LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ದ್ವೇಷ ರಾಜಕಾರಣ ಬೇಡ; ಭಾರತೀಯ ಕುಸ್ತಿ ಒಕ್ಕೂಟಕ್ಕೆ ದಿಲ್ಲಿ ಹೈಕೋರ್ಟ ತೀವ್ರ ತರಾಟೆ : ವಿನೇಶ ಫೋಗಟ್‌ ಅನರ್ಹತೆಗೆ ನಿರ್ಧಾರಕ್ಕೆ

ಹೊಸದಿಲ್ಲಿ, ಮೇ 22 : ಕುಸ್ತಿಪಟು ವಿನೇಶ್‌ ಫೋಗಟ್‌ ಅವರಿಗೆ ದಿಲ್ಲಿ ಹೈಕೋರ್ಟ್‌ ಮಹತ್ವದ ರಿಲೀಫ್‌ ನೀಡಿದ್ದು, ಮೇ 30 ಮತ್ತು 31ರಂದು ನಡೆಯಲಿರುವ 2026ರ ಏಷ್ಯನ್‌ ಗೇಮ್ಸ್‌ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿದೆ.

ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್‌ಐ) ವಿನೇಶ್‌ ಅವರನ್ನು ಅನರ್ಹ ಎಂದು ಘೋಷಿಸಿದ್ದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ.

ವಿಚಾರಣೆ ವೇಳೆ ಡಬ್ಲ್ಯುಎಫ್‌ಐ ಕ್ರಮವನ್ನು ತೀವ್ರವಾಗಿ ಪ್ರಶ್ನಿಸಿದ ಹೈಕೋರ್ಟ್‌, ಆಯ್ಕೆ ಮಾನದಂಡಗಳನ್ನು ಕೊನೆಯ ಕ್ಷಣದಲ್ಲಿ ಬದಲಾಯಿಸಿರುವುದು ದ್ವೇಷ ರಾಜಕಾರಣದಂತಿದೆ ಎಂದು ಕಿಡಿಕಾರಿತು. ಕ್ರೀಡಾ ಸಂಘಟನೆಯ ಒಳಜಗಳಗಳಿಂದ ದೇಶದ ಹೆಮ್ಮೆಯ ಕ್ರೀಡಾಪಟುಗಳ ವೃತ್ತಿಜೀವನಕ್ಕೆ ಧಕ್ಕೆಯಾಗಬಾರದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.

ವಿನೇಶ್‌ ಅವರ ಪ್ರಕರಣ ಪರಿಶೀಲನೆಗಾಗಿ ವಿಶೇಷ ತಜ್ಞರ ಸಮಿತಿ ರಚಿಸುವಂತೆ ಸೂಚಿಸಿದ ನ್ಯಾಯಾಲಯ, ಅವರು ಟ್ರಯಲ್ಸ್‌ನಲ್ಲಿ ಭಾಗವಹಿಸುವುದನ್ನು ಖಚಿತಪಡಿಸಬೇಕೆಂದು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿದೆ.

ತಾಯ್ತನ ದೇಶಕ್ಕೆ ಹೆಮ್ಮೆ. ಅದನ್ನು ಕ್ರೀಡಾಪಟುವಿನ ವೃತ್ತಿಜೀವನಕ್ಕೆ ಮಾರಕವಾಗುವಂತೆ ಬಳಸಬಾರದು ಎಂದು ಹೈಕೋರ್ಟ್‌ ಕಟ್ಟುನಿಟ್ಟಾಗಿ ಹೇಳಿತು.

ಇದೇ ವೇಳೆ, ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ವಿನೇಶ್‌ ಅನರ್ಹಗೊಂಡಿದ್ದನ್ನು ಡಬ್ಲ್ಯುಎಫ್‌ಐ ತನ್ನ ನೋಟಿಸ್‌ನಲ್ಲಿ ರಾಷ್ಟ್ರೀಯ ಅವಮಾನ ಎಂದು ಉಲ್ಲೇಖಿಸಿರುವುದಕ್ಕೂ ನ್ಯಾಯಾಲಯ ತೀವ್ರ ಆಕ್ರೋಶ ವ್ಯಕ್ತಪಡಿಸಿತು.

ಜುಲೈ 2025ರಲ್ಲಿ ತಾಯಿಯಾದ ವಿನೇಶ್‌, ಕೆಲವೇ ತಿಂಗಳುಗಳಲ್ಲಿ ಮತ್ತೆ ದೇಶಕ್ಕಾಗಿ ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ. ಇಂತಹ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುವನ್ನು ಸಣ್ಣ ಭಿನ್ನಾಭಿಪ್ರಾಯಗಳ ನೆಪದಲ್ಲಿ ಕ್ರೀಡೆಯಿಂದ ದೂರ ಇಡುವುದು ಸರಿಯಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

2023ರಲ್ಲಿ ಡಬ್ಲ್ಯುಎಫ್‌ಐ ಮಾಜಿ ಅಧ್ಯಕ್ಷ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ನಡೆದ ಲೈಂಗಿಕ ಕಿರುಕುಳ ವಿರೋಧಿ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ವಿನೇಶ್‌ ಅವರನ್ನು ಉದ್ದೇಶಪೂರ್ವಕವಾಗಿ ಮೂಲೆಗುಂಪು ಮಾಡಲು ಯತ್ನಿಸಲಾಗುತ್ತಿದೆ ಎಂಬ ವಾದಕ್ಕೂ ಈ ಬೆಳವಣಿಗೆ ಮತ್ತಷ್ಟು ಬಲ ನೀಡಿದೆ.

ಶಿಸ್ತು ಉಲ್ಲಂಘನೆ ಹಾಗೂ ನಿವೃತ್ತಿಯ ಬಳಿಕ ಮರಳಿ ಸ್ಪರ್ಧೆಗೆ ಬರುವ ಪ್ರಕ್ರಿಯೆಗಳನ್ನು ಪಾಲಿಸಿಲ್ಲ ಎಂಬ ಆರೋಪದಡಿ ಡಬ್ಲ್ಯುಎಫ್‌ಐ ವಿನೇಶ್‌ಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಿ, ಜೂನ್‌ 2026ರವರೆಗೆ ಸ್ಪರ್ಧಿಸದಂತೆ ತಡೆ ಹೇರಿತ್ತು.

ಮೇ 9ರಂದು 15 ಪುಟಗಳ ನೋಟಿಸ್‌ ಜಾರಿ ಮಾಡಿದ್ದ ಡಬ್ಲ್ಯುಎಫ್‌ಐ, ಉದ್ದೀಪನ ಮದ್ದು ತಡೆ ನಿಯಮ ಉಲ್ಲಂಘನೆ ಆರೋಪವನ್ನೂ ಮಾಡಿತ್ತು. ನಿವೃತ್ತಿಯಿಂದ ಮರಳುವ ಕ್ರೀಡಾಪಟುಗಳಿಗೆ ಅನ್ವಯವಾಗುವ 6 ತಿಂಗಳ ಮುನ್ಸೂಚನೆ ನಿಯಮವನ್ನು ಉಲ್ಲೇಖಿಸಿ ದೇಶೀಯ ಕೂಟಗಳಿಂದ ದೂರವಿರಲು ಸೂಚಿಸಿತ್ತು.

ಕಳೆದ ವರ್ಷ ಮಗುವಿಗೆ ಜನ್ಮ ನೀಡಿದ್ದ ವಿನೇಶ್‌, ಡಿಸೆಂಬರ್‌ 2025ರಲ್ಲಿ ನಿವೃತ್ತಿ ನಿರ್ಧಾರ ಹಿಂಪಡೆದಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ನಿಯಮ ಬದಲಾಯಿಸಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಪದಕ ವಿಜೇತರಿಗೆ ಮಾತ್ರ ಟ್ರಯಲ್ಸ್‌ಗೆ ಅವಕಾಶ ನೀಡಲಾಗಿತ್ತು. ಗರ್ಭಾವಸ್ಥೆಯಿಂದಾಗಿ ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದಿದ್ದ ತಮ್ಮನ್ನು ಗುರಿಯಾಗಿಸಿಕೊಂಡೇ ನಿಯಮ ಬದಲಿಸಲಾಗಿದೆ ಎಂದು ವಿನೇಶ್‌ ಆರೋಪಿಸಿದ್ದರು.

ಈ ಹಿನ್ನೆಲೆಯಲ್ಲಿ ಅವರು ಮೇ 14ರಂದು ದಿಲ್ಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 6ಕ್ಕೆ ಮುಂದೂಡಿರುವ ನ್ಯಾಯಾಲಯ, ಶೋಕಾಸ್‌ ನೋಟಿಸ್‌ಗೆ ವಿನೇಶ್‌ ನೀಡುವ ಉತ್ತರ ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳುವಂತೆ ಡಬ್ಲ್ಯುಎಫ್‌ಐಗೆ ಸೂಚಿಸಿದೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST