LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
National News

ಗದ್ದಲದಲ್ಲೇ ಸಾಗಿದ ಸಂಸತ್; ಚರ್ಚೆಯಿಲ್ಲದೆ ತೆರಿಗೆ ತಿದ್ದುಪಡಿ ಮಸೂದೆಗೆ ಒಪ್ಪಿಗೆ

ಹೊಸದಿಲ್ಲಿ, ಆಗಸ್ಟ್ 6: ಪ್ರತಿಪಕ್ಷಗಳ ನಿರಂತರ ಪ್ರತಿಭಟನೆ, ಘೋಷಣೆಗಳು ಹಾಗೂ ಕೇಂದ್ರ ಗೃಹ ಸಚಿವ ಅಮಿತ ಶಾ ಸದನದಲ್ಲಿ ಗೈರಾಗಿದ್ದ ವಿಚಾರದ ವಿರುದ್ಧದ ಆಕ್ರೋಶದ ನಡುವೆಯೇ ಸಂಸತ್ತಿನ ಮುಂಗಾರು ಅಧಿವೇಶನದ 14ನೇ ದಿನವೂ ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪಗಳು ಪದೇ ಪದೇ ಅಸ್ತವ್ಯಸ್ತಗೊಂಡವು. ರಾಮ ಮಂದಿರ ದೇಣಿಗೆ ಅಕ್ರಮ ಆರೋಪ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಪ್ರತಿಭಟಿಸಿದ ವಿದ್ಯಾರ್ಥಿಗಳ ಮೇಲೆ ಪೊಲೀಸ್ ಕ್ರಮ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಬೇಕು ಹಾಗೂ ಗೃಹ ಸಚಿವರು ಸದನಕ್ಕೆ ಬಂದು ಉತ್ತರ ನೀಡಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿದವು.

ಗದ್ದಲದ ನಡುವೆಯೇ ಲೋಕಸಭೆಯು ತೆರಿಗೆ ಮತ್ತು ಇತರ ಕಾನೂನುಗಳ (ತಿದ್ದುಪಡಿ) ಮಸೂದೆ–2026 ಅನ್ನು ಯಾವುದೇ ಚರ್ಚೆಯಿಲ್ಲದೆ ಅಂಗೀಕರಿಸಿತು. ಈ ಮಸೂದೆಯ ಮೂಲಕ ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆ–2007, ಆದಾಯ ತೆರಿಗೆ ಕಾಯ್ದೆ–2025 ಹಾಗೂ ಹಣಕಾಸು ಕಾಯ್ದೆ–2026ಕ್ಕೆ ತಿದ್ದುಪಡಿ ತರಲು ಅವಕಾಶ ಕಲ್ಪಿಸಲಾಗಿದೆ.

ಇತ್ತ ರಾಜ್ಯಸಭೆಯು ವಿನಿಯೋಗ ಮಸೂದೆಗೆ ಅನುಮೋದನೆ ನೀಡಿತು. 2022–23ನೇ ಹಣಕಾಸು ವರ್ಷದಲ್ಲಿ ಬಜೆಟ್ ಅಂದಾಜಿಗಿಂತ ಹೆಚ್ಚಾಗಿ ಸರ್ಕಾರ ಮಾಡಿದ ವೆಚ್ಚಕ್ಕೆ ಸಂಸತ್ತಿನ ಅನುಮೋದನೆ ಪಡೆಯುವುದು ಈ ಮಸೂದೆಯ ಉದ್ದೇಶವಾಗಿದೆ.

ಈ ನಡುವೆ, ಮಹಿಳಾ ಮೀಸಲು ಮಸೂದೆ ಹಾಗೂ ಕ್ಷೇತ್ರ ಮರುವಿಂಗಡಣೆ ಮಸೂದೆಗಳನ್ನು ಇದೇ ಅಧಿವೇಶನದಲ್ಲೇ ಅಂಗೀಕರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತೆ ರಾಜಕೀಯ ಒಮ್ಮತ ಸಾಧಿಸಲು ಪ್ರಯತ್ನ ಆರಂಭಿಸಿದೆ. ಮಹಿಳಾ ಮೀಸಲು ಮಸೂದೆಯ ಪ್ರಕಾರ 2029ರಿಂದ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಜಾರಿಯಾಗಲಿದೆ. ಕ್ಷೇತ್ರ ಮರುವಿಂಗಡಣೆ ಮಸೂದೆಯು ಲೋಕಸಭೆಯ ಸದಸ್ಯರ ಸಂಖ್ಯೆಯನ್ನು 816ಕ್ಕೆ ಹೆಚ್ಚಿಸುವ ಪ್ರಸ್ತಾಪವನ್ನು ಒಳಗೊಂಡಿದೆ.

ಈ ಎರಡೂ ಮಸೂದೆಗಳಿಗೆ ಬೆಂಬಲ ಪಡೆಯುವ ಉದ್ದೇಶದಿಂದ ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳೊಂದಿಗೆ ಕೇಂದ್ರ ಸರ್ಕಾರ ಮತ್ತೆ ಮಾತುಕತೆ ಆರಂಭಿಸಿದೆ. ನಾಲ್ಕು ತಿಂಗಳ ಹಿಂದೆ ಅಗತ್ಯ ಸಂಖ್ಯಾಬಲದ ಕೊರತೆಯಿಂದ ಇದೇ ಪ್ರಯತ್ನ ಫಲಿಸಿರಲಿಲ್ಲ.

ಇದರ ಮಧ್ಯೆ, ಆಗಸ್ಟ್ 16ರಿಂದ 18ರವರೆಗೆ ಸಂಸತ್ತಿನ ವಿಶೇಷ ಅಧಿವೇಶನ ಕರೆಯುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸ್ಪಷ್ಟಪಡಿಸಿದರು.

ರಾಜ್ಯಸಭೆಯಲ್ಲಿ ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷ ಸದಸ್ಯರು ಘೋಷಣೆಗಳನ್ನು ಕೂಗತೊಡಗಿದರು. ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತನಾಡಲು ಅವಕಾಶ ನೀಡುವಂತೆ ಕಾಂಗ್ರೆಸ್ ಸದಸ್ಯರು ಆಗ್ರಹಿಸಿದರು. ಪ್ರತಿಭಟನಾಕಾರರನ್ನು ತಮ್ಮ ಸ್ಥಾನಗಳಿಗೆ ಮರಳುವಂತೆ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಹಲವು ಬಾರಿ ಮನವಿ ಮಾಡಿದರೂ ಗದ್ದಲ ಮುಂದುವರಿಯಿತು. ಬಳಿಕ ಖರ್ಗೆ ಅವರಿಗೆ ಮಾತನಾಡಲು ಅವಕಾಶ ನೀಡುತ್ತಿದ್ದಂತೆಯೇ ಆಡಳಿತಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬೆಳಿಗ್ಗೆ ಸುಮಾರು 11.25ಕ್ಕೆ ಕಲಾಪವನ್ನು ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಲಾಯಿತು.

ಮಧ್ಯಾಹ್ನ 12ಕ್ಕೆ ಕಲಾಪ ಪುನರಾರಂಭವಾದ ಬಳಿಕವೂ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಕಂಡುಬರಲಿಲ್ಲ. ವಿದ್ಯಾರ್ಥಿಗಳ ಪ್ರತಿಭಟನೆಯ ಮೇಲೆ ನಡೆದ ಪೊಲೀಸ್ ಕ್ರಮದ ಕುರಿತು ಗೃಹ ಸಚಿವ ಅಮಿತ ಶಾ ಸದನದಲ್ಲಿ ಉತ್ತರ ನೀಡಬೇಕು ಎಂದು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಪಟ್ಟು ಹಿಡಿದವು. ಪ್ರಶ್ನೋತ್ತರ ವೇಳೆಯಲ್ಲಿಯೂ ಘೋಷಣೆಗಳು ಮುಂದುವರಿದ ಹಿನ್ನೆಲೆಯಲ್ಲಿ, ಪ್ರತಿಪಕ್ಷ ಸದಸ್ಯರ ಭಾವನೆಗಳನ್ನು ಗೃಹ ಸಚಿವರಿಗೆ ತಿಳಿಸುವಂತೆ ಸಭಾಪತಿ ಕಿರಣ್ ರಿಜಿಜು ಅವರಿಗೆ ಸೂಚಿಸಿದರು.

ಸುಮಾರು ಅರ್ಧ ಗಂಟೆಯವರೆಗೆ ಗದ್ದಲದ ನಡುವೆಯೇ ಕಾರ್ಯಸೂಚಿ ಮುಂದುವರಿದ ಬಳಿಕವೂ ಪರಿಸ್ಥಿತಿ ಸುಧಾರಿಸದ ಕಾರಣ ರಾಜ್ಯಸಭೆಯ ಕಲಾಪವನ್ನು ಮಧ್ಯಾಹ್ನ 2.15ರವರೆಗೆ ಮತ್ತೊಮ್ಮೆ ಮುಂದೂಡಲಾಯಿತು. ಹೀಗೆ ಮುಂಗಾರು ಅಧಿವೇಶನದ 14ನೇ ದಿನವೂ ಆಡಳಿತಪಕ್ಷ ಮತ್ತು ಪ್ರತಿಪಕ್ಷಗಳ ನಡುವಿನ ಸಂಘರ್ಷದಿಂದ ಸಂಸತ್ತಿನ ಉಭಯ ಸದನಗಳ ಕಾರ್ಯಕಲಾಪ ಪದೇ ಪದೇ ಅಸ್ತವ್ಯಸ್ತಗೊಂಡಿತು.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗದ್ದಲದಲ್ಲೇ ಸಾಗಿದ ಸಂಸತ್; ಚರ್ಚೆಯಿಲ್ಲದೆ ತೆರಿಗೆ ತಿದ್ದುಪಡಿ ಮಸೂದೆಗೆ ಒಪ್ಪಿಗೆ'ಮೋದಿ ಸರ್ವಾಧಿಕಾರಿಯಾಗಿದ್ದರೆ ಚೆನ್ನಾಗಿತ್ತು' ಎಂದ ರೂಪಾಲಿ ಗಂಗೂಲಿ; ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶಧರಣಿಯಲ್ಲಿ ಮೊಳಗಿದ ಏಕತೆಯ ಸಂದೇಶ: ಜಾತಿ–ಧರ್ಮ ಮೀರಿ ವಿದ್ಯಾರ್ಥಿಗಳಿಗೆ ನೆರವುಬೈಕ್–ಬಸ್ ಮುಖಾಮುಖಿ ಡಿಕ್ಕಿ: ತಂದೆ, ಮಗಳು ಸೇರಿ ಮೂವರು ಸ್ಥಳದಲ್ಲೇ ಮೃತ್ಯು'ತೆಹೆಲ್ಕಾ' ಪತ್ರಿಕೆ ಮಾಜಿ ಪ್ರಧಾನ ಸಂಪಾದಕ ತರುಣ ತೇಜ್‌ಪಾಲಗೆ 10 ವರ್ಷ ಜೈಲು ಶಿಕ್ಷೆರೈಲು ಹಳಿ ಮಧ್ಯೆ ಕೆಟ್ಟು ನಿಂತ ಶಾಲಾ ವಾಹನ; ಗ್ರಾಮಸ್ಥರ ಸಮಯಪ್ರಜ್ಞೆಗೆ ತಪ್ಪಿದ ಭಾರೀ ದುರಂತ'ವಿಶೇಷ ಮತಪಟ್ಟಿ ಪರಿಷ್ಕರಣೆ' ನೆಪದಲ್ಲಿ 1 ಕೋಟಿ ಮತದಾರರ ಹೆಸರು ಅಳಿಸುವ ಸಂಚು: ಕಾಂಗ್ರೆಸ್ಬದುಕನ್ನೇ ಮಕ್ಕಳಿಗೆ ಅರ್ಪಿಸಿದ್ದ ತಂದೆ ಅನಾಥರಂತೆ ಅಂತ್ಯಕ್ರಿಯೆ; ವಿಡಿಯೊ ಕಾಲ್‌ನಲ್ಲೇ ನೋಡಿದ ಮೂವರು ಪುತ್ರಿಯರುಆಘಾತಕಾರಿ ವಿಡಿಯೊ: ಪಂದ್ಯದ ವೇಳೆ ಬಡಿದ ಸಿಡಿಲು ಯುವ ಫುಟ್‌ಬಾಲ್ ಆಟಗಾರ ಸಾವುವಿದ್ಯಾರ್ಥಿಗಳೊಂದಿಗೆ ರಾಹುಲ್ ಸಂವಾದಕ್ಕೆ ಅನುಮತಿ ರದ್ದು; ಕಾಂಗ್ರೆಸ್ ಆಕ್ರೋಶ