ಹೊಸದಿಲ್ಲಿ, ಸೆ. 9 : ಸೌದಿ ಅರೇಬಿಯಾದ ವಿವಿಧ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಯೆಮನ್ನ ಹೌತಿ ಬಂಡುಕೋರರು ನಡೆಸಿರುವ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಭಾರತ ತೀವ್ರವಾಗಿ ಖಂಡಿಸಿದೆ. ನಾಗರಿಕ ಪ್ರದೇಶಗಳು, ಇಂಧನ ಮೂಲಸೌಕರ್ಯ ಹಾಗೂ ಅಂತಾರಾಷ್ಟ್ರೀಯ ಸಾಗರ ವ್ಯಾಪಾರ ಮಾರ್ಗಗಳ ಸುರಕ್ಷತೆಗೆ ಅಪಾಯ ಉಂಟುಮಾಡುವ ದಾಳಿಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.
ಕೆಂಪು ಸಮುದ್ರ ಮತ್ತು ಸುತ್ತಮುತ್ತಲಿನ ಜಲಮಾರ್ಗಗಳಲ್ಲಿ ಸುರಕ್ಷಿತ ಹಾಗೂ ಅಡೆತಡೆಯಿಲ್ಲದ ನೌಕಾಯಾನ ಅತ್ಯಂತ ಮಹತ್ವದ್ದಾಗಿದ್ದು, ನೌಕಾಯಾನ ಸ್ವಾತಂತ್ರ್ಯಕ್ಕೆ ಬೆದರಿಕೆ ಒಡ್ಡುವ ಕೃತ್ಯಗಳು ಜಾಗತಿಕ ವ್ಯಾಪಾರ ಮತ್ತು ಇಂಧನ ಪೂರೈಕೆ ಮೇಲೂ ಪರಿಣಾಮ ಬೀರುತ್ತವೆ ಎಂದು ಭಾರತ ಕಳವಳ ವ್ಯಕ್ತಪಡಿಸಿದೆ.
ದಾಳಿಗಳ ಪರಿಣಾಮ ಸೌದಿ ಅರೇಬಿಯಾದ ಕೆಲವು ತೈಲ ಘಟಕಗಳು ಹಾಗೂ ಇಂಧನ ಸ್ಥಾವರಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಾರ್ಯಾಚರಣೆಗಳಿಗೆ ತಾತ್ಕಾಲಿಕ ಅಡ್ಡಿಯುಂಟಾಗಿದೆ ಎಂದು ವರದಿಯಾಗಿದೆ. ಈ ಬೆಳವಣಿಗೆ ಪ್ರಮುಖ ಇಂಧನ ಮೂಲಸೌಕರ್ಯ ಹಾಗೂ ಸಾಗರ ವ್ಯಾಪಾರ ಮಾರ್ಗಗಳ ಸುರಕ್ಷತೆಯ ಬಗ್ಗೆ ಮತ್ತೆ ಆತಂಕ ಮೂಡಿಸಿದೆ.
ಯೆಮನ್ನಲ್ಲಿರುವ ಸೌದಿ ನೇತೃತ್ವದ ಮೈತ್ರಿಕೂಟದ ವಕ್ತಾರ ಮೇಜರ್ ಜನರಲ್ ತುರ್ಕಿ ಅಲ್-ಮಾಲಿಕಿ, ಹೌತಿಗಳ ದಾಳಿಯಲ್ಲಿ ನಾಗರಿಕ ಮತ್ತು ಆರ್ಥಿಕ ತಾಣಗಳನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ. ಇದನ್ನು ಅಪಾಯಕಾರಿ ಉಲ್ಬಣ ಎಂದು ಬಣ್ಣಿಸಿರುವ ಮೈತ್ರಿಕೂಟ, ಸೂಕ್ತ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಸಿದೆ.
ಮತ್ತೊಂದೆಡೆ, ಸೌದಿ ಅರೇಬಿಯಾ ನಡೆಸಿದ ಇತ್ತೀಚಿನ ವಾಯುದಾಳಿಗಳಿಗೆ ಪ್ರತಿಯಾಗಿ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಲಾಗಿದೆ ಎಂದು ಹೌತಿಗಳು ಸಮರ್ಥಿಸಿಕೊಂಡಿದ್ದಾರೆ. ಹೌತಿ ಪಡೆಗಳ ವಕ್ತಾರ ಯಹ್ಯಾ ಸರಿಯಾ ಪ್ರಕಾರ, ಯೆಮನ್ನ ಮಾರಿಬ್, ಅಲ್-ಬೈದಾ, ಹುದೈದಾ, ತೈಜ್ ಮತ್ತು ಜೌಫ್ ಪ್ರಾಂತ್ಯಗಳಲ್ಲಿ ಮೂರು ದಿನಗಳಲ್ಲಿ ಸೌದಿ ಪಡೆಗಳು 120ಕ್ಕೂ ಹೆಚ್ಚು ವಾಯುದಾಳಿಗಳನ್ನು ನಡೆಸಿವೆ.
ಇದಕ್ಕೆ ಪ್ರತಿಯಾಗಿ ಹತ್ತಾರು ಕ್ಷಿಪಣಿಗಳು ಮತ್ತು ಮಾನವರಹಿತ ವೈಮಾನಿಕ ಸಾಧನಗಳನ್ನು ಬಳಸಿ ಸೌದಿ ಅರೇಬಿಯಾದ ವಿವಿಧ ತಾಣಗಳ ಮೇಲೆ ದಾಳಿ ನಡೆಸಲಾಗಿದ್ದು, ಹೆಚ್ಚಿನ ಹಾನಿಯಾಗಿದೆ ಎಂದು ಹೌತಿಗಳು ಹೇಳಿಕೊಂಡಿದ್ದಾರೆ. ಆದರೆ ಈ ಹೇಳಿಕೆಗೆ ಸ್ವತಂತ್ರ ದೃಢೀಕರಣ ಲಭ್ಯವಾಗಿಲ್ಲ.
ಸೌದಿ ಅರೇಬಿಯಾ ಮತ್ತು ಹೌತಿಗಳ ನಡುವಿನ ದಾಳಿ–ಪ್ರತಿದಾಳಿಗಳು ಮತ್ತಷ್ಟು ತೀವ್ರಗೊಂಡರೆ ಪಶ್ಚಿಮ ಏಷ್ಯಾದ ಪರಿಸ್ಥಿತಿ ಮತ್ತಷ್ಟು ಸಂಕೀರ್ಣಗೊಳ್ಳುವುದರ ಜತೆಗೆ ಜಾಗತಿಕ ಇಂಧನ ಪೂರೈಕೆ ಮತ್ತು ಸರಕು ಸಾಗಣೆ ಮೇಲೂ ಪರಿಣಾಮ ಬೀರುವ ಆತಂಕ ಎದುರಾಗಿದೆ.