LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ತಮಿಳುನಾಡಿನಲ್ಲಿ ಟಿವಿಕೆ ಸರ್ಕಾರ ರಚನೆಗೆ ದಾರಿ ಸುಗಮ

ಚೆನ್ನೈ, ಮೇ 8 : ತಮಿಳುನಾಡಿನಲ್ಲಿ ನಾಲ್ಕು ದಿನಗಳಿಂದ ಮುಂದುವರಿದ ರಾಜಕೀಯ ಅನಿಶ್ಚಿತತೆ ಹಾಗೂ ತೀವ್ರ ರಾಜಕೀಯ ಮಾತುಕತೆಗಳ ಬಳಿಕ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಸರ್ಕಾರ ರಚನೆಗೆ ಅಗತ್ಯವಾದ ಬಹುಮತದ ಬೆಂಬಲವನ್ನು ಕೊನೆಗೂ ಪಡೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಶುಕ್ರವಾರ ಸಂಜೆ ವಿಜಯ್‌ ಅವರ ಚೆನ್ನೈ ನಿವಾಸದ ಎದುರು ಬೆಂಬಲಿಗರು ಜಮಾಯಿಸಿ ಟಿವಿಕೆ ಪರ ಘೋಷಣೆಗಳನ್ನು ಕೂಗಿ ಸಂಭ್ರಮಾಚರಣೆ ನಡೆಸಿದರು. ಸರ್ಕಾರ ರಚನೆಗೆ ಅಗತ್ಯ ಸಂಖ್ಯಾಬಲವನ್ನು ವಿಜಯ್‌ ಖಚಿತಪಡಿಸಿಕೊಂಡಿದ್ದಾರೆ ಎಂಬ ಸುದ್ದಿ ಹೊರಬಿದ್ದ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಚಟುವಟಿಕೆಗಳು ಗರಿಗೆದರಿದವು.

ಮೂಲಗಳ ಪ್ರಕಾರ ವಿಜಯ್‌ ಶುಕ್ರವಾರ ಸಂಜೆ ತಮಿಳುನಾಡು ರಾಜ್ಯಪಾಲ ಆರ್‌.ವಿ. ಅರ್ಲೇಕರ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ಸಂಜೆ 6 ಗಂಟೆ ಸುಮಾರಿಗೆ ಈ ಭೇಟಿ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ ತನ್ನ ಮೊದಲ ಚುನಾವಣೆಯಲ್ಲೇ 234 ಸ್ಥಾನಗಳ ಪೈಕಿ 108 ಸ್ಥಾನಗಳನ್ನು ಗೆದ್ದು ಡಿಎಂಕೆ ಹಾಗೂ ಎಐಎಡಿಎಂಕೆಯ 62 ವರ್ಷಗಳ ರಾಜಕೀಯ ಪ್ರಾಬಲ್ಯಕ್ಕೆ ಭಾರೀ ಹೊಡೆತ ನೀಡಿತ್ತು. ಆದರೆ ಸ್ಪಷ್ಟ ಬಹುಮತದ ಬೆಂಬಲವಿಲ್ಲದೆ ಸರ್ಕಾರ ರಚನೆಗೆ ಅವಕಾಶ ನೀಡುವುದಿಲ್ಲ ಎಂದು ರಾಜ್ಯಪಾಲರು ಸ್ಪಷ್ಟಪಡಿಸಿದ್ದರಿಂದ ಟಿವಿಕೆ ಸಂಕಷ್ಟಕ್ಕೆ ಸಿಲುಕಿತ್ತು.

ಬುಧವಾರ ಮತ್ತು ಗುರುವಾರ ಎರಡು ಸುತ್ತಿನ ಮಾತುಕತೆಗಳು ನಡೆದರೂ ರಾಜ್ಯಪಾಲರು ತಮ್ಮ ನಿಲುವು ಬದಲಿಸಿರಲಿಲ್ಲ. 118 ಸದಸ್ಯರ ಬಹುಮತದ ಸದನದಲ್ಲಿ ಕನಿಷ್ಠ 118 ಶಾಸಕರ ಬೆಂಬಲ ಪತ್ರಗಳನ್ನು ಸಲ್ಲಿಸಬೇಕು ಎಂದು ಅವರು ಒತ್ತಾಯಿಸಿದ್ದರು.

ವಿಜಯ್‌ ಅವರನ್ನು ಹೊರತುಪಡಿಸಿ ಟಿವಿಕೆಗೆ 107 ಶಾಸಕರ ಬೆಂಬಲ ಮಾತ್ರ ಇತ್ತು. ಜೊತೆಗೆ ವಿಜಯ್‌ ತಿರುಚ್ಚಿ (ಪೂರ್ವ) ಹಾಗೂ ಪೆರಂಬೂರು ಕ್ಷೇತ್ರಗಳಿಂದ ಸ್ಪರ್ಧಿಸಿ ಎರಡೂ ಕ್ಷೇತ್ರಗಳಲ್ಲಿ ಗೆದ್ದಿರುವುದರಿಂದ ಪ್ರಮಾಣವಚನ ಸ್ವೀಕರಿಸುವ ಮೊದಲು ಒಂದು ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ಎದುರಾಗಿದೆ. ಇದರಿಂದ ಟಿವಿಕೆಗೆ ಹೆಚ್ಚುವರಿಯಾಗಿ ಕನಿಷ್ಠ 11 ಶಾಸಕರ ಬೆಂಬಲ ಅಗತ್ಯವಿತ್ತು.

ಈ ನಡುವೆ ಡಿಎಂಕೆ ನೇತೃತ್ವದ ಮೈತ್ರಿಕೂಟದಿಂದ ಹೊರಬಂದ ಕಾಂಗ್ರೆಸ್‌ನ 5 ಶಾಸಕರು ವಿಜಯ್‌ಗೆ ಬೆಂಬಲ ಸೂಚಿಸಿದರು. ಬಳಿಕ ವಿಜಯ್‌ ವಿದುತಲೈ ಚಿರುತೈಗಲ್ ಕಚ್ಚಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಹಾಗೂ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ನಾಯಕರೊಂದಿಗೆ ಸರಣಿ ಮಾತುಕತೆ ನಡೆಸಿದರು.

ಇದುವರೆಗೆ ಡಿಎಂಕೆಯ ಮಿತ್ರಪಕ್ಷಗಳಾಗಿದ್ದ ವಿಸಿಕೆ, ಸಿಪಿಎಂ ಹಾಗೂ ಸಿಪಿಐ ಪಕ್ಷಗಳು ಅಂತಿಮವಾಗಿ ಟಿವಿಕೆಗೆ ಬೆಂಬಲ ನೀಡಲು ಒಪ್ಪಿಕೊಂಡಿವೆ ಎಂದು ಮೂಲಗಳು ತಿಳಿಸಿವೆ. ವಿಸಿಕೆ, ಸಿಪಿಎಂ ಮತ್ತು ಸಿಪಿಐ ತಲಾ 2 ಶಾಸಕರ ಬೆಂಬಲ ನೀಡಲು ಸಮ್ಮತಿಸಿರುವುದರಿಂದ ಸರ್ಕಾರ ರಚನೆಗೆ ಅಗತ್ಯ ಸಂಖ್ಯಾಬಲ ಟಿವಿಕೆಗೆ ದೊರೆತಿದೆ ಎಂದು ಹೇಳಲಾಗಿದೆ.

ಇದಕ್ಕೂ ಮೊದಲು ಡಿಎಂಕೆ ಪರ್ಯಾಯ ಸರ್ಕಾರ ರಚನೆಗಾಗಿ ತನ್ನ ಬದ್ಧವೈರಿ ಎಐಎಡಿಎಂಕೆಯೊಂದಿಗೂ ಕೈಜೋಡಿಸಬಹುದು ಎಂಬ ರಾಜಕೀಯ ಚರ್ಚೆಗಳು ತೀವ್ರಗೊಂಡಿದ್ದವು. ಆದರೆ ಎಡಪಕ್ಷಗಳು ಹಾಗೂ ವಿಸಿಕೆ ವಿಜಯ್‌ ಪರ ನಿಲ್ಲುವ ಮೂಲಕ ರಾಜ್ಯ ರಾಜಕೀಯದಲ್ಲಿ ಮಹತ್ವದ ತಿರುವು ಉಂಟಾಗಿದೆ.

ಈ ಬೆಳವಣಿಗೆ ನಡುವೆ ಲೋಕಸಭೆಯಲ್ಲಿ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದ ಸಂಸದರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸುವಂತೆ ಡಿಎಂಕೆ ಸಂಸದೆ ಕನಿಮೋಳಿ ಕರುಣಾನಿಧಿ ಲೋಕಸಭೆ ಸಭಾಧ್ಯಕ್ಷರಿಗೆ ಪತ್ರ ಬರೆದಿರುವುದು ರಾಜಕೀಯ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ಕಾಂಗ್ರೆಸ್‌ನೊಂದಿಗಿನ ಡಿಎಂಕೆಯ ಮೈತ್ರಿ ಅಂತ್ಯಗೊಂಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸದಸ್ಯರೊಂದಿಗೆ ಡಿಎಂಕೆ ಸದಸ್ಯರು ಅಕ್ಕಪಕ್ಕ ಕುಳಿತುಕೊಳ್ಳುತ್ತಿರುವ ಪ್ರಸ್ತುತ ಆಸನ ವ್ಯವಸ್ಥೆಯನ್ನು ಬದಲಾಯಿಸಬೇಕು ಎಂದು ಕನಿಮೋಳಿ ಮನವಿ ಮಾಡಿದ್ದಾರೆ.

ಬದಲಾದ ರಾಜಕೀಯ ಪರಿಸ್ಥಿತಿ ಹಾಗೂ ಕಾಂಗ್ರೆಸ್‌ನೊಂದಿಗಿನ ಮೈತ್ರಿ ಕೊನೆಗೊಂಡಿರುವುದರಿಂದ ಈಗಿನ ಆಸನ ವ್ಯವಸ್ಥೆ ಮುಂದುವರಿಸುವುದು ಸೂಕ್ತವಲ್ಲ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ನಡುವೆ ರಾಜ್ಯಪಾಲರ ಮುಂದಿನ ನಡೆ ಹಾಗೂ ಟಿವಿಕೆ ಸರ್ಕಾರ ರಚನೆ ಕುರಿತು ಅಧಿಕೃತ ಘೋಷಣೆಯತ್ತ ಈಗ ತಮಿಳುನಾಡಿನ ರಾಜಕೀಯ ವಲಯದ ಗಮನ ನೆಟ್ಟಿದೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST