LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

‘ಮತದಾರರ ಹಕ್ಕು ಕಸಿಯುವುದಿಲ್ಲ’: ಫಾರಂ-7 ದುರ್ಬಳಕೆ ವಿವಾದದ ನಡುವೆ ಸಿಇಒ ಸ್ಪಷ್ಟನೆ

ಬೆಂಗಳೂರು, ಅ. 5 : (ಸಮದರ್ಶಿ ಸುದ್ದಿ) - ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಫಾರಂ-7 ಮೂಲಕ ಸಲ್ಲಿಕೆಯಾಗಿರುವ ಆಕ್ಷೇಪಣೆಗಳ ಆಧಾರದಲ್ಲಿ ಈವರೆಗೆ ಕರಡು ಮತದಾರರ ಪಟ್ಟಿಯಿಂದ ಯಾರ ಹೆಸರನ್ನೂ ಕೈಬಿಟ್ಟಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸ್ಪಷ್ಟಪಡಿಸಿದ್ದಾರೆ.

ನಗರದ ಅರಮನೆ ರಸ್ತೆಯಲ್ಲಿರುವ ಮುಖ್ಯ ಚುನಾವಣಾಧಿಕಾರಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಬ್ಬ ವ್ಯಕ್ತಿ ಒಂದು ದಿನಕ್ಕೆ ಗರಿಷ್ಠ 10 ಫಾರಂ-7 ಅರ್ಜಿಗಳನ್ನು ಸಲ್ಲಿಸಬಹುದು. ಇಡೀ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಒಬ್ಬರಿಗೆ ಗರಿಷ್ಠ 50 ಫಾರಂ-7 ಸಲ್ಲಿಸಲು ಅವಕಾಶವಿದೆ. ಅದಕ್ಕೂ ಹೆಚ್ಚಿನ ಅರ್ಜಿಗಳು ಬಂದರೆ ಮತದಾರರ ನೋಂದಣಾಧಿಕಾರಿ (ಇಆರ್‌ಒ) ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತಾರೆ ಎಂದರು.

ಮತದಾರರ ಮಾಹಿತಿ ಮೊದಲೇ ಮುದ್ರಿಸಿರುವ ಫಾರಂ-7 ಸಲ್ಲಿಸಲು ಅವಕಾಶವಿದೆಯೇ ಎಂಬ ಪ್ರಶ್ನೆಗೆ, “ಈ ಸಂಬಂಧ ಎಫ್‌ಐಆರ್‌ಗಳು ದಾಖಲಾಗಿವೆ. ಪ್ರಕರಣ ನ್ಯಾಯಾಂಗದ ಪರಿಗಣನೆಯಲ್ಲಿರುವುದರಿಂದ ಅದರ ಬಗ್ಗೆ ಏನನ್ನೂ ಹೇಳುವುದಿಲ್ಲ” ಎಂದು ಅನ್ಬುಕುಮಾರ್ ಪ್ರತಿಕ್ರಿಯಿಸಿದರು.

ಫಾರಂ-7 ಸಲ್ಲಿಕೆಯಾದ ಕೂಡಲೇ ಮತದಾರರ ಹೆಸರು ಅಳಿಸುವುದಿಲ್ಲ. ಇಆರ್‌ಒ ಅರ್ಜಿಯನ್ನು ಪರಿಶೀಲಿಸಿ, ಅರ್ಜಿದಾರ ಮತ್ತು ಸಂಬಂಧಪಟ್ಟ ಮತದಾರರನ್ನು ವಿಚಾರಣೆಗೆ ಕರೆದು ಅವರ ಹೇಳಿಕೆ ಹಾಗೂ ದಾಖಲೆಗಳನ್ನು ಪರಿಶೀಲಿಸಿದ ನಂತರವೇ ಮುಂದಿನ ಕ್ರಮ ಕೈಗೊಳ್ಳುತ್ತಾರೆ. ಇಆರ್‌ಒ ಸ್ವತಂತ್ರ ಅಧಿಕಾರಿಯಾಗಿರುವುದರಿಂದ ಅವರಿಗೆ ಮುಖ್ಯ ಚುನಾವಣಾಧಿಕಾರಿ ಕಚೇರಿಯಿಂದ ನಿರ್ದೇಶನ ನೀಡಲು ಸಾಧ್ಯವಿಲ್ಲ. ಯಾರಾದರೂ ತಪ್ಪು ಮಾಹಿತಿ ನೀಡಿರುವುದು ಕಂಡುಬಂದರೆ ಅವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳುವ ಅಧಿಕಾರವೂ ಇಆರ್‌ಒಗೆ ಇದೆ ಎಂದು ತಿಳಿಸಿದರು.

22.05 ಲಕ್ಷ ಅರ್ಜಿಗಳು

ಅಕ್ಟೋಬರ್ 4ರವರೆಗೆ ಫಾರಂ-6 ಮೂಲಕ 9,10,732, ಫಾರಂ-6ಎ ಮೂಲಕ 4,677, ಫಾರಂ-7 ಮೂಲಕ 91,278 ಹಾಗೂ ಫಾರಂ-8 ಮೂಲಕ 11,98,484 ಸೇರಿದಂತೆ ಒಟ್ಟು 22,05,171 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಅನ್ಬುಕುಮಾರ್ ಮಾಹಿತಿ ನೀಡಿದರು.

ರಾಜ್ಯದಲ್ಲಿ ಒಟ್ಟು 43,82,313 ಮತದಾರರಿಗೆ ನೋಟಿಸ್ ನೀಡಲು ನಿರ್ಧರಿಸಲಾಗಿದ್ದು, ಈ ಪೈಕಿ 43,55,818 ಮಂದಿಗೆ ನೋಟಿಸ್ ನೀಡಲಾಗಿದೆ. ಇನ್ನೂ 26,495 ಮಂದಿಗೆ ನೋಟಿಸ್ ನೀಡಬೇಕಿದೆ. ಇದುವರೆಗೆ 36,89,063 ಮತದಾರರ ವಿಚಾರಣೆ ನಡೆಸಲಾಗಿದ್ದು, ಇನ್ನೂ 6,66,755 ಮಂದಿಯ ವಿಚಾರಣೆ ಬಾಕಿಯಿದೆ.

ಅಕ್ಟೋಬರ್ 22ರೊಳಗೆ ಎಲ್ಲ ನೋಟಿಸ್‌ಗಳ ವಿಚಾರಣೆ ಪೂರ್ಣಗೊಳಿಸಿ, ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದರು.

ಎಸ್‌ಐಆರ್‌ ಪ್ರಕ್ರಿಯೆ ಪೂರ್ಣಗೊಂಡ ನಂತರ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಚುನಾವಣಾ ಆಯೋಗ ವಿಶೇಷ ಅಭಿಯಾನ ನಡೆಸಲಿದೆ. “ರಾಜ್ಯದ ಯಾವೊಬ್ಬ ಅರ್ಹ ಮತದಾರರೂ ಮತದಾನದ ಹಕ್ಕಿನಿಂದ ವಂಚಿತರಾಗಬಾರದು ಎಂಬುದು ನಮ್ಮ ಉದ್ದೇಶ” ಎಂದು ಅನ್ಬುಕುಮಾರ್ ಹೇಳಿದರು.

ಫಾರಂ-7: ಬೀದರ್‌ನಲ್ಲಿ ಅತಿ ಹೆಚ್ಚು

ರಾಜ್ಯದಲ್ಲಿ ಒಟ್ಟು 91,278 ಫಾರಂ-7 ಅರ್ಜಿಗಳು ಸಲ್ಲಿಕೆಯಾಗಿವೆ. ಜಿಲ್ಲಾವಾರು ವಿವರ ಹೀಗಿದೆ:

ಬೆಂಗಳೂರು ನಗರ 3,365, ಬಿಬಿಎಂಪಿ ಉತ್ತರ 1,842, ಬೆಳಗಾವಿ 4,002, ಮೈಸೂರು 3,090, ದಕ್ಷಿಣ ಕನ್ನಡ 5,534, ಬಿಬಿಎಂಪಿ ದಕ್ಷಿಣ 1,707, ಬಿಬಿಎಂಪಿ ಕೇಂದ್ರ 1,659, ಕಲಬುರಗಿ 1,067, ತುಮಕೂರು 4,568, ಬೀದರ್ 5,953, ಧಾರವಾಡ 1,673, ರಾಯಚೂರು 3,349, ಶಿವಮೊಗ್ಗ 5,936, ವಿಜಯಪುರ 3,808, ಉಡುಪಿ 1,759, ವಿಜಯನಗರ 2,407, ದಾವಣಗೆರೆ 4,070, ಹಾಸನ 2,918, ಮಂಡ್ಯ 2,881, ಬಾಗಲಕೋಟೆ 2,401, ಕೋಲಾರ 2,673, ಚಿತ್ರದುರ್ಗ 3,161, ಉತ್ತರ ಕನ್ನಡ 1,664, ರಾಮನಗರ 2,294, ಬಳ್ಳಾರಿ 2,087, ಕೊಪ್ಪಳ 2,548, ಯಾದಗಿರಿ 622, ಚಿಕ್ಕಮಗಳೂರು 2,632, ಬೆಂಗಳೂರು ಗ್ರಾಮಾಂತರ 1,485, ಹಾವೇರಿ 2,024, ಚಿಕ್ಕಬಳ್ಳಾಪುರ 1,820, ಗದಗ 1,228, ಕೊಡಗು 1,178 ಹಾಗೂ ಚಾಮರಾಜನಗರದಲ್ಲಿ 1,873 ಫಾರಂ-7 ಅರ್ಜಿಗಳು ಸಲ್ಲಿಕೆಯಾಗಿವೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿಡಿಲು ಬಡಿದು ಎರಡು ಹಸು ಸಾವುಐಎಚ್‌ಆರ್‌ಸಿ ಬೆಳಗಾವಿ ಜಿಲ್ಲಾ ಮಂಡಳಿ ಅಧ್ಯಕ್ಷರಾಗಿ ಅಬ್ದುಲ್ ಅಜೀಜ ಶೇಖ ನೇಮಕಚುಳಕಿಯಲ್ಲಿ ಜಿಲ್ಲಾ ಮಟ್ಟದ ಕಬಡ್ಡಿ-ಖೋಖೋ ಕ್ರೀಡಾಕೂಟಕ್ಕೆ ಚಾಲನೆಮೊಬೈಲ್ ಟವರ್ ಆಮಿಷ, ಫೇಸ್‌ಬುಕ್ ಲಿಂಕ್: ಅಥಣಿಯ ಇಬ್ಬರು ರೈತರಿಗೆ ₹4.04 ಲಕ್ಷ ವಂಚನೆಅಥಣಿ ಲಾಡ್ಜನಲ್ಲಿ ವೇಶ್ಯಾವಾಟಿಕೆ ಆರೋಪ: ಮಹಿಳೆ ರಕ್ಷಣೆ, ಓರ್ವ ಬಂಧನಹಸುಗಳಿಗೆ ಮೇವು ಹಾಕುವ ವಿಚಾರಕ್ಕೆ ಜಗಳ: ಪತ್ನಿಯನ್ನು ಕುಡಗೋಲಿನಿಂದ ಕೊಚ್ಚಿ ಹತ್ಯೆಬಿಜೆಪಿ ಮುಖಂಡ ರವಿ ಪಾಟೀಲಗೆ ನಿರೀಕ್ಷಣಾ ಜಾಮೀನುಮೋದಿ-ಶಾ ಸೂಚನೆಯಂತೆ ಸಂವಿಧಾನ, ಪ್ರಜಾಪ್ರಭುತ್ವಕ್ಕೆ ದ್ರೋಹ: ಕಾಂಗ್ರೆಸ್ಮಹಿಳಾ ಪತ್ರಕರ್ತೆಯರ ಪೊಲೀಸರ ಲೈಂಗಿಕ ಕಿರುಕುಳ ; ಎಫ್‌ಐಆರ್‌ಗೆ ಒತ್ತಾಯಿಸಿದವರು ವಶಕ್ಕೆಇದು ಗುಜರಾತ್, ಯುಪಿ ಅಲ್ಲ; ಕಾನೂನು ಮುರಿದರೆ ಪರಿಣಾಮ ಎದುರಿಸಿ: ಪ್ರಿಯಾಂಕ್ ಖರ್ಗೆ