ಬಾಗಲಕೋಟ, ಅ. 5 : - ಜಿಲ್ಲೆಯ ತೇರದಾಳ ತಾಲೂಕಿನ ತಮದಡ್ಡಿ ಗ್ರಾಮದ ಲಕ್ಷ್ಮಿ ದೇವಿ ಜಾತ್ರೆಯಲ್ಲಿ ದಲಿತ ಸಮುದಾಯದ ಭಕ್ತರಿಗೆ ಪ್ರತ್ಯೇಕವಾಗಿ ಊಟ ಬಡಿಸುವ ಮೂಲಕ ಅಸ್ಪೃಶ್ಯತೆ ಆಚರಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಸಂಬಂಧ ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಮದಡ್ಡಿ ಗ್ರಾಮದ ದಲಿತ ಸಮುದಾಯದ ಬಸಪ್ಪ ಯಲದಗುಡ್ಡ ಅವರು ಪೊಲೀಸರಿಗೆ ದೂರು ನೀಡಿದ್ದು, ಅಕ್ಟೋಬರ್ 2ರಂದು ನಡೆದ ಲಕ್ಷ್ಮಿ ದೇವಿ ಜಾತ್ರೆಯಲ್ಲಿ ಜಾತಿಯ ಆಧಾರದ ಮೇಲೆ ಊಟದ ವ್ಯವಸ್ಥೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ದೂರಿನ ಪ್ರಕಾರ, ಪ್ರಬಲ ಜಾತಿಯ ಸಮುದಾಯದವರಿಗೆ ಸಾಮಾನ್ಯ ಊಟ ಬಡಿಸಲಾಗಿದ್ದು, ದಲಿತ ಸಮುದಾಯದವರಿಗೆ ಪ್ರತ್ಯೇಕವಾಗಿ ಕೇವಲ ಗಂಜಿ ನೀಡಲಾಗಿದೆ. ಈ ಮೂಲಕ ದಲಿತರನ್ನು ಪ್ರತ್ಯೇಕವಾಗಿ ನಡೆಸಿಕೊಂಡು ಅಸ್ಪೃಶ್ಯತೆ ಆಚರಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಅಕ್ಟೋಬರ್ 3ರಂದು ಪ್ರಕರಣ ದಾಖಲಾಗಿದ್ದು, ಸುಕುಮಾರ ಪಾಟೀಲ, ಬಸವರಾಜ ಯಾದವಾಡ, ನಂದಪ್ಪ ನಂದಪ್ಪನವರ್, ಭೀಮಪ್ಪ ಕೊಣ್ಣೂರು ಮತ್ತು ಸುರೇಶ ಅಕ್ಕಿವಟ್ಟಿ ಸೇರಿದಂತೆ ಸುಮಾರು 20 ಮಂದಿಯ ಹೆಸರನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.