ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬೆಂಗಳೂರು-ಬೆಳಗಾವಿ ಬಸ್ ನಲ್ಲಿ ನಿರ್ಭಯಾ ತರಹದ ಪ್ರಕರಣ; ಗಾಯಗೊಂಡಿದ್ದ ಯುವತಿಯ ಸಾವು

ಬೆಳಗಾವಿ : ಬೆಂಗಳೂರಿನ ಕಾಲ್ ಸೆಂಟರೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ 19 ವರ್ಷದ ಯುವತಿ ನಿನ್ನೆ ಬುಧವಾರ ಮುಂಜಾನೆ ರಾಜ್ಯದ ಅತ್ಯಂತ ಪ್ರತಿಷ್ಠಿತ ಎನ್ನಲಾಗುವ ಖಾಸಗಿ ಬಸ್ ನಲ್ಲಿ ಬೆಂಗಳೂರಿನಿಂದ ಅರೆ ಪ್ರಜ್ಞಾವಸ್ಥೆಯಲ್ಲಿ ಬೆಳಗಾವಿ ತಲುಪಿದ್ದು ಇಂದು ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾಳೆ.

ಆಕೆಯ ತಲೆಯ ಎರಡು-ಮೂರು ಕಡೆ ಗಾಯಗಳಾಗಿದ್ದು ಮತ್ತು ಮುಖದ ಮೇಲೆ ಕಚ್ಚಿದ ಗಾಯಗಳು ಕಂಡು ಬಂದಿದೆ. ಆದರೆ ಆಕೆಯ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ತಿಳಿದು ಬಂದಿದೆ.

ಅತ್ಯಾಚಾರವಾಗಿದ್ದರೆ ಇದು ಇನ್ನೊಂದು ದೆಹಲಿಯ ಅರೆ ವೈದ್ಯಕೀಯ ವಿದ್ಯಾರ್ಥಿನಿ ನಿರ್ಭಯಾ ಮಾದರಿಯ ಪ್ರಕರಣವಾಗುತ್ತಿತ್ತು.

ಬೆಳಗಾವಿಗೆ ಬರಲು ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ರಾಜ್ಯದ ಪ್ರತಿಷ್ಠಿತ ಖಾಸಗಿ ಬಸ್ ಹತ್ತಿದ್ದಳು. ಆಗ ಅವರು ಸಾಮಾನ್ಯ ಸ್ಥಿತಿಯಲ್ಲಿರದೇ ಅರೆ ಪ್ರಜ್ಞಾವಸ್ತೆಯಲ್ಲಿದ್ದಳು. ಅದೇ ಸ್ಥಿತಿಯಲ್ಲಿ ತಮ್ಮ ಪಾಲಕರೊಂದಿಗೆ ಮಾತನಾಡಿ ಫೋನ್ ಸ್ವಿಚ್ಡ್ ಆಫ್ ಮಾಡಿದ್ದಾಳೆ. ಬಸ್ ಮುಂಜಾನೆ ಹುಬ್ಬಳ್ಳಿ ತಲುಪಿ ಅಲ್ಲಿಂದ ಬೆಳಗಾವಿ ಕಡೆ ಹೊರಟಾಗ ಬಸ್ಸಿನಲ್ಲಿ ಚಾಲಕ, ನಿರ್ವಾಹಕ ಮತ್ತು ನಾಲ್ವರು ಪ್ರಯಾಣಿಕರು ಮಾತ್ರ ಇದ್ದರು.

ಬೆಳಗಾವಿ ಆರ್ ಟಿ ಓ ಕಚೇರಿ ತಲುಪಿದ ನಂತರ ವ್ಯಕ್ತಿಯೋರ್ವ ಆಕೆಯನ್ನು ರಿಕ್ಷಾವೊಂದರಲ್ಲಿ ಬೆಳಗಾವಿ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬಂದು ದಾಖಲು ಮಾಡಿದ್ದ. ಆದರೆ ಮುಖ, ತಲೆಯ ಮೇಲೆ ಗಾಯಗಳಾಗಿರುವದನ್ನು ಕಂಡು ಇದು "ಎಂಎಲ್ ಸಿ ಕೇಸ್" ಆದ್ದರಿಂದ ಅವರನ್ನು ಕರೆದುಕೊಂಡು ಬಂದ ವ್ಯಕ್ತಿಗೆ ಕೇಸ್ ಪೇಪರ್ ಮೇಲೆ ಸಹಿ ಮಾಡಲು ಸೂಚಿಸಿದಾಗ ಆತ ತನ್ನ ಬಳಿಯಲ್ಲಿದ್ದ ಯುವತಿಯ ಸ್ವಿಚ್ಡ್ ಆಫ್ ಮಾಡಿದ್ದ ಫೋನ್ ಆನ್ ಮಾಡಿ ಬೈಲಹೊಂಗಲನಲ್ಲಿದ್ದ ಯುವತಿಯ ತಂದೆಗೆ ವಿಷಯ ತಿಳಿಸಿದ್ದಾರೆ. ಪುನಃ ಫೋನ್ ಆಫ್ ಮಾಡಿ ಆತ ಹೋದವ ಮರಳಿ ಬಂದಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ವಿಷಯ ತಿಳಿದು ಆಸ್ಪತ್ರೆಗೆ ಧಾವಿಸಿ ಬಂದ ಯುವತಿಯ ಪಾಲಕರು ಮತ್ತು ಕುಟುಂಬದ ಸದಸ್ಯರು ನಗರದ ಖಾಸಗಿ ಆಸ್ಪತ್ರೆಗೆ ಆಕೆಯನ್ನು ಸ್ಥಳಾಂತರಿಸಿದರು. ಆದರೆ ಚಿಕಿತ್ಸೆ ಫಲ ಕಾಣದೇ ಗುರುವಾರ ಮುಂಜಾನೆ ಮೃತಳಾದಳು.

ಅತ್ಯಾಚಾರವಾಗಿಲ್ಲ
ಮೃತ ಯುವತಿಯ ಮೇಲೆ ಅತ್ಯಾಚಾರವಾಗಿಲ್ಲ. ಆದರೆ ಮುಖದ ಮತ್ತು ತುಟಿಗಳ ಮೇಲೆ ಕಚ್ಚಿದ ಗುರುತುಗಳಿವೆ, ಅಲ್ಲದೇ ತಲೆಯ ಎರಡು ಕಡೆ ಗಾಯಗಳಾಗಿವೆ. ಯುವತಿ ಪ್ರಜ್ಞೆ ಕಳೆದುಕೊಳ್ಳಲು ತಲೆಗಾದ ಗಾಯ ಬಹಳಷ್ಟು ಕಾರಣವಾಗಿವೆ. ಗಾಯವಾಗಿ ಎಷ್ಟು ಹೊತ್ತಾಗಿದೆ ಎಂಬುವುದು ಮರಣೋತ್ತರ ವರದಿ ಬಂದ ನಂತರವಷ್ಟೇ ತಿಳಿಯಲು ಸಾಧ್ಯವೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಗೋವಾಗೆ ತೆರಳಿದ್ದಳು

ಪ್ರಕರಣದ ಕುರಿತು ಪ್ರಾಥಮಿಕವಾಗಿ ಲಭ್ಯವಿದ್ದ ಮಾಹಿತಿ "ಸಮದರ್ಶಿ"ಗೆ ತಿಳಿಸಿದ ಮಾರ್ಕೆಟ್ ಪೊಲೀಸ್ ವಿಭಾಗದ ಎಸಿಪಿ ಎನ್ ವಿ ಭರಮನಿ ಅವರು, ಬೆಂಗಳೂರಿನಲ್ಲಿದ್ದ ಯುವತಿ ಪಾಲಕರಿಗೆ ತಿಳಿಸದೇ ಯುವಕನೊಬ್ಬನೊಂದಿಗೆ ಗೋವಾಗೆ ತೆರಳಿದ್ದಳು. ಆ ಯುವಕ ಬಹುಷಃ ಯುವತಿಯ ಪ್ರೇಮಿಯಾಗಿದ್ದೀರಬಹುದು. ಸೋಮವಾರ ಮುಂಜಾನೆ ಪುನಃ ಬೆಂಗಳೂರಿಗೆ ಹಿಂದಿರುಗಿದ್ದ ಯುವತಿ ತೀರಾ ಖಿನ್ನರಾಗಿದ್ದಳು.

ಅದೇ ದಿನ ರಾತ್ರಿ ಬೆಳಗಾವಿಗೆ ತೆರಳಲು ಖಾಸಗಿ ಬಸ್ ನಿಲ್ದಾಣದ ಪಿಕ್ ಅಪ್ ಪಾಯಿಂಟ್ ಗೆ ಬಂದು ನಿಯಂತ್ರಣ ತಪ್ಪಿ ಕೆಳಗೆ ಬಿದ್ದಳು. ಅರೆ ಪ್ರಜ್ಞಾವಸ್ತೆಯಲ್ಲಿದ್ದ ಆಕೆಯನ್ನು ಹತ್ತಿರದಲ್ಲಿದ್ದವರು ಬಸ್ ಹತ್ತಿಸಿದ್ದರು. ಆಗ ಬೈಲಹೊಂಗಲನಲ್ಲಿದ್ದ ತಮ್ಮ ಪಾಲಕರಿಗೆ ಫೋನ್ ಮಾಡಿ ತಾವು ಬರುತ್ತಿರುವ ವಿಷಯ ತಿಳಿಸಿ ಫೋನ್ ಆಫ್ ಮಾಡಿದ್ದಾರೆ ಎಂದು ಭರಮನಿ ತಿಳಿಸಿದರು.

ಬೆಳಗಾವಿ ಆರ್ ಟಿ ಓ ಸರ್ಕಲ್ ನಲ್ಲಿ ಯುವತಿಯನ್ನು ಬಸ್ಸಿನಿಂದ ಇಳಿಸಿಕೊಂಡು ರಿಕ್ಷಾದಲ್ಲಿ ಜಿಲ್ಲಾ ಆಸ್ಪತ್ರೆ ಗೆ ಸೇರಿಸಿ, ಯುವತಿಯ ಸ್ವಿಚ್ ಆಫ್ ಆದ ಫೋನ್ ಪುನಃ ಆನ್ ಮಾಡಿ ಅವಳ ತಂದೆಗೆ ಫೋನ್ ಮಾಡಿ ವಿಷಯ ತಿಳಿಸಿ ಮತ್ತೇ ಆಫ್ ಮಾಡಿ ಹೋದವ ಯುವತಿಯ ಆ ಪ್ರೇಮಿಯೇ ಇರಬೇಕೆಂದು ತೋರುತ್ತದೆ, ಆತನ ಪತ್ತೆ ಕಾರ್ಯ ಮುಂದುವರೆದಿದೆ. ಅವನು ಸಿಕ್ಕ ಮೇಲೇ ಎಲ್ಲ ಪ್ರಶ್ನೆಗಳಿಗೆ ಉತ್ತರ ದೊರೆಯಲಿದೆ ಎಂದು ಅವರು ತಿಳಿಸಿದರು.

ಸೂಕ್ತ ಕ್ರಮ ಜರುಗಿಸಿ

ಆಸ್ಪತ್ರೆ ಆವರಣದಲ್ಲಿ ಮಾತನಾಡಿದ ಯುವತಿಯ ತಂದೆಯು ತಮ್ಮ ಮಗಳ ಮೇಲೆ ಯಾರಿಂದಲೋ ಖಂಡಿತವಾಗಿ ಅತ್ಯಾಚಾರವಾಗಿದೆ. ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ತನ್ನ ಪುತ್ರಿ ಅತ್ಯಂತ ಮುಗ್ಧಳಾಗಿದ್ದಳು, ಉತ್ತಮ ನಡತೆಯ ಸೌಮ್ಯ ಸ್ವಭಾವದ ಆಕೆ ಪಿಯುಸಿ ಮುಗಿಸಿದ್ದಳು. 19 ವರ್ಷದ ಆಕೆ ಒಂದು ತಿಂಗಳ ಹಿಂದೆಯಷ್ಟೇ ಬೆಂಗಳೂರಿಗೆ ಹೋಗಿದ್ದಳು ಎಂದು ಯುವತಿಯ ತಾಯಿ ಗೋಗರಿಯುತ್ತ ವಿವರಿಸಿದರು.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.