ಬೆಂಗಳೂರು, ಅ. 3 : (ಸಮದರ್ಶಿ ಸುದ್ದಿ) - ಕರ್ನಾಟಕ ಎದುರಿಸುತ್ತಿರುವ ತೀವ್ರ ಬರ ಪರಿಸ್ಥಿತಿಗೆ ಕೇಂದ್ರ ಸರ್ಕಾರ ತುರ್ತಾಗಿ ಸ್ಪಂದಿಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಅಡಿಯಲ್ಲಿ ರಾಜ್ಯ ಸರ್ಕಾರ ಕೋರಿರುವ ₹3,705.30 ಕೋಟಿ ಪರಿಹಾರವನ್ನು ಯಾವುದೇ ಅನಗತ್ಯ ಕಡಿತವಿಲ್ಲದೆ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಧಾನಿಗೆ ಬರೆದ ಪತ್ರವನ್ನು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ಖರ್ಗೆ, ಕರ್ನಾಟಕವು ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಗಂಭೀರ ಬರ ಪರಿಸ್ಥಿತಿ ಎದುರಿಸುತ್ತಿದೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ರಾಜ್ಯದಲ್ಲಿ ಶೇ 58ರಷ್ಟು ಮಳೆಯ ಕೊರತೆ ದಾಖಲಾಗಿದ್ದು, ವ್ಯಾಪಕ ಬೆಳೆ ಹಾನಿಯಿಂದ ಲಕ್ಷಾಂತರ ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ತಿಳಿಸಿದ್ದಾರೆ.
ಬರದಿಂದ ರಾಜ್ಯದಲ್ಲಿ ಅಂದಾಜು ₹18,748.23 ಕೋಟಿ ನಷ್ಟ ಸಂಭವಿಸಿದ್ದು, ಇದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರ ₹3,705.30 ಕೋಟಿ ಪರಿಹಾರ ಕೋರಿದೆ. ಕೇಂದ್ರ ಸರ್ಕಾರ ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ತಕ್ಷಣ ನೆರವು ಬಿಡುಗಡೆ ಮಾಡಬೇಕು ಎಂದು ಖರ್ಗೆ ಒತ್ತಾಯಿಸಿದ್ದಾರೆ.
ವಿಶೇಷವಾಗಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸಂಭವಿಸಿರುವ ಬರ ಹಾನಿಯನ್ನು ಖುದ್ದಾಗಿ ಪರಿಶೀಲಿಸಲು ಕೇಂದ್ರದ ತಂಡವನ್ನು ತಕ್ಷಣ ಕಳುಹಿಸಬೇಕು. ರಾಜ್ಯ ಸರ್ಕಾರ ಕೋರಿರುವ ಪರಿಹಾರದ ಸಂಪೂರ್ಣ ಮೊತ್ತವನ್ನು ಮಂಜೂರು ಮಾಡಬೇಕು ಎಂಬುದು ಸೇರಿದಂತೆ ಆರು ಪ್ರಮುಖ ಬೇಡಿಕೆಗಳನ್ನು ಅವರು ಕೇಂದ್ರದ ಮುಂದಿಟ್ಟಿದ್ದಾರೆ.
ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೀಡುವ ಕೃಷಿ ವೆಚ್ಚದ ಸಹಾಯಧನ ಲೆಕ್ಕಾಚಾರಕ್ಕೆ ಹಳೆಯ 2015–16ರ ಕೃಷಿ ಗಣತಿ ಅಂಕಿಅಂಶಗಳ ಬದಲು ಕರ್ನಾಟಕದ ನವೀಕೃತ ‘ಭೂಮಿ’ ಭೂ ದಾಖಲೆಗಳನ್ನು ಬಳಸಬೇಕು. ಇದರಿಂದ ಅರ್ಹ ರೈತರು ಪರಿಹಾರದಿಂದ ವಂಚಿತರಾಗುವುದನ್ನು ತಪ್ಪಿಸಬಹುದು ಎಂದು ಹೇಳಿದ್ದಾರೆ.
ಪ್ರಸ್ತುತ ಸ್ಥಳ ಪರಿಶೀಲನೆ ನಡೆಯುತ್ತಿರುವ ಹೆಚ್ಚುವರಿ 11 ತಾಲೂಕುಗಳು ಸೇರಿದಂತೆ ಬರಪೀಡಿತ ಎಂದು ಅರ್ಹತೆ ಪಡೆಯುವ ಇತರ ಪ್ರದೇಶಗಳ ಘೋಷಣೆ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಕೇಂದ್ರದ ನೆರವು ನೀಡುವಾಗ ಇವೆಲ್ಲವನ್ನೂ ಒಂದೇ ನಿರಂತರ ಬರ ಪರಿಸ್ಥಿತಿಯ ಭಾಗವಾಗಿ ಪರಿಗಣಿಸಬೇಕು ಎಂದು ಖರ್ಗೆ ಮನವಿ ಮಾಡಿದ್ದಾರೆ.
ಕಾವೇರಿ ಹಾಗೂ ಜಲವಿದ್ಯುತ್ ಯೋಜನೆಗಳ ಜಲಾನಯನ ಪ್ರದೇಶಗಳಲ್ಲಿನ ಜಲಾಶಯಗಳ ನೀರಿನ ಮಟ್ಟ ಗಣನೀಯವಾಗಿ ಕುಸಿದಿರುವುದರಿಂದ ಕುಡಿಯುವ ನೀರಿನ ಭದ್ರತೆ ಹಾಗೂ ಪರ್ಯಾಯ ವಿದ್ಯುತ್ ವ್ಯವಸ್ಥೆಗೆ ತಗಲುವ ಹೆಚ್ಚುವರಿ ವೆಚ್ಚವನ್ನು ನಿಭಾಯಿಸಲು ಕೇಂದ್ರ ವಿಶೇಷ ನೆರವು ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯದ 31 ಲಕ್ಷಕ್ಕೂ ಹೆಚ್ಚು ರೈತ ಕುಟುಂಬಗಳು ಸಂಕಷ್ಟ ಎದುರಿಸುತ್ತಿವೆ. ಹೀಗಾಗಿ ಯಾವುದೇ ರಾಜಕೀಯ ಪ್ರಭಾವಕ್ಕೆ ಒಳಗಾಗದೆ ಅರ್ಹತೆಯ ಆಧಾರದ ಮೇಲೆ ಕರ್ನಾಟಕಕ್ಕೆ ತುರ್ತಾಗಿ ಪರಿಹಾರ ಬಿಡುಗಡೆ ಮಾಡಬೇಕು ಎಂದು ಖರ್ಗೆ ಆಗ್ರಹಿಸಿದ್ದಾರೆ.
‘ಬರ ಪರಿಹಾರ ಮಾನವೀಯ ಅಗತ್ಯವಾಗಿದೆ. ಅದು ಕೇಂದ್ರ ಮತ್ತು ರಾಜ್ಯಗಳ ನಡುವಿನ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿ ನಿಲ್ಲಬೇಕು. ಸಂಕಷ್ಟದಲ್ಲಿರುವ ಲಕ್ಷಾಂತರ ಜನರಿಗೆ ಆಹಾರ, ಮೇವು, ಕುಡಿಯುವ ನೀರು ಹಾಗೂ ಜೀವನೋಪಾಯದ ಭದ್ರತೆ ಒದಗಿಸಲು ಕೇಂದ್ರ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು’ ಎಂದು ಖರ್ಗೆ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಇದೇ ವಿಷಯವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಪ್ರತ್ಯೇಕ ಪತ್ರ ಬರೆದಿರುವುದಾಗಿ ಖರ್ಗೆ ತಿಳಿಸಿದ್ದಾರೆ.