LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ನಾಯಕತ್ವ ಬದಲಾವಣೆ ಬಗ್ಗೆ ತೀರ್ಮಾನ ಆಗಿಲ್ಲ, ಊಹಾಪೋಹಗಳಿಗೆ ಕಿವಿಗೊಡಬೇಡಿ : ಸುರ್ಜೆವಾಲ

ಬೆಂಗಳೂರು, ಮೇ 27 : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಹಾಗೂ ನಾಯಕತ್ವ ಪರಿವರ್ತನೆ ಕುರಿತು ಹರಿದಾಡುತ್ತಿರುವ ಊಹಾಪೋಹಗಳಿಗೆ ಕಾಂಗ್ರೆಸ್ ಹೈಕಮಾಂಡ್ ಸದ್ಯಕ್ಕೆ ಯಾವುದೇ ಮಹತ್ವ ನೀಡಿಲ್ಲ. ಈ ಕುರಿತು ಪಕ್ಷ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಸ್ಪಷ್ಟಪಡಿಸಿದ್ದಾರೆ.

ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಸಭೆ ಹಾಗೂ ವಿಧಾನಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಮಂಗಳವಾರ ಹೊಸದಿಲ್ಲಿಯಲ್ಲಿ ಮಹತ್ವದ ಸಭೆ ನಡೆದಿತ್ತು. ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆ.ಸಿ. ವೇಣುಗೋಪಾಲ್ ಭಾಗವಹಿಸಿದ್ದರು ಎಂದು ತಿಳಿಸಿದರು.

ಸಭೆಯಲ್ಲಿ ರಾಜ್ಯಸಭೆ ಮತ್ತು ವಿಧಾನಪರಿಷತ್ ಚುನಾವಣೆಗೆ ಯಾರನ್ನು ಅಭ್ಯರ್ಥಿಗಳಾಗಿ ಕಣಕ್ಕಿಳಿಸಬೇಕು ಎಂಬ ಕುರಿತು ವಿವಿಧ ಹೆಸರುಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಆದರೆ ರಾಜ್ಯ ನಾಯಕತ್ವ ಬದಲಾವಣೆ ಕುರಿತಂತೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಭವಿಷ್ಯದ ರಾಜಕೀಯ ಬೆಳವಣಿಗೆಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುರ್ಜೆವಾಲ, ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಕರೆದಿಲ್ಲ. ನಾಳೆ ಏನಾಗುತ್ತದೆ, 20 ದಿನಗಳ ಬಳಿಕ ಏನಾಗುತ್ತದೆ, ಒಂದು ತಿಂಗಳು ಅಥವಾ ಒಂದು ವರ್ಷದ ನಂತರ ಏನಾಗುತ್ತದೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದರು.

ಮುಂದೆ ಯಾವುದಾದರೂ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆದರೆ ಅದನ್ನು ಅಧಿಕೃತವಾಗಿ ತಿಳಿಸುತ್ತೇನೆ. ಕಾಂಗ್ರೆಸ್ ಯಾವ ತೀರ್ಮಾನ ತೆಗೆದುಕೊಂಡರೂ ಅದು ರಾಜ್ಯದ ಜನರ ಹಿತದೃಷ್ಟಿಯಿಂದಲೇ ಇರುತ್ತದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತು ಮಾತನಾಡಿದ ಅವರು, ಸಿದ್ದರಾಮಯ್ಯ ನಮ್ಮ ಪಕ್ಷದ ಹಿರಿಯ ನಾಯಕರು. ಅವರು ವಿರೋಧ ಪಕ್ಷದ ನಾಯಕರಾಗಿಯೂ, ಎರಡು ಬಾರಿ ಮುಖ್ಯಮಂತ್ರಿಯಾಗಿಯೂ ಅಪಾರ ಅನುಭವ ಹೊಂದಿದ್ದಾರೆ ಎಂದು ಹೇಳಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಪಕ್ಷ ಸಂಘಟನೆ ಪರಿಣಾಮಕಾರಿಯಾಗಿ ನಡೆಯುತ್ತಿದೆ. ಅವರು ಹಲವು ಮುಖ್ಯಮಂತ್ರಿಗಳೊಂದಿಗೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ ಎಂದು ತಿಳಿಸಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕನ್ನಡಿಗರಾಗಿದ್ದು, ರಾಜ್ಯದ ರಾಜಕೀಯ ಪರಿಸ್ಥಿತಿಯ ಬಗ್ಗೆ ಸಂಪೂರ್ಣ ಅರಿವು ಹೊಂದಿದ್ದಾರೆ. ರಾಹುಲ್ ಗಾಂಧಿ ಅವರಿಗೂ ಕನ್ನಡಿಗರ ಮೇಲೆ ಅಪಾರ ಪ್ರೀತಿ ಮತ್ತು ವಿಶ್ವಾಸವಿದೆ ಎಂದು ಸುರ್ಜೆವಾಲ ಹೇಳಿದರು.

ಈ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ನಿರಂತರವಾಗಿ ಟೀಕಿಸುತ್ತಿದೆ ಎಂದು ಆರೋಪಿಸಿದರು.

1.24 ಕೋಟಿ ಮಹಿಳೆಯರಿಗೆ ಆರ್ಥಿಕ ನೆರವು ನೀಡುತ್ತಿರುವ ಗೃಹ ಲಕ್ಷ್ಮಿ ಯೋಜನೆ, 1.66 ಕೋಟಿ ಕುಟುಂಬಗಳಿಗೆ ಉಚಿತ ವಿದ್ಯುತ್ ಒದಗಿಸುತ್ತಿರುವ ಗೃಹಜ್ಯೋತಿ ಯೋಜನೆ, ಮಹಿಳೆಯರ ಉಚಿತ ಪ್ರಯಾಣಕ್ಕೆ ಸಹಕಾರಿಯಾಗಿರುವ ಶಕ್ತಿ ಯೋಜನೆ, ಯುವಕರಿಗೆ ನೆರವಾಗುತ್ತಿರುವ ಯುವ ನಿಧಿ ಯೋಜನೆ ಹಾಗೂ 4.49 ಕೋಟಿ ಕನ್ನಡಿಗರಿಗೆ ಅನ್ನ ಭದ್ರತೆ ನೀಡುತ್ತಿರುವ ಅನ್ನಭಾಗ್ಯ ಯೋಜನೆಗಳನ್ನು ಬಿಜೆಪಿ ವಿರೋಧಿಸುತ್ತಿದೆ ಎಂದು ಅವರು ಟೀಕಿಸಿದರು.

ರಾಜ್ಯದ ಜನತೆ ಕಾಂಗ್ರೆಸ್ ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಬೆಂಬಲಿಸುತ್ತಿದ್ದಾರೆ. ಇದೇ ಕಾರಣಕ್ಕೆ ವಿರೋಧ ಪಕ್ಷಗಳು ಅನಗತ್ಯ ಗೊಂದಲ ಸೃಷ್ಟಿಸಲು ಯತ್ನಿಸುತ್ತಿವೆ ಎಂದು ಸುರ್ಜೆವಾಲ ಆರೋಪಿಸಿದರು.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST