LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಮೋದಿಗೆ ಪ್ರಶ್ನೆ ಕೇಳಲು ಯತ್ನಿಸಿದ ಪತ್ರಕರ್ತೆ ಹೆಲ್ಲೆ ಲಿಂಗ್ ಇನ್ಸ್ಟಾಗ್ರಾಮ್, ಫೇಸ್ಬುಕ್ ಖಾತೆಗಳು ಅಮಾನತು

ಓಸ್ಲೊ, ಮೇ.20 : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರಿಕಾ ಸ್ವಾತಂತ್ರ್ಯ ಕುರಿತು ಪ್ರಶ್ನೆ ಕೇಳಿದ ಕೆಲವೇ ದಿನಗಳ ಬಳಿಕ ತಮ್ಮ ಇನ್‌ಸ್ಟಾಗ್ರಾಂ ಮತ್ತು ಫೇಸ್ಬುಕ್ ಖಾತೆಗಳನ್ನು ಅಮಾನತುಗೊಳಿಸಲಾಗಿದೆ ಎಂದು ನಾರ್ವೆಯ ಪತ್ರಕರ್ತೆ ಹೆಲ್ಲೆ ಲಿಂಗ್ ಆರೋಪಿಸಿದ್ದಾರೆ.

ಈ ಕುರಿತು ಬುಧವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಇನ್‌ಸ್ಟಾಗ್ರಾಂ ಅಥವಾ ಫೇಸ್ಬುಕ್‌ನಲ್ಲಿ ತಮ್ಮನ್ನು ಸಂಪರ್ಕಿಸಲು ಯತ್ನಿಸುತ್ತಿದ್ದರೆ, ತಮ್ಮ ಎರಡೂ ಖಾತೆಗಳನ್ನು ಅಮಾನತುಗೊಳಿಸಲಾಗಿದೆ ಎಂಬುದನ್ನು ತಿಳಿಸಲು ಬಯಸುತ್ತೇನೆ. ಸಾಧ್ಯವಾದಷ್ಟು ಭಾರತೀಯರಿಗೆ ಪ್ರತಿಕ್ರಿಯಿಸಲು ಪ್ರಯತ್ನಿಸಿದ್ದೆ. ಆದರೆ ಈಗ ಉತ್ತರಗಳಲ್ಲಿ ವಿಳಂಬವಾಗಲಿದೆ. ತಮ್ಮ ಖಾತೆಗಳು ಮರಳಿ ಸಿಗುವ ವಿಶ್ವಾಸವಿದೆ ಎಂದು ಬರೆದು ಮೆಟಾವನ್ನು ಟ್ಯಾಗ್ ಮಾಡಿದ್ದಾರೆ.

ನಾರ್ವೆ ಭೇಟಿಯ ವೇಳೆ ಪ್ರಧಾನಿ ಮೋದಿ ಅವರಿಗೆ ಪತ್ರಿಕಾ ಸ್ವಾತಂತ್ರ್ಯ ಹಾಗೂ ಮಾಧ್ಯಮಗಳೊಂದಿಗೆ ಸರಕಾರದ ತೊಡಗಿಸಿಕೊಳ್ಳುವಿಕೆ ಕುರಿತು ಪ್ರಶ್ನಿಸಿದ್ದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ತಮ್ಮ ಪ್ರಶ್ನೆಗೆ ಪ್ರತಿಕ್ರಿಯಿಸಲಿಲ್ಲ. ಆದರೆ ಅದನ್ನು ತಾವು ನಿರೀಕ್ಷಿಸಿದ್ದೇ ಆಗಿತ್ತು. ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ನಾರ್ವೆ ಮೊದಲ ಸ್ಥಾನದಲ್ಲಿದ್ದರೆ, ಭಾರತ 157ನೇ ಸ್ಥಾನದಲ್ಲಿದೆ ಎಂದು ಲಿಂಗ್ ತಮ್ಮ ಸಾಮಾಜಿಕ ಜಾಲತಾಣ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಈ ಘಟನೆ ಭಾರತದಲ್ಲಿ ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ವಿರೋಧ ಪಕ್ಷದ ಕೆಲವು ನಾಯಕರು ಪ್ರಧಾನಿ ಮೋದಿ ಅವರನ್ನು ಟೀಕಿಸಿದ್ದಾರೆ.

ಘಟನೆಯ ಬಳಿಕ ಮೋದಿ ಅವರ ನಾರ್ವೆ ಭೇಟಿಯ ಕುರಿತು ಪ್ರತಿಕ್ರಿಯೆ ಪಡೆಯಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸಂಪರ್ಕಿಸಿದ್ದಾಗಿ ಲಿಂಗ್ ತಿಳಿಸಿದ್ದಾರೆ.

ಇದೇ ವೇಳೆ, ತಮ್ಮ ಇತ್ತೀಚಿನ ಎಕ್ಸ್ ಪೋಸ್ಟ್‌ನಲ್ಲಿ ಖಾತೆ ಅಮಾನತುಗೊಳಿಸಿರುವ ಕುರಿತು ಅನುಮಾನ ವ್ಯಕ್ತಪಡಿಸಿರುವ ಅವರು, ಇನ್‌ಸ್ಟಾಗ್ರಾಂ ಮತ್ತು ಫೇಸ್ಬುಕ್‌ನಿಂದ ತಮ್ಮನ್ನು ಹೇಗೆ ಅಮಾನತುಗೊಳಿಸಲಾಯಿತು ಎಂಬುದನ್ನು ಯಾರಾದರೂ ವಿವರಿಸಬಹುದೇ? ಎರಡು ಹಂತದ ಪರಿಶೀಲನಾ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡ ಕಾರಣವೇ ಅಥವಾ ಬೇರೆ ಯಾವುದಾದರೂ ಕಾರಣವಿದೆಯೇ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ತಮ್ಮ ಖಾತೆಗಳು ಮರಳಿ ಸಿಕ್ಕರೆ ಅವುಗಳನ್ನು ಸುರಕ್ಷಿತವಾಗಿಡಲು ಏನು ಮಾಡಬೇಕು ಎಂಬುದರ ಕುರಿತು ಯಾರಿಗಾದರೂ ಸಲಹೆಗಳಿದ್ದರೆ ತಿಳಿಸಿ ಎಂದೂ ಅವರು ಮನವಿ ಮಾಡಿದ್ದಾರೆ.

ಖಾತೆ ಅಮಾನತುಗೊಳಿಸಿರುವ ಕುರಿತು ಮೆಟಾ ಇದುವರೆಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST