ಕೊಲ್ಹಾಪುರ, ಆಗಸ್ಟ್ 3: ಅಕ್ರಮ ಗರ್ಭಪಾತ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ವೈದ್ಯ ಚಂದ್ರಕಾಂತ ಗುಂಡು ಗಾಯಕ್ವಾಡ (78) ವಿರುದ್ಧದ ತನಿಖೆಯಲ್ಲಿ ಬೆಚ್ಚಿಬೀಳಿಸುವ ಮಾಹಿತಿಗಳು ಹೊರಬಿದ್ದಿವೆ. ಸುಮಾರು 300 ಅಕ್ರಮ ಗರ್ಭಪಾತಗಳನ್ನು ನಡೆಸಿರುವುದಾಗಿ ಆತ ಒಪ್ಪಿಕೊಂಡಿರುವುದರ ಜೊತೆಗೆ, "ಗಂಡು ಮಗುವೇ ಜನಿಸುವ" ಔಷಧಿ ನೀಡುತ್ತಿದ್ದ ಎಂಬ ಸಂಗತಿಯೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗರ್ಭಪಾತ ಮಾಡಿಸಿಕೊಂಡ ಸುಮಾರು 40 ಮಹಿಳೆಯರ ಹೆಸರುಗಳು ಪೊಲೀಸರ ಕೈಗೆ ಸಿಕ್ಕಿದ್ದು, ಅವರಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸುವ ಕಾರ್ಯ ಮುಂದುವರಿದಿದೆ.
ಕದಂವಾಡಿ ರಸ್ತೆಯ ಭೀಮನಗರ ಹೌಸಿಂಗ್ ಸೊಸೈಟಿಯಲ್ಲಿರುವ ತನ್ನ ಬಂಗಲೆಯಲ್ಲೇ ಗಾಯಕ್ವಾಡ ಆಸ್ಪತ್ರೆ ನಡೆಸುತ್ತಿದ್ದ. ಅಲ್ಲಿ ಶಸ್ತ್ರಚಿಕಿತ್ಸಾ ಕೊಠಡಿ, ತೀವ್ರ ನಿಗಾ ಘಟಕ, ಗರ್ಭಪಾತದ ಬಳಿಕ ಮಹಿಳೆಯರನ್ನು ಇರಿಸಲು ಮೂರು ಹಾಸಿಗೆಗಳ ವ್ಯವಸ್ಥೆ, ಸ್ನಾನಗೃಹ ಹಾಗೂ ವಿಶ್ರಾಂತಿ ಕೊಠಡಿಯನ್ನು ಸಿದ್ಧಪಡಿಸಲಾಗಿತ್ತು. ಆಸ್ಪತ್ರೆಯ ಎಲ್ಲಾ ಕಾರ್ಯಚಟುವಟಿಕೆಗಳನ್ನು ಆತನ ಸಹಾಯಕ ಶಬ್ಬೀರ ಹಜಾರೆ ನೋಡಿಕೊಳ್ಳುತ್ತಿದ್ದ. ಯಾವುದೇ ಅಧಿಕೃತ ದಾಖಲೆಗಳು ಅಥವಾ ಪ್ರಕರಣದ ದಾಖಲೆಪತ್ರಗಳಿಲ್ಲದೆ ಆಸ್ಪತ್ರೆ ನಡೆಸಲಾಗುತ್ತಿದ್ದು, ಅಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದವು ಎಂಬುದು ತನಿಖೆಯಿಂದ ಬಹಿರಂಗವಾಗಿದೆ.
ಗರ್ಭಪಾತದ ಬಳಿಕ ಭ್ರೂಣಗಳನ್ನು ವಿಲೇವಾರಿ ಮಾಡಲು ಗಾಯಕ್ವಾಡ ಮಧ್ಯವರ್ತಿಗಳ ನೆರವು ಪಡೆಯುತ್ತಿದ್ದ. ಅವರಿಗೆ ಕಮಿಷನ್ ಜೊತೆಗೆ ಪ್ರತ್ಯೇಕ ಹಣ ನೀಡುವ ಮೂಲಕ ಈ ಅಕ್ರಮ ಜಾಲಕ್ಕೆ ಹಲವರನ್ನು ಸೆಳೆದುಕೊಂಡಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಗಾಯಕ್ವಾಡ 2023ರಲ್ಲೇ ವೈದ್ಯಕೀಯ ಸೇವೆಯಿಂದ ನಿವೃತ್ತಿಯಾಗುವುದಾಗಿ ಪರಿಚಯಸ್ಥರಿಗೆ ತಿಳಿಸಿದ್ದ. ತನ್ನ ಆಸ್ಪತ್ರೆಯ ಪರವಾನಗಿ, ಮಹಾನಗರ ಪಾಲಿಕೆಯ ಅನುಮತಿ ಹಾಗೂ ವೈದ್ಯರ ಸಂಘದ ನೋಂದಣಿಗಳನ್ನು ನವೀಕರಿಸಿರಲಿಲ್ಲ. ಈ ಬಗ್ಗೆ ವೈದ್ಯರ ಸಂಘಕ್ಕೂ ಪತ್ರ ಬರೆದಿದ್ದರೂ, ಬಳಿಕವೂ ಅಕ್ರಮವಾಗಿ ಮಹಿಳೆಯರ ಶಸ್ತ್ರಚಿಕಿತ್ಸೆ ಹಾಗೂ ಗರ್ಭಪಾತಗಳನ್ನು ನಡೆಸಿರುವುದು ತನಿಖೆಯಲ್ಲಿ ದೃಢಪಟ್ಟಿದೆ.
ಪ್ರಕರಣದಲ್ಲಿ ಬಂಧಿತರಾಗಿರುವ ಮಹಿಳಾ ಏಜೆಂಟ್ ರೇಖಾ ವರುಟೆ ಮತ್ತು ಸಾಗರ ತರಾಳ ಅವರನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆಗಸ್ಟ್ 6ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಗರ್ಭಿಣಿಯರನ್ನು ಗಾಯಕ್ವಾಡ ಬಳಿ ಕಳುಹಿಸಿ ಗರ್ಭಪಾತ ಮಾಡಿಸುತ್ತಿದ್ದ ಆರೋಪ ಇವರ ಮೇಲಿದೆ. ಇವರು ಎಷ್ಟು ವರ್ಷಗಳಿಂದ ಗಾಯಕ್ವಾಡ ಸಂಪರ್ಕದಲ್ಲಿದ್ದರು, ಎಷ್ಟು ಮಹಿಳೆಯರನ್ನು ಕಳುಹಿಸಿದ್ದರು ಹಾಗೂ ಈ ಜಾಲದಲ್ಲಿ ಇನ್ನಿತರ ವೈದ್ಯರು ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಗಾಯಕ್ವಾಡನ ಪತ್ನಿ, ಪುತ್ರ ಹಾಗೂ ಪುತ್ರಿ ಮೂವರೂ ವೈದ್ಯರಾಗಿದ್ದು, ಮುಂಬೈ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆತ ಮಾತ್ರ ಕೊಲ್ಹಾಪುರದ ಮನೆಯಲ್ಲಿ ಒಬ್ಬನೇ ವಾಸಿಸುತ್ತಿದ್ದ. ಬಂಧನದ ವೇಳೆ ಮನೆಯೊಳಗೆ ಅಸ್ವಚ್ಛ ಪರಿಸರ, ಅಸ್ತವ್ಯಸ್ತವಾಗಿ ಬಿದ್ದಿದ್ದ ವಸ್ತುಗಳು ಕಂಡುಬಂದಿದ್ದು, ಗಾಯಕ್ವಾಡ ಧರಿಸಿದ್ದ ಬಟ್ಟೆಗಳೂ ಮಲಿನ ಸ್ಥಿತಿಯಲ್ಲಿದ್ದವು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.