LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ನ್ಯಾಯಾಂಗದಲ್ಲಿಯೂ ಭ್ರಷ್ಟಾಚಾರ ಇದೆ ಮತ್ತು ನ್ಯಾಯಾಧೀಶರನ್ನು ಪವಿತ್ರ ಗೋವುಗಳಂತೆ ಪರಿಗಣಿಸಬೇಕಿಲ್ಲ : ಮದ್ರಾಸ ಹೈಕೋರ್ಟ

ಹೊಸದಿಲ್ಲಿ, ಮೇ 29 : ನ್ಯಾಯಾಂಗವನ್ನು ಅವಹೇಳನಾತ್ಮಕವಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿ ತಮಿಳು ಚಲನಚಿತ್ರ ಕರುಪ್ಪು ನಿಷೇಧಕ್ಕೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ ವಜಾಗೊಳಿಸಿದ್ದು, ನ್ಯಾಯಾಂಗದಲ್ಲಿಯೂ ಭ್ರಷ್ಟಾಚಾರ ಇದೆ ಮತ್ತು ನ್ಯಾಯಾಧೀಶರನ್ನು ಪವಿತ್ರ ಗೋವುಗಳಂತೆ ಪರಿಗಣಿಸಬೇಕಿಲ್ಲ ಎಂದು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಹಾಗೂ ನ್ಯಾಯಮೂರ್ತಿ ವಿ. ಲಕ್ಷ್ಮಿನಾರಾಯಣನ್ ಅವರಿದ್ದ ವಿಭಾಗೀಯ ಪೀಠ ಅರ್ಜಿಯ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ನ್ಯಾಯಪೀಠ, ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಇದೆ ಎಂಬುದನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ. ಹಿಂದೆ ಭ್ರಷ್ಟ ನ್ಯಾಯಾಧೀಶರು ಇದ್ದರು, ಈಗಲೂ ಇದ್ದಾರೆ. ನ್ಯಾಯಾಂಗ ಭ್ರಷ್ಟಾಚಾರದ ಪ್ರಕರಣಗಳನ್ನು ನ್ಯಾಯಾಲಯ ಎದುರಿಸಿದ್ದು, ಅಂತಹ ಕಪ್ಪು ಕುರಿಗಳ ವಿರುದ್ಧ ಮದ್ರಾಸ್ ಹೈಕೋರ್ಟನ ಪೂರ್ಣ ಪೀಠ ಕ್ರಮ ಕೈಗೊಂಡಿದೆ ಎಂದು ತಿಳಿಸಿದೆ.

ಕೆಲವು ಪ್ರಕರಣಗಳಲ್ಲಿ ವಕೀಲರ ಸಂಘದ ಸದಸ್ಯರ ಸಹಕಾರದಿಂದಲೂ ಭ್ರಷ್ಟಾಚಾರ ನಡೆಯುತ್ತಿರುವುದು ಕಂಡುಬಂದಿದೆ. ಇಂತಹ ಪ್ರಕರಣಗಳನ್ನು ಪತ್ತೆಹಚ್ಚಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಹೈಕೋರ್ಟ ನಿರಂತರ ನಿಗಾ ವಹಿಸುತ್ತಿದೆ ಎಂದು ನ್ಯಾಯಪೀಠ ಹೇಳಿದೆ.

ಕರುಪ್ಪು ಚಿತ್ರದಲ್ಲಿನ ಒಂದು ದೃಶ್ಯದಲ್ಲಿ ನ್ಯಾಯಾಧೀಶರೊಬ್ಬರು ಲಂಚ ಸ್ವೀಕರಿಸುವುದು ಹಾಗೂ ಮಾದಕ ವಸ್ತು ಸೇವಿಸುವುದನ್ನು ತೋರಿಸಲಾಗಿದೆ. ಇದು ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾಗಿದ್ದು, ನ್ಯಾಯಾಧೀಶರ ಗೌರವಕ್ಕೆ ಧಕ್ಕೆ ಉಂಟುಮಾಡುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು. ಚಿತ್ರದ ನಿರ್ದೇಶಕ ಬಾಲಾಜಿ ಭಾರತೀಯ ನ್ಯಾಯಾಂಗ ವ್ಯವಸ್ಥೆಯನ್ನು ಟೀಕಿಸಿದ್ದಾರೆ ಎಂದು ಕೂಡ ಆರೋಪಿಸಿದ್ದರು.

ಆದರೆ ನ್ಯಾಯಾಲಯ, ಚಿತ್ರದಲ್ಲಿ ನ್ಯಾಯಾಂಗ ವ್ಯವಸ್ಥೆಯನ್ನು ಅತಿರಂಜಿತವಾಗಿ ಚಿತ್ರಿಸಲಾಗಿದೆ ಎಂಬುದನ್ನು ಒಪ್ಪಿಕೊಂಡರೂ, ತಮಿಳು ಚಿತ್ರರಂಗದಲ್ಲಿ ಹಲವು ವಿಷಯಗಳನ್ನು ನಾಟಕೀಯವಾಗಿ ಬಿಂಬಿಸುವುದು ಸಾಮಾನ್ಯವಾಗಿದೆ ಎಂದು ಹೇಳಿತು.

ಕಲಾವಿದನಿಗೆ ತನ್ನ ದೃಷ್ಟಿಕೋನದ ಪ್ರಕಾರ ಯಾವುದೇ ವಿಷಯ ಅಥವಾ ಪರಿಸ್ಥಿತಿಯನ್ನು ಅಭಿವ್ಯಕ್ತಿಸುವ ಹಕ್ಕಿದೆ. ಕೇವಲ ನ್ಯಾಯಾಂಗದ ಕುರಿತ ಟೀಕೆ ಅಥವಾ ನಾಟಕೀಯ ಚಿತ್ರಣವಿದೆ ಎಂಬ ಕಾರಣಕ್ಕೆ ಚಿತ್ರವನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ಹೇಳಿದ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿತು.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST