LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

ನಾಪತ್ತೆ ಎಂಜಿನಿಯರ್ ಸುಳಿವು ಭೋಪಾಲ್‌ನಲ್ಲಿ ಪತ್ತೆ

ಗದಗ, ಸೆ. 30 : (ಸಮದರ್ಶಿ ಸುದ್ದಿ) - ಕಳೆದ 18 ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿರುವ ಗದಗ ಕೆಆರ್‌ಐಡಿಎಲ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪರ್ವೀಜ್ ಅವರ ಪತ್ತೆ ಕಾರ್ಯದಲ್ಲಿ ಪೊಲೀಸರಿಗೆ ಮಹತ್ವದ ಸುಳಿವು ಲಭಿಸಿದೆ. ಮೊಬೈಲ್ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದ್ದರೂ ಸಿಸಿಟಿವಿ ದೃಶ್ಯಗಳ ಜಾಡು ಹಿಡಿದ ಪೊಲೀಸರು ಅವರ ಪ್ರಯಾಣದ ಹಾದಿಯನ್ನು ಪತ್ತೆಹಚ್ಚಿದ್ದು, ಮಧ್ಯಪ್ರದೇಶದ ಭೋಪಾಲ್ ರೈಲು ನಿಲ್ದಾಣದಲ್ಲಿ ಅವರು ಕಾಣಿಸಿಕೊಂಡಿರುವ ದೃಶ್ಯಗಳು ಲಭ್ಯವಾಗಿವೆ.

ಆರಂಭಿಕ ತನಿಖೆಯಲ್ಲಿ ಪರ್ವೀಜ್ ಅವರ ಮೊಬೈಲ್‌ನ ಕೊನೆಯ ನೆಟ್‌ವರ್ಕ್ ಲೋಕೇಷನ್ ಆಂಧ್ರಪ್ರದೇಶದ ವಿಜಯವಾಡದಲ್ಲಿ ಪತ್ತೆಯಾಗಿತ್ತು. ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಅವರ ಚಲನವಲನವನ್ನು ನೇರವಾಗಿ ಪತ್ತೆಹಚ್ಚುವುದು ಪೊಲೀಸರಿಗೆ ಸವಾಲಾಗಿತ್ತು.

ಈ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗ ಅನುಸರಿಸಿದ ಗದಗ ಪೊಲೀಸರು ವಿವಿಧ ಪ್ರದೇಶಗಳ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸುತ್ತಾ ಅವರ ಪ್ರಯಾಣದ ಜಾಡು ಹಿಡಿದಿದ್ದಾರೆ. ವಿಜಯವಾಡದಿಂದ ಭೋಪಾಲ್‌ವರೆಗಿನ ಸುಮಾರು 1,200 ಕಿ.ಮೀ. ವ್ಯಾಪ್ತಿಯ ವಿವಿಧ ಸ್ಥಳಗಳ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಬಳಿಕ ಮಹತ್ವದ ಸುಳಿವು ದೊರೆತಿದೆ ಎನ್ನಲಾಗಿದೆ.

ಭೋಪಾಲ್ ರೈಲು ನಿಲ್ದಾಣ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಪರ್ವೀಜ್ ಸಂಚರಿಸುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ. ಮೊಬೈಲ್ ಸಂಪರ್ಕ ಇಲ್ಲದಿರುವುದರಿಂದ ಈ ದೃಶ್ಯಗಳೇ ಸದ್ಯ ಅವರ ಪತ್ತೆ ಕಾರ್ಯಕ್ಕೆ ಪ್ರಮುಖ ಆಧಾರವಾಗಿವೆ.

ಪರ್ವೀಜ್ ವಿಜಯವಾಡದಿಂದ ಮುಂದಿನ ಪ್ರಯಾಣ ಕೈಗೊಂಡಿರುವುದು ತನಿಖೆಯಲ್ಲಿ ಗೊತ್ತಾಗಿದ್ದು, ಅಲ್ಲಿಂದ ಭೋಪಾಲ್ ತಲುಪಿರುವ ಜಾಡನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಆದರೆ, ಅವರು ಭೋಪಾಲ್‌ನಿಂದ ಮುಂದೆ ಎಲ್ಲಿಗೆ ತೆರಳಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಮತ್ತಷ್ಟು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ.

ಪರ್ವೀಜ್ ಪತ್ತೆಗಾಗಿ ಗದಗ ಪೊಲೀಸರ ತಂಡ ಭೋಪಾಲ್‌ನಲ್ಲಿ ಶೋಧ ಕಾರ್ಯ ಮುಂದುವರಿಸಿದೆ. ರೈಲು ನಿಲ್ದಾಣ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿನ ಅವರ ಚಲನವಲನದ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಪರ್ವೀಜ್ ಸುರಕ್ಷಿತವಾಗಿದ್ದಾರೆಯೇ, ಅವರು ನಾಪತ್ತೆಯಾಗಲು ಕಾರಣವೇನು ಹಾಗೂ ಅವರ ಮುಂದಿನ ಪ್ರಯಾಣದ ಉದ್ದೇಶವೇನು ಎಂಬ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ. ಸದ್ಯ ಸಿಸಿಟಿವಿಯಲ್ಲಿ ಅವರ ಜಾಡು ದೊರೆತಿರುವುದು ತನಿಖೆಗೆ ಮಹತ್ವದ ತಿರುವು ನೀಡಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST