ಹೊಸದಿಲ್ಲಿ, ಜೂ. 5 : ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 100ಕ್ಕೆ ಕುಸಿದರೂ ಆತಂಕ ಪಡುವ ಅಗತ್ಯವಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕ ಸಲಹಾ ಮಂಡಳಿಯ ಸದಸ್ಯೆ ಶಮಿಕಾ ರವಿ ಅವರ ಹೇಳಿಕೆ ಆರ್ಥಿಕ ಮತ್ತು ರಾಜಕೀಯ ವಲಯಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಎಎನ್‌ಐ ಪಾಡ್‌ಕಾಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಅವರು, ಡಾಲರ್ ಎದುರು ರೂಪಾಯಿ ಮೌಲ್ಯ 100 ತಲುಪಿದರೆ ಅದು ಕೇವಲ ಒಂದು ಸಂಖ್ಯೆಯಷ್ಟೇ ಎಂದು ಹೇಳಿದ್ದರು. ವಿನಿಮಯ ದರವನ್ನು ಮಾರುಕಟ್ಟೆಯ ಶಕ್ತಿಗಳೇ ನಿರ್ಧರಿಸಬೇಕು ಮತ್ತು ಕರೆನ್ಸಿಯ ಮೌಲ್ಯವನ್ನು ಕೃತಕವಾಗಿ ನಿಯಂತ್ರಿಸಲು ಸರಕಾರ ಅಥವಾ ಭಾರತೀಯ ರಿಸರ್ವ್ ಬ್ಯಾಂಕ್ ನಿರಂತರವಾಗಿ ಮಧ್ಯಪ್ರವೇಶಿಸಬಾರದು ಎಂದು ಅಭಿಪ್ರಾಯಪಟ್ಟಿದ್ದರು.
ಆದರೆ ಈ ಹೇಳಿಕೆಗೆ ಆಕ್ಷೇಪ ವ್ಯಕ್ತವಾಗಿದ್ದು, ರೂಪಾಯಿ ಮೌಲ್ಯ ಕುಸಿತವನ್ನು ಕೇವಲ ಸಂಖ್ಯೆಯಾಗಿ ನೋಡುವುದು ವಾಸ್ತವ ಪರಿಸ್ಥಿತಿಯನ್ನು ಕಡೆಗಣಿಸಿದಂತಾಗಿದೆ ಎಂದು ಟೀಕಾಕಾರರು ಅಭಿಪ್ರಾಯಪಟ್ಟಿದ್ದಾರೆ. ರೂಪಾಯಿ ದುರ್ಬಲಗೊಂಡರೆ ಕಚ್ಚಾ ತೈಲ ಸೇರಿದಂತೆ ಆಮದು ವಸ್ತುಗಳ ವೆಚ್ಚ ಹೆಚ್ಚಾಗಲಿದ್ದು, ಅದರ ಪರಿಣಾಮವಾಗಿ ಇಂಧನ ದರ, ಸಾರಿಗೆ ವೆಚ್ಚ ಹಾಗೂ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅವರು ಸೂಚಿಸಿದ್ದಾರೆ.
ಭಾರತ ತನ್ನ ಕಚ್ಚಾ ತೈಲ ಅಗತ್ಯಗಳ ಬಹುಪಾಲನ್ನು ಆಮದು ಮಾಡಿಕೊಳ್ಳುತ್ತಿರುವ ಕಾರಣ ರೂಪಾಯಿ ಮೌಲ್ಯದ ಕುಸಿತ ನೇರವಾಗಿ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ. ವಿದೇಶಗಳಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು, ವಿದೇಶ ಪ್ರವಾಸಿಗರು ಹಾಗೂ ಆಮದು ಆಧಾರಿತ ಕೈಗಾರಿಕೆಗಳ ಮೇಲೂ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಶಮಿಕಾ ರವಿ ಅವರು ವಿನಿಮಯ ದರವನ್ನು ಪ್ರೆಶರ್ ಕುಕ್ಕರ್‌ನ ಸುರಕ್ಷತಾ ಕವಾಟಕ್ಕೆ ಹೋಲಿಸಿ, ಆರ್ಥಿಕತೆಯಲ್ಲಿನ ಒತ್ತಡಗಳನ್ನು ಹೊರಹಾಕಲು ಕರೆನ್ಸಿ ಮೌಲ್ಯದ ಹೊಂದಾಣಿಕೆ ಅಗತ್ಯ ಎಂದು ವಾದಿಸಿದ್ದರು. ಆದರೆ ರೂಪಾಯಿ ನಿರಂತರವಾಗಿ ದುರ್ಬಲಗೊಳ್ಳುತ್ತಿರುವ ಸಂದರ್ಭದಲ್ಲಿ ಅದನ್ನು ಸಾಮಾನ್ಯ ಬೆಳವಣಿಗೆಯಂತೆ ಬಿಂಬಿಸುವುದು ಸೂಕ್ತವಲ್ಲ ಎಂದು ಕೆಲ ಆರ್ಥಿಕ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.