ನವದೆಹಲಿ, 15: ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪರಿಸರ ಹೋರಾಟಗಾರ ಹಾಗೂ ಶಿಕ್ಷಣ ತಜ್ಞ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಅಗತ್ಯವಿದ್ದರೆ ಬಲವಂತವಾಗಿ ಆಹಾರ ನೀಡುವಂತೆ ದೆಹಲಿ ಹೈಕೋರ್ಟನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಜೂನ್ 28ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ವಾಂಗ್‌ಚುಕ್ ಇದುವರೆಗೆ 8.5 ಕೆಜಿ ತೂಕ ಕಳೆದುಕೊಂಡಿದ್ದು, ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಪರಿಸ್ಥಿತಿ ಗಂಭೀರವಾಗಿರುವುದರಿಂದ ಕೇಂದ್ರ ಹಾಗೂ ದೆಹಲಿ ಸರ್ಕಾರಕ್ಕೆ ತುರ್ತು ನಿರ್ದೇಶನ ನೀಡುವಂತೆ ನ್ಯಾಯಾಲಯವನ್ನು ಕೋರಲಾಗಿದೆ.
ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ರಾಕೇಶ ಕುಮಾರ್ ಸೈನಿ ಸಲ್ಲಿಸಿರುವ ಅರ್ಜಿಯಲ್ಲಿ, ವಾಂಗ್‌ಚುಕ್ ಅವರನ್ನು ತಕ್ಷಣವೇ ಸುಸಜ್ಜಿತ ಆಸ್ಪತ್ರೆಗೆ ದಾಖಲಿಸಿ, ವೈದ್ಯರ ಸಲಹೆಯಂತೆ ಜೀವ ರಕ್ಷಣೆಗಾಗಿ ಅಗತ್ಯ ಚಿಕಿತ್ಸೆಯೊಂದಿಗೆ ಬಲವಂತವಾಗಿ ಆಹಾರ ನೀಡಲು ಸರ್ಕಾರಕ್ಕೆ ಆದೇಶಿಸಬೇಕು ಎಂದು ಮನವಿ ಮಾಡಲಾಗಿದೆ.
ಈ ಅರ್ಜಿ ಬುಧವಾರ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಹಾಗೂ ನ್ಯಾಯಮೂರ್ತಿ ತೇಜಸ್ ಕರಿಯಾ ಅವರಿದ್ದ ವಿಭಾಗೀಯ ಪೀಠದ ಮುಂದೆ ಪ್ರಸ್ತಾಪವಾಯಿತು. ದೆಹಲಿ ಹೈಕೋರ್ಟ ಬಾರ್ ಅಸೋಸಿಯೇಷನ್ ಕಲಾಪ ಬಹಿಷ್ಕಾರ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಸರ್ಕಾರದ ಪರ ವಕೀಲರು ಹಾಜರಾಗದಿದ್ದರೂ, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಪೀಠವು ಅರ್ಜಿಯನ್ನು ಗುರುವಾರ ವಿಚಾರಣೆಗೆ ಪಟ್ಟಿ ಮಾಡುವಂತೆ ಆದೇಶಿಸಿತು. ಜೊತೆಗೆ ಆದೇಶದ ಪ್ರತಿಯನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್ ಹಾಗೂ ದೆಹಲಿ ಸರ್ಕಾರದ ಮುಖ್ಯ ವಕೀಲರಿಗೆ ತಲುಪಿಸುವಂತೆ ಸೂಚನೆ ನೀಡಿತು.
ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಭ್ರಷ್ಟಾಚಾರದ ವಿರುದ್ಧ ವಾಂಗ್‌ಚುಕ್ ಈ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಶಿಕ್ಷಣ ಇಲಾಖೆಯಲ್ಲಿನ ಅಕ್ರಮಗಳಿಗೆ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿದೆ.
ಜೂನ್ 20ರಿಂದ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಆರಂಭವಾಗಿದ್ದು, ಜೂನ್ 28ರಂದು ಸೋನಮ್ ವಾಂಗಚುಕ್ ಉಪವಾಸ ಸತ್ಯಾಗ್ರಹಕ್ಕೆ ಸೇರಿಕೊಂಡಿದ್ದರು. ಅಂದಿನಿಂದ ಅವರು ಯಾವುದೇ ಆಹಾರ ಸೇವಿಸದೆ ಪ್ರತಿಭಟನೆ ಮುಂದುವರಿಸುತ್ತಿದ್ದು, ಅವರ ಆರೋಗ್ಯದ ಬಗ್ಗೆ ಕಳವಳ ಹೆಚ್ಚುತ್ತಿದೆ.