ಮೈಸೂರು, ಸೆ 11 : (ಸಮದರ್ಶಿ ಸುದ್ದಿ) - ಸುಮಾರು ಮೂರೂವರೆ ದಶಕಗಳ ಕಾಲ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ವಿವಿಧ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ಚುನಾವಣಾ ಪ್ರಕ್ರಿಯೆಯ ಜವಾಬ್ದಾರಿಯನ್ನೂ ನಿರ್ವಹಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ಅವರಿಗೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಡಿ ನೋಟಿಸ್ ನೀಡಲಾಗಿದೆ.
ಹಳೆಯ ಹಾಗೂ ಪ್ರಸ್ತುತ ಮತದಾರರ ಪಟ್ಟಿಯಲ್ಲಿ ಅವರ ಹೆಸರಿನ ಅಕ್ಷರ ಮತ್ತು ಇನಿಷಿಯಲ್‌ಗಳಲ್ಲಿ ಕಂಡುಬಂದ ಸಣ್ಣ ವ್ಯತ್ಯಾಸದ ಹಿನ್ನೆಲೆಯಲ್ಲಿ ನೋಟಿಸ್ ಜಾರಿಯಾಗಿದೆ. ಆದರೆ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸುವುದರ ಜತೆಗೆ ‘ಸುಳ್ಳು ಮಾಹಿತಿ ನೀಡಿದರೆ ಕ್ರಿಮಿನಲ್ ಅಪರಾಧ, ಜೈಲು ಶಿಕ್ಷೆ ಹಾಗೂ ದಂಡ’ ಎಂಬ ಎಚ್ಚರಿಕೆ ನೀಡಿರುವುದು ಚರ್ಚೆಗೆ ಕಾರಣವಾಗಿದೆ.
ಮೈಸೂರಿನ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಮತದಾರರಾಗಿರುವ ಇಬ್ರಾಹಿಂ ಅವರು 1986ರಲ್ಲಿ ತಹಶೀಲ್ದಾರ್ ಆಗಿ ಸರ್ಕಾರಿ ಸೇವೆಗೆ ಸೇರಿದ್ದರು. ನಂತರ ಉಪ ಜಿಲ್ಲಾಧಿಕಾರಿ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ, ಕರ್ನಾಟಕ ವಕ್ಫ್ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸಾರಿಗೆ ಆಯುಕ್ತ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಸೇರಿದಂತೆ ಹಲವು ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ 2020ರಲ್ಲಿ ನಿವೃತ್ತರಾಗಿದ್ದರು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯಾಗಿಯೂ ಅವರು ಕಾರ್ಯನಿರ್ವಹಿಸಿದ್ದರು.
ನೋಟಿಸ್‌ನಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ತಪ್ಪು ಮಾಹಿತಿ ಅಥವಾ ಸುಳ್ಳು ಘೋಷಣೆ ನೀಡುವುದು ಅಪರಾಧ ಎಂದು ತಿಳಿಸಲಾಗಿದ್ದು, ಜನಪ್ರತಿನಿಧಿತ್ವ ಕಾಯ್ದೆ 1950ರ ಸೆಕ್ಷನ್ 31ರ ಅಡಿಯಲ್ಲಿ ಒಂದು ವರ್ಷದವರೆಗೆ ಜೈಲು ಶಿಕ್ಷೆ ಅಥವಾ ದಂಡದಂತಹ ಕಾನೂನು ಕ್ರಮ ಎದುರಿಸಬೇಕಾಗಬಹುದು ಎಂದು ಎಚ್ಚರಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಇಬ್ರಾಹಿಂ, ಮೂರೂವರೆ ದಶಕ ಸರ್ಕಾರಿ ಸೇವೆ ಸಲ್ಲಿಸಿದ ತಮ್ಮಂತಹ ವ್ಯಕ್ತಿಗೂ ನೋಟಿಸ್‌ನಲ್ಲಿರುವ ಭಾಷೆ ಆತಂಕ ಮೂಡಿಸಿದೆ. ಕ್ರಿಮಿನಲ್ ಅಪರಾಧ, ಜೈಲು ಶಿಕ್ಷೆ ಹಾಗೂ ದಂಡದಂತಹ ಎಚ್ಚರಿಕೆಗಳು ಸಾಮಾನ್ಯ ಮತದಾರರ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದನ್ನು ಪರಿಗಣಿಸಬೇಕು ಎಂದು ಹೇಳಿದ್ದಾರೆ.
ಇದು ತಮ್ಮೊಬ್ಬರ ಸಮಸ್ಯೆಯಲ್ಲ, ಪ್ರತಿಯೊಬ್ಬ ಮತದಾರನಿಗೂ ಸಂಬಂಧಿಸಿದ ವಿಷಯವಾಗಿದೆ. ಮತದಾನದ ಹಕ್ಕನ್ನು ಸುಗಮಗೊಳಿಸುವ ಬದಲು ದಾಖಲೆಗಳಲ್ಲಿನ ಸಣ್ಣ ವ್ಯತ್ಯಾಸಗಳಿಗೂ ಕಠಿಣ ಎಚ್ಚರಿಕೆ ನೀಡುವುದರಿಂದ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಬಾರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಮುನೀರ್ ಕಾಟಿಪಳ್ಳ ಕೂಡ ಈ ಬೆಳವಣಿಗೆಯನ್ನು ಟೀಕಿಸಿದ್ದು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯಾಗಿ ಚುನಾವಣಾ ಪ್ರಕ್ರಿಯೆ ನಡೆಸಿದ್ದ ಹಿರಿಯ ಅಧಿಕಾರಿಯೇ ಈಗ ತಮ್ಮ ಮತದಾರರ ಗುರುತಿಗೆ ದಾಖಲೆ ಒದಗಿಸಬೇಕಾಗಿರುವುದು ಪರಿಷ್ಕರಣೆ ಪ್ರಕ್ರಿಯೆಯ ಕಾರ್ಯವೈಖರಿಯ ಕುರಿತು ಪ್ರಶ್ನೆ ಮೂಡಿಸುತ್ತದೆ ಎಂದಿದ್ದಾರೆ.
ಗಣ್ಯರಿಗೂ ನೋಟಿಸ್
ವಿಶೇಷ ತೀವ್ರ ಪರಿಷ್ಕರಣೆ ವೇಳೆ ತಾಂತ್ರಿಕ ವ್ಯತ್ಯಾಸಗಳಿಂದ ನೋಟಿಸ್ ಪಡೆದವರಲ್ಲಿ ಇಬ್ರಾಹಿಂ ಒಬ್ಬರೇ ಅಲ್ಲ. ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೂ ಇದೇ ರೀತಿಯ ನೋಟಿಸ್ ನೀಡಲಾಗಿತ್ತು. ಬಳಿಕ ಅಧಿಕಾರಿಗಳು ಅವರ ಮನೆಗೆ ತೆರಳಿ ದಾಖಲೆ ಪರಿಶೀಲಿಸಿ ನೋಟಿಸ್ ಹಿಂಪಡೆದಿದ್ದರು.
ಭಾರತ ರತ್ನ ಪುರಸ್ಕೃತ ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್, ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನೀಲೇಕಣಿ ಹಾಗೂ ಜೆರೋಧಾ ಸಂಸ್ಥಾಪಕರಾದ ನಿತಿನ್ ಮತ್ತು ನಿಖಿಲ್ ಕಾಮತ್ ಅವರ ಹೆಸರುಗಳೂ ತಾಂತ್ರಿಕ ಕಾರಣಗಳಿಂದ ಪರಿಶೀಲನೆಗೆ ಒಳಪಟ್ಟಿವೆ ಎಂದು ವರದಿಯಾಗಿದೆ.
ರಾಜ್ಯದಲ್ಲಿ ಲಕ್ಷಾಂತರ ಮತದಾರರಿಗೆ ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ. ಮತದಾರರ ಪಟ್ಟಿಯನ್ನು ನಿಖರಗೊಳಿಸುವುದು ಅಗತ್ಯವಾದರೂ, ಹೆಸರು ಅಥವಾ ಇನಿಷಿಯಲ್‌ನಂತಹ ಸಣ್ಣ ವ್ಯತ್ಯಾಸಗಳನ್ನು ಸರಳವಾಗಿ ಸರಿಪಡಿಸಲು ಅವಕಾಶ ನೀಡುವ ಬದಲು ಜೈಲು ಮತ್ತು ದಂಡದ ಎಚ್ಚರಿಕೆ ನೀಡುವುದು ಎಷ್ಟು ಸಮಂಜಸ ಎಂಬ ಪ್ರಶ್ನೆ ಈಗ ಮುನ್ನೆಲೆಗೆ ಬಂದಿದೆ.