ರಾಯಪುರ, ಸೆ 10 : (ಸಮದರ್ಶಿ ಸುದ್ದಿ) - ನವರಾತ್ರಿ ಸಂದರ್ಭದಲ್ಲಿ ನಡೆಯುವ ಗರ್ಬಾ ಮತ್ತು ದಾಂಡಿಯಾ ಕಾರ್ಯಕ್ರಮಗಳಿಗೆ ಮುಸ್ಲಿಮರ ಪ್ರವೇಶ ನಿಷೇಧಿಸಬೇಕು ಎಂಬ ಬೇಡಿಕೆಯನ್ನು ಕೇಂದ್ರ ಸಚಿವ ರಾಮದಾಸ್ ಅಠಾವಳೆ ತೀವ್ರವಾಗಿ ವಿರೋಧಿಸಿದ್ದು, ಭಾರತ ಸಂವಿಧಾನದ ಆಧಾರದ ಮೇಲೆ ನಡೆಯುವ ದೇಶವೇ ಹೊರತು ಯಾವುದೇ ಸಮುದಾಯವನ್ನು ಬಹಿಷ್ಕರಿಸುವ ಮೂಲಕ ನಡೆಯುವ ದೇಶವಲ್ಲ ಎಂದು ಹೇಳಿದ್ದಾರೆ.
ರಾಯ್‌ಪುರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮದ ಆಧಾರದ ಮೇಲೆ ಒಂದು ಸಮುದಾಯದ ಜನರನ್ನು ಹಬ್ಬ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಹೊರಗಿಡುವ ಪ್ರಯತ್ನ ಸರಿಯಲ್ಲ. ಇಂತಹ ಬಹಿಷ್ಕಾರದ ನಿಲುವು ಅನ್ಯಾಯವಾಗಿದ್ದು, ಸಂವಿಧಾನದ ಆಶಯಕ್ಕೂ ವಿರುದ್ಧವಾಗಿದೆ ಎಂದು ಪ್ರತಿಪಾದಿಸಿದರು.
ನವರಾತ್ರಿ ಸಂದರ್ಭದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಗರ್ಬಾ ಮತ್ತು ದಾಂಡಿಯಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ಕಾರ್ಯಕ್ರಮಗಳಲ್ಲಿ ಮುಸ್ಲಿಮರಿಗೆ ಪ್ರವೇಶ ನೀಡಬಾರದು ಎಂಬ ಬೇಡಿಕೆ ಕೆಲವು ಸಂಘಟನೆಗಳಿಂದ ಕೇಳಿಬಂದಿರುವ ಹಿನ್ನೆಲೆಯಲ್ಲಿ ಅಠಾವಳೆ ಈ ಪ್ರತಿಕ್ರಿಯೆ ನೀಡಿದ್ದಾರೆ.
ಮಹಾರಾಷ್ಟ್ರದ ಕೆಲವು ವಿಶ್ವ ಹಿಂದೂ ಪರಿಷತ್ ನಾಯಕರು ಮೂರ್ತಿಪೂಜೆಯನ್ನು ಒಪ್ಪದವರು ಇಂತಹ ಧಾರ್ಮಿಕ ಕಾರ್ಯಕ್ರಮಗಳಿಂದ ದೂರವಿರಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವುದನ್ನೂ ಅಠಾವಳೆ ವಿರೋಧಿಸಿದರು. ಇಂತಹ ನಿಲುವನ್ನು ಯಾವುದೇ ರೀತಿಯಲ್ಲೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ಭಾರತ ವಿವಿಧ ಧರ್ಮ, ಜಾತಿ ಮತ್ತು ಸಮುದಾಯಗಳು ಒಟ್ಟಾಗಿ ಬದುಕುತ್ತಿರುವ ದೇಶ. ಒಂದು ಸಮುದಾಯದ ಹಬ್ಬದಲ್ಲಿ ಮತ್ತೊಂದು ಸಮುದಾಯದವರು ಭಾಗವಹಿಸುವುದು ದೇಶದ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಭಾಗವಾಗಿದೆ. ಇದನ್ನು ತಡೆಯುವ ಬದಲು ಸಮುದಾಯಗಳ ನಡುವೆ ಸೌಹಾರ್ದತೆ ಮತ್ತು ಪರಸ್ಪರ ಗೌರವವನ್ನು ಬೆಳೆಸಬೇಕು ಎಂದು ಹೇಳಿದರು.
ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಒಗ್ಗಟ್ಟು ಮತ್ತಷ್ಟು ಗಟ್ಟಿಯಾಗಬೇಕಿದೆ. ಹಬ್ಬಗಳು ಜನರನ್ನು ಪರಸ್ಪರ ಹತ್ತಿರ ತರುವ ಸಂದರ್ಭಗಳಾಗಬೇಕೇ ಹೊರತು ಧರ್ಮದ ಹೆಸರಿನಲ್ಲಿ ವಿಭಜನೆ ಉಂಟುಮಾಡುವ ವೇದಿಕೆಗಳಾಗಬಾರದು ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು.
“ಭಾರತದಲ್ಲಿ ಹಿಂದೂಗಳು, ಮುಸ್ಲಿಮರು, ಸಿಖ್ಖರು, ಕ್ರೈಸ್ತರು, ಜೈನರು, ಬೌದ್ಧರು, ಲಿಂಗಾಯತರು ಮತ್ತು ಪಾರ್ಸಿಗಳು ಸೇರಿದಂತೆ ಹಲವು ಧರ್ಮ ಹಾಗೂ ಸಮುದಾಯಗಳಿಗೆ ಸೇರಿದ ಜನರು ವಾಸಿಸುತ್ತಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್ ನೇತೃತ್ವದಲ್ಲಿ ರೂಪುಗೊಂಡ ಸಂವಿಧಾನ ಪ್ರತಿಯೊಬ್ಬರಿಗೂ ಸಮಾನ ನ್ಯಾಯ ಮತ್ತು ರಕ್ಷಣೆ ನೀಡಿದೆ” ಎಂದು ಅಠಾವಳೆ ಹೇಳಿದರು.
ದೇಶದ ಸಂವಿಧಾನವು ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡದೆ ಎಲ್ಲ ನಾಗರಿಕರಿಗೂ ಸಮಾನ ಹಕ್ಕುಗಳನ್ನು ನೀಡಿದೆ. ಹೀಗಿರುವಾಗ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಹಬ್ಬಗಳಿಂದ ದೂರವಿಡುವ ಪ್ರಯತ್ನ ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗುತ್ತದೆ ಎಂದು ಅವರು ಹೇಳಿದರು.
ದೇಶದಲ್ಲಿ ಕೋಮು ಸೌಹಾರ್ದತೆ ಕಾಪಾಡುವುದು ಎಲ್ಲರ ಹೊಣೆಗಾರಿಕೆಯಾಗಿದ್ದು, ಹಿಂದೂ-ಮುಸ್ಲಿಂ ಸೇರಿದಂತೆ ಎಲ್ಲ ಸಮುದಾಯಗಳು ಪರಸ್ಪರರ ಹಬ್ಬಗಳನ್ನು ಗೌರವಿಸಿ ಶಾಂತಿ ಮತ್ತು ಸೌಹಾರ್ದದಿಂದ ಬದುಕಬೇಕು ಎಂದು ಅಠಾವಳೆ ಕರೆ ನೀಡಿದರು.