಸಿಬ್ಬಂದಿ, ಭಾರೀ ಯಂತ್ರೋಪಕರಣ

ಕಾರ್ಯಾಚರಣೆಗೆ ಮುಂಬೈ ಪೊಲೀಸರು, ರೈಲ್ವೆ ಭದ್ರತಾ ಪಡೆ, ಸರ್ಕಾರಿ ರೈಲ್ವೆ ಪೊಲೀಸರು ಸೇರಿ 1,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪ್ರದೇಶವನ್ನು ಸಂಪೂರ್ಣವಾಗಿ ಸುತ್ತುವರಿಯಲಾಗಿತ್ತು.

ಹಲವು ಬುಲ್ಡೋಜರ್‌, ಪೊಕ್ಲೇನ್ ಯಂತ್ರ ಹಾಗೂ ಡಂಪರ್‌ಗಳ ಮೂಲಕ ಕಿರಿದಾದ ಬೀದಿಗಳಲ್ಲೂ ಮನೆಗಳನ್ನು ನೆಲಸಮಗೊಳಿಸಲಾಯಿತು. ಎರಡು ಹಾಗೂ ಮೂರು ಅಂತಸ್ತಿನ ಕಟ್ಟಡಗಳನ್ನು ನೆಲಸಮಗೊಳಿಸಲು ವಿಶೇಷ ಯಂತ್ರೋಪಕರಣಗಳನ್ನು ಬಳಸಲಾಯಿತು. ಬಾಂದ್ರಾ ನಿಲ್ದಾಣದ ಸುತ್ತಮುತ್ತ ರಸ್ತೆ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಕೆಲ ಕಡೆ ಪಾದಚಾರಿ ಮೇಲ್ಸೇತುವೆಗಳ ಪ್ರವೇಶವನ್ನೂ ನಿಯಂತ್ರಿಸಲಾಗಿತ್ತು.

ಮಂಗಳವಾರ ಆರಂಭವಾದ ಕಾರ್ಯಾಚರಣೆಯಲ್ಲಿ ಕೇವಲ 48 ಗಂಟೆಗಳಲ್ಲಿ 60% ಕ್ಕೂ ಹೆಚ್ಚು ಕಟ್ಟಡಗಳನ್ನು ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳೀಯರ ಪ್ರಕಾರ, ಮುಂಜಾನೆಲೇ ಅಧಿಕಾರಿಗಳು ಪ್ರದೇಶಕ್ಕೆ ಪ್ರವೇಶಿಸಿ ಜನರಿಗೆ ಸಾಮಾನು ಹೊರತೆಗೆದುಕೊಳ್ಳಲು ಅಲ್ಪ ಸಮಯ ಮಾತ್ರ ನೀಡಿದರು. ಕೆಲವರು ತಮ್ಮ ಮನೆಯಲ್ಲಿದ್ದ ದಾಖಲೆಗಳು, ಬಟ್ಟೆಗಳು ಹಾಗೂ ದಿನನಿತ್ಯದ ವಸ್ತುಗಳನ್ನು ಕೂಡ ಹೊರತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

ಮಸೀದಿ ತೆರವು ಬಳಿಕ ಉದ್ವಿಗ್ನತೆ

ಕಾರ್ಯಾಚರಣೆಯ ಎರಡನೇ ದಿನ ಪರಿಸ್ಥಿತಿ ತೀವ್ರ ಉದ್ವಿಗ್ನಗೊಂಡಿತು. ಸ್ಥಳೀಯರ ಪ್ರಕಾರ, ಹಲವು ವರ್ಷಗಳಷ್ಟು ಹಳೆಯ ಎರಡು ಮಸೀದಿಗಳ ಭಾಗ ತೆರವುಗೊಳಿಸಿದ ನಂತರ ಜನರು ಆಕ್ರೋಶಗೊಂಡರು. ಇದಾದ ಬಳಿಕ ನೂರಾರು ಮಂದಿ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.

ಕೆಲವರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಪರಿಣಾಮ ಪರಿಸ್ಥಿತಿ ನಿಯಂತ್ರಣ ತಪ್ಪಿತು. ಪೊಲೀಸರು ಲಾಠಿಚಾರ್ಜ್ ನಡೆಸಿ ಗುಂಪನ್ನು ಚದುರಿಸಿದರು. ಘಟನೆಯಲ್ಲಿ ಹಲವು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಲ್ಲು ತೂರಾಟ, ಗಲಭೆ ಹಾಗೂ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಹಲವರನ್ನು ಬಂಧಿಸಲಾಗಿದೆ. ಕನಿಷ್ಠ 10 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ.

ಬೀದಿಗೆ ಬಂದ ಸಾವಿರಾರು ಜನ

ತೆರವು ಕಾರ್ಯಾಚರಣೆಯಿಂದ ಸಾವಿರಾರು ಜನರು ಬೀದಿಗೆ ಬಂದಿದ್ದಾರೆ. ಮಹಿಳೆಯರು, ಮಕ್ಕಳು, ವೃದ್ಧರು ಹಾಗೂ ನವಜಾತ ಶಿಶುಗಳೊಂದಿಗೆ ಕುಟುಂಬಗಳು ರಸ್ತೆ ಬದಿಯಲ್ಲಿ ತಮ್ಮ ಸಾಮಾನುಗಳ ಜೊತೆ ಕುಳಿತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.

ವೈರಲ್ ಆದ ಹಲವು ವಿಡಿಯೊಗಳಲ್ಲಿ ಶಾಲಾ ಸಮವಸ್ತ್ರ ಧರಿಸಿದ್ದ ಮಕ್ಕಳು ಧ್ವಂಸವಾದ ಮನೆಗಳ ಎದುರು ಅಳುತ್ತಿರುವ ದೃಶ್ಯಗಳು ಕಂಡುಬಂದಿವೆ. ಕೆಲ ಕುಟುಂಬಗಳು ತೆರವುಗೊಳಿಸಿದ ಪ್ರದೇಶದ ಪಕ್ಕದಲ್ಲೇ ತಾತ್ಕಾಲಿಕ ತಾರ್ಪಾಲಿನ್ ಹಾಕಿಕೊಂಡು ಉಳಿದಿವೆ. ಇನ್ನೂ ಕೆಲವರು ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ.

ಮಳೆಗಾಲ ಕೆಲವೇ ದಿನಗಳಲ್ಲಿ ಆರಂಭವಾಗಲಿರುವುದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ಆಶ್ರಯವಿಲ್ಲದೆ ಮಕ್ಕಳು ಮತ್ತು ವೃದ್ಧರನ್ನು ಎಲ್ಲಿ ಕರೆದುಕೊಂಡು ಹೋಗಬೇಕು ಎಂಬ ಪ್ರಶ್ನೆ ಎದುರಾಗಿದೆ ಎಂದು ಹಲವರು ಅಳಲು ತೋಡಿಕೊಂಡಿದ್ದಾರೆ.

“ಕಾನೂನುಬಾಹಿರವಾಗಿರಲಿ, ಅವರು ಮಾನವರೇ”

ಬಾಂದ್ರಾ ಪೂರ್ವದಿಂದ ಪ್ರತಿದಿನ ಸಂಚರಿಸುವ ಸಾಫ್ಟ್ವೇರ್ ಎಂಜಿನಿಯರ್ ದೇವೇಶ್ ಕಾಂಬ್ಳೆ, ಆ ಪ್ರದೇಶದಲ್ಲಿ ಅಸ್ವಚ್ಛತೆ, ಅಪರಾಧ ಹಾಗೂ ಮಾದಕ ವ್ಯಸನಿಗಳ ಹಾವಳಿ ಸಾಮಾನ್ಯವಾಗಿತ್ತು. ಆದರೆ ಶಾಲಾ ಸಮವಸ್ತ್ರದಲ್ಲಿದ್ದ ಬಾಲಕಿಯರು ತಮ್ಮ ಮನೆಗಳು ಧ್ವಂಸವಾದ ಬಳಿಕ ರಸ್ತೆ ಬದಿಯಲ್ಲಿ ಕುಳಿತಿರುವ ದೃಶ್ಯ ಮನಕಲಕುವಂತಿದೆ ಎಂದು ಹೇಳಿದ್ದಾರೆ.

ಗರೀಬ್ ನಗರವು ಮುಂಬೈನ ಅತ್ಯಂತ ಹಳೆಯ ಹಾಗೂ ದಟ್ಟ ಕೊಳೆಗೇರಿ ಪ್ರದೇಶಗಳಲ್ಲಿ ಒಂದಾಗಿತ್ತು. ಎರಡು ಮತ್ತು ಮೂರು ಅಂತಸ್ತಿನ ಕಟ್ಟಡಗಳೂ ಇಲ್ಲಿ ನಿರ್ಮಾಣವಾಗಿದ್ದವು. ಅನೇಕ ಕುಟುಂಬಗಳು 40 ವರ್ಷಕ್ಕೂ ಹೆಚ್ಚು ಕಾಲ ಇಲ್ಲಿ ವಾಸಿಸುತ್ತಿದ್ದವು. ದಿನಗೂಲಿ ಕಾರ್ಮಿಕರು, ಸೇವಾ ವಲಯದ ಸಿಬ್ಬಂದಿ, ಮನೆ ಕೆಲಸದವರು ಹಾಗೂ ನಗರದ ಅನಿವಾರ್ಯ ಕಾರ್ಮಿಕ ವರ್ಗಕ್ಕೆ ಈ ಪ್ರದೇಶ ಆಶ್ರಯವಾಗಿತ್ತು.

ಸಾಮಾಜಿಕ ಕಾರ್ಯಕರ್ತ ಹಾಗೂ ಪತ್ರಕರ್ತ ಸಿರಾಜ್ ನೂರಾನಿ, ಕುಟುಂಬಗಳು ತಮ್ಮ ಮನೆಗಳು ಕುಸಿಯುತ್ತಿರುವುದನ್ನು ಕಣ್ಣಾರೆ ನೋಡುತ್ತಾ ತೆರೆಯಾದ ಜಾಗದಲ್ಲಿ ಕುಳಿತಿದ್ದವು ಎಂದು ಸಾಮಾಜಿಕ ಜಾಲತಾಣ Xನಲ್ಲಿ ಬರೆದಿದ್ದಾರೆ.

ಎನ್ಜಿಒಗಳು ಆಹಾರ, ನೀರು ಹಾಗೂ ಅಗತ್ಯ ನೆರವು ವಿತರಿಸುತ್ತಿದ್ದರೂ, ಅನೇಕ ಕುಟುಂಬಗಳು ತಾತ್ಕಾಲಿಕ ಆಶ್ರಯವಿಲ್ಲದೆ ಸಂಕಷ್ಟದಲ್ಲಿವೆ. ಕಾನೂನುಬಾಹಿರವಾಗಿರಲಿ ಅಥವಾ ಕಾನೂನುಬದ್ಧವಾಗಿರಲಿ, ಅವರು ಮಾನವರೇ ಎಂಬ ಪ್ರತಿಕ್ರಿಯೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಈದ್ ಮುನ್ನ ಕಾರ್ಯಾಚರಣೆಗೆ ಆಕ್ರೋಶ

ಈದ್ ಹಬ್ಬ ಸಮೀಪಿಸುತ್ತಿರುವ ಸಂದರ್ಭದಲ್ಲೇ ಕಾರ್ಯಾಚರಣೆ ಆರಂಭಿಸಿದ್ದಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಬ್ಬಕ್ಕೆ ಬೇಕಾದ ಸಾಮಾನು ಖರೀದಿ, ಮನೆ ಸ್ವಚ್ಛತೆ ಹಾಗೂ ಸಿದ್ಧತೆ ನಡೆಯುತ್ತಿದ್ದ ವೇಳೆಯೇ ಬುಲ್ಡೋಜರ್‌ಗಳೊಂದಿಗೆ ಅಧಿಕಾರಿಗಳು ಬಂದಿದ್ದಾರೆ ಎಂದು ಹಲವರು ಹೇಳಿದ್ದಾರೆ.

ಈ ಪ್ರದೇಶದಲ್ಲಿ ಮುಸ್ಲಿಂ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಕೆಲ ಮಹಿಳೆಯರು ಬಿಜೆಪಿ ಸರ್ಕಾರ ಗರೀಬಿ ಬದಲು ಗರೀಬ್ ಅನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ.

ಬೆಂಬಲವೂ ವ್ಯಕ್ತ

ಇನ್ನೊಂದೆಡೆ, ಸ್ಥಳೀಯ ಪ್ರಯಾಣಿಕರು ಹಾಗೂ ಕೆಲ ನಾಗರಿಕರು ಈ ಕ್ರಮವನ್ನು ಸ್ವಾಗತಿಸಿದ್ದಾರೆ. ಅತಿಕ್ರಮಣಗಳ ಕಾರಣದಿಂದ ಬೆಸ್ಟ್ ಬಸ್ ಸಂಚಾರಕ್ಕೂ ತೊಂದರೆ ಉಂಟಾಗುತ್ತಿತ್ತು. ಆ ಪ್ರದೇಶದಲ್ಲಿ ಸಂಚರಿಸುವುದು ಅಸುರಕ್ಷಿತವಾಗಿತ್ತು ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಇದು ವರ್ಷಗಳಿಂದ ಬಾಕಿ ಇದ್ದ ತೆರವು ಕಾರ್ಯಾಚರಣೆ. ಕೊನೆಗೂ ನ್ಯಾಯಾಲಯ ಅನುಮತಿ ನೀಡಿದೆ ಎಂದು ಕೆಲವರು ಹೇಳಿದ್ದಾರೆ. ಸಮಾಜವಿರೋಧಿ ಚಟುವಟಿಕೆಗಳು ಹಾಗೂ ಮಾದಕ ವ್ಯಸನಿಗಳ ಹಾವಳಿ ಹೆಚ್ಚಾಗಿತ್ತು ಎಂಬ ಆರೋಪಗಳೂ ಕೇಳಿಬಂದಿವೆ.

ಸುನಿಲ್ ದತ್ ನೆನಪು

ಈ ಘಟನೆಯೊಂದಿಗೆ ದಿವಂಗತ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಂಸದ ಸುನಿಲ್ ದತ್ ಅವರನ್ನು ಹಲವರು ನೆನಪಿಸಿಕೊಂಡಿದ್ದಾರೆ. ಹಿಂದೆ ಇದೇ ಪ್ರದೇಶದಲ್ಲಿ ನಡೆದ ತೆರವು ಕಾರ್ಯಾಚರಣೆಯನ್ನು ತಡೆಯಲು ಅವರು ಬುಲ್ಡೋಜರ್ ಮುಂದೆ ಮಲಗಿದ್ದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗಿದೆ.

ರೈಲ್ವೆಯ ಮುಂದಿನ ಯೋಜನೆ

ಮರು ಅತಿಕ್ರಮಣವಾಗದಂತೆ ತೆರವುಗೊಳಿಸಿದ ಪ್ರದೇಶಕ್ಕೆ ಬೇಲಿ ಹಾಕಲು ಪಶ್ಚಿಮ ರೈಲ್ವೆ ಯೋಜಿಸಿದೆ. 2021ರ ಸಮೀಕ್ಷೆಯ ಪ್ರಕಾರ ಅರ್ಹತೆ ಹೊಂದಿರುವ ಸುಮಾರು 100 ಕುಟುಂಬಗಳಿಗೆ ಪುನರ್ವಸತಿ ಒದಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈಲ್ವೆ ಅಧಿಕಾರಿಗಳ ಪ್ರಕಾರ, ಈ ಪ್ರದೇಶದ ಅಕ್ರಮ ಕಟ್ಟಡಗಳು ರೈಲು ಹಳಿ, ಮೇಲ್ದರ್ಜೆಯ ವಿದ್ಯುತ್ ತಂತಿ ಹಾಗೂ ಭದ್ರತಾ ವಲಯದ ಅತೀ ಸಮೀಪ ನಿರ್ಮಾಣವಾಗಿದ್ದವು. ಕೆಲವು ಕಟ್ಟಡಗಳು ಪಾದಚಾರಿ ಮೇಲ್ಸೇತುವೆಗಳಿಗಿಂತಲೂ ಎತ್ತರಕ್ಕೆ ಬೆಳೆದಿದ್ದವು. ಭವಿಷ್ಯದಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಇದ್ದು, ರೈಲು ಸಂಚಾರಕ್ಕೂ ಅಡ್ಡಿಯಾಗುತ್ತಿತ್ತು. ಆದ್ದರಿಂದ ನ್ಯಾಯಾಲಯದ ಆದೇಶದಂತೆ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST