ಬೆಂಗಳೂರು, ಆಗಸ್ಟ್ 3: ರಾಜ್ಯಾದ್ಯಂತ ಮುಂಗಾರು ಮಳೆ ಬಿರುಸುಗೊಂಡಿದ್ದು, ಹಲವು ಜಿಲ್ಲೆಗಳಲ್ಲಿ ನದಿ-ಹಳ್ಳಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಪ್ರಮುಖ ಜಲಾಶಯಗಳಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಹಲವು ಅಣೆಕಟ್ಟುಗಳು ಭರ್ತಿಯ ಹಂತ ತಲುಪಿವೆ. ಅನೇಕ ಕಡೆ ಸೇತುವೆಗಳು ಹಾಗೂ ರಸ್ತೆಗಳು ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದ್ದು, ನದಿ ತೀರದ ಗ್ರಾಮಗಳು ಮತ್ತು ಕೃಷಿ ಜಮೀನುಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಹೈ ಅಲರ್ಟ
ಬೆಳಗಾವಿ ಜಿಲ್ಲೆಯಲ್ಲಿ ಮಾರ್ಕಂಡೇಯ ನದಿ ಉಕ್ಕಿ ಹರಿಯುತ್ತಿದ್ದು, ಕಡೋಲಿ ಹಾಗೂ ಅಂಬೇವಾಡಿ ಭಾಗದ ನೂರಾರು ಎಕರೆ ಕೃಷಿ ಭೂಮಿ ಜಲಾವೃತವಾಗಿದೆ. ಖಾನಾಪುರ-ಮಂತುರ್ಗಾ ನಡುವಿನ ಮಲಪ್ರಭಾ ನದಿಯ ಸೇತುವೆ ನೀರಿನಲ್ಲಿ ಮುಳುಗಿದ್ದು, ಸಂಚಾರ ಸ್ಥಗಿತಗೊಂಡಿದೆ.
ನೆರೆಯ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ 1.23 ಲಕ್ಷ ಕ್ಯೂಸೆಕ್ ನೀರನ್ನು ಹರಿಬಿಡಲಾಗಿದ್ದು, ಚಿಕ್ಕೋಡಿ ತಾಲೂಕಿನ ಮುಲ್ಲಾನಕಿ ಗ್ರಾಮದಲ್ಲಿರುವ ದೂದಗಂಗಾ ನದಿಯ ನೀರಿನ ಮಟ್ಟ ಏರಿಕೆಯಾಗಿ ಮನ್ಸೂರ ಶಾ ಅಲಿ ದರ್ಗಾ ಜಲಾವೃತಗೊಂಡಿದೆ. ರಾಯಭಾಗ ತಾಲೂಕಿನ ಕುಡಚಿ ಸೇತುವೆ ಮೇಲಿನ ವಾಹನ ಸಂಚಾರವನ್ನೂ ಮುನ್ನೆಚ್ಚರಿಕೆ ಕ್ರಮವಾಗಿ ಸಂಪೂರ್ಣ ನಿಷೇಧಿಸಲಾಗಿದೆ.
ದಾವಣಗೆರೆ, ಹಾವೇರಿಯಲ್ಲಿ ರಸ್ತೆ ಸಂಪರ್ಕ ಕಡಿತ
ದಾವಣಗೆರೆ ಜಿಲ್ಲೆಯಲ್ಲಿ ತುಂಗಭದ್ರಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಉಕ್ಕಡಗಾತ್ರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ನೀರಿನಲ್ಲಿ ಮುಳುಗಿವೆ. ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ವರದಾ ನದಿಯ ನೀರಿನ ಮಟ್ಟ ಏರಿಕೆಯಾಗಿದ್ದು, ಕಳಸೂರು ಗ್ರಾಮದ ಬ್ರಿಡ್ಜ್-ಕಂ-ಬ್ಯಾರೇಜ್ ಸಂಪೂರ್ಣ ಜಲಾವೃತಗೊಂಡಿದೆ.
ಉತ್ತರ ಕನ್ನಡದಲ್ಲಿ ಅಪಾಯಕಾರಿ ಪರಿಸ್ಥಿತಿ
ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಉಂಚಳ್ಳಿ ಹಾಗೂ ಶಿವಗಂಗಾ ಜಲಪಾತಗಳು ಮೈದುಂಬಿ ಹರಿಯುತ್ತಿವೆ. ದಾಂಡೇಲಿಯಲ್ಲಿ ಮನೆಯ ಗೋಡೆ ಕುಸಿದು ಇಬ್ಬರು ವೃದ್ಧೆಯರು ಗಾಯಗೊಂಡಿದ್ದಾರೆ. ಅಂಕೋಲಾ ತಾಲೂಕಿನ ಅಗಸೂರು (ಸರಳೆಬೈಲು) ಸಮೀಪ ರಾಷ್ಟ್ರೀಯ ಹೆದ್ದಾರಿ-52 ಹದಗೆಟ್ಟು ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದರಿಂದ ಗ್ರಾಮಸ್ಥರು ಹೆದ್ದಾರಿಯಲ್ಲೇ ಗಿಡ ನೆಟ್ಟು ಪ್ರತಿಭಟನೆ ನಡೆಸಿದರು. ಚಿಕ್ಕಮಗಳೂರು ಜಿಲ್ಲೆಯ ಕಳಸ ಸಮೀಪ ಕುದುರೆಮುಖ-ನೇತ್ರಾವತಿ ಪೀಕ್ ಮಾರ್ಗದಲ್ಲಿ ಉಕ್ಕಿ ಹರಿಯುತ್ತಿರುವ ಹಳ್ಳವನ್ನು ಹಗ್ಗದ ನೆರವಿನಿಂದ ದಾಟುವ ಮೂಲಕ ಪ್ರವಾಸಿಗರು ಅಪಾಯಕಾರಿಯಾಗಿ ವರ್ತಿಸಿದ್ದಾರೆ.
ಶಿವಮೊಗ್ಗ, ಹಾಸನದಲ್ಲಿ ಮಳೆಯ ಆರ್ಭಟ
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಕುಮುದ್ವತಿ ನದಿ ಉಕ್ಕಿ ಹರಿಯುತ್ತಿದ್ದು, 21 ಅಡಿ ಎತ್ತರ ಹಾಗೂ 1.82 ಟಿಎಂಸಿ ಸಾಮರ್ಥ್ಯದ ಅಂಜನಾಪುರ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲೂ ಮಳೆ ಮುಂದುವರಿದಿದ್ದು, ಕೇವಲ ಎರಡು ದಿನಗಳಲ್ಲಿ ಹೇಮಾವತಿ ಜಲಾಶಯಕ್ಕೆ 2.042 ಟಿಎಂಸಿ ನೀರು ಹರಿದು ಬಂದಿದೆ. 37.103 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 28.022 ಟಿಎಂಸಿ ನೀರು ಸಂಗ್ರಹವಾಗಿದ್ದು, 12,859 ಕ್ಯೂಸೆಕ್ ಒಳಹರಿವು ಮತ್ತು 500 ಕ್ಯೂಸೆಕ್ ಹೊರಹರಿವು ದಾಖಲಾಗಿದೆ.
ಸಕಲೇಶಪುರದ ಎಡಕುಮಾರಿ-ಶಿರವಾಗಿಲು ನಡುವಿನ ರೈಲು ಹಳಿಗಳ ಮೇಲೆ ಭೂಕುಸಿತ ಉಂಟಾಗಿ ಹಳಿ ಕೆಸರಿನಿಂದ ಆವೃತವಾಗಿದೆ. ಮತ್ತೆ ಮಣ್ಣು ಜರಿಯದಂತೆ ತಡೆಯಲು ರೈಲ್ವೆ ಸಿಬ್ಬಂದಿ ಮರಳಿನ ಚೀಲಗಳಿಂದ ತಡೆಗೋಡೆ ನಿರ್ಮಿಸುತ್ತಿದ್ದು, ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಈ ಮಾರ್ಗದ ಹಲವು ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ.