ಬೆಳಗಾವಿ, ಮೇ 25 : ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವಸತಿ ನಿಲಯಗಳಿಗೆ ಊಟ ಪೂರೈಕೆ ಮಾಡುತ್ತಿರುವ ಗುತ್ತಿಗೆದಾರರಿಗೆ ನೀಡಬೇಕಾದ ಕೋಟ್ಯಂತರ ರೂಪಾಯಿ ಅನುದಾನವನ್ನು ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಲೋಕಸಭಾ ಸಂಸದ ಜಗದೀಶ ಶೆಟ್ಟರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಸೇರಿ ರಾಜ್ಯದ ಒಟ್ಟು 1939 ವಿದ್ಯಾರ್ಥಿ ವಸತಿ ನಿಲಯಗಳಿಗೆ ಕಳೆದ ಒಂದೂವರೆ ವರ್ಷಗಳಿಂದ ವಿದ್ಯಾರ್ಥಿಗಳ ಊಟ ವೆಚ್ಚ, ಕಟ್ಟಡ ಬಾಡಿಗೆ ಹಾಗೂ ನಿರ್ವಹಣಾ ವೆಚ್ಚ ಸೇರಿದಂತೆ 370 ಕೋಟಿಗೂ ಅಧಿಕ ಅನುದಾನ ಬಾಕಿ ಉಳಿದಿದೆ ಎಂದು ಅವರು ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಹಾಸ್ಟೆಲ್‌ಗಳಿಗೆ ಮಾತ್ರವೇ 29 ಕೋಟಿ ರೂಪಾಯಿ ಅನುದಾನ ಬಾಕಿ ಉಳಿದಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ಜತೆಗೆ ಚೆಲ್ಲಾಟವಾಡುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಪೋಷಕರು ನೂರಾರು ಕನಸುಗಳನ್ನು ಹೊತ್ತು ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂಬ ಆಶಯದಿಂದ ವಿದ್ಯಾಭ್ಯಾಸಕ್ಕಾಗಿ ಹಾಸ್ಟೆಲ್‌ಗಳಿಗೆ ಸೇರಿಸುತ್ತಾರೆ. ಆದರೆ ವಿದ್ಯಾರ್ಥಿಗಳಿಗೆ ಮೂಲಭೂತವಾಗಿ ದೊರಕಬೇಕಾದ ಸೌಲಭ್ಯಗಳಲ್ಲಿಯೇ ಸರ್ಕಾರ ಕೊರತೆ ಉಂಟು ಮಾಡುತ್ತಿರುವುದು ಖಂಡನೀಯ ಎಂದು ಅವರು ಹೇಳಿದ್ದಾರೆ.
ರಾಜ್ಯ ಸರ್ಕಾರ ಕೂಡಲೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಬಾಕಿ ಉಳಿಸಿಕೊಂಡಿರುವ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.