ಹೊಸದಿಲ್ಲಿ, ಜುಲೈ 18: ದೆಹಲಿಯ ಜಂತರ್ ಮಂತರ್‌ನಲ್ಲಿ ಕಳೆದ 21 ದಿನಗಳಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಶಿಕ್ಷಣ ತಜ್ಞ ಹಾಗೂ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ ಅವರನ್ನು ಶನಿವಾರ ಮುಂಜಾನೆ ದೆಹಲಿ ಪೊಲೀಸರು ಬಲವಂತವಾಗಿ ತೆರವುಗೊಳಿಸಿ ಸಫ್ದರಜಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೆಳಿಗ್ಗೆ ನಡೆದ ಈ ಕಾರ್ಯಾಚರಣೆಯಿಂದ ಜಂತರ್ ಮಂತರ್‌ನಲ್ಲಿ ಕೆಲಕಾಲ ಹೈಡ್ರಾಮಾ ಸೃಷ್ಟಿಯಾಗಿದ್ದು, ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ತಳ್ಳಾಟ–ನೂಕಾಟವೂ ನಡೆಯಿತು.
ಬೆಳಿಗ್ಗೆ ಸುಮಾರು 7 ಗಂಟೆ ವೇಳೆಗೆ ಸಮವಸ್ತ್ರಧಾರಿ ಹಾಗೂ ಸಿವಿಲ್ ಉಡುಪಿನಲ್ಲಿದ್ದ ದೆಹಲಿ ಪೊಲೀಸರು ಏಕಾಏಕಿ ಜಂತರ್ ಮಂತರ್‌ಗೆ ಆಗಮಿಸಿ ಪ್ರತಿಭಟನಾ ಸ್ಥಳವನ್ನು ಸಂಪೂರ್ಣವಾಗಿ ಸುತ್ತುವರಿದರು. ಬಳಿಕ ಯಾರಿಗೂ ಒಳಗೆ ಅಥವಾ ಹೊರಗೆ ತೆರಳಲು ಅವಕಾಶ ನೀಡದೆ, ಬಿಳಿ ಬೆಡ್‌ಶೀಟ್‌ಗಳನ್ನು ಪರದೆಯಂತೆ ಹಿಡಿದು ವಾಂಗ್ಚುಕ ಅವರನ್ನು ಸಾರ್ವಜನಿಕರು ಹಾಗೂ ಮಾಧ್ಯಮದ ಕ್ಯಾಮೆರಾಗಳಿಗೆ ಕಾಣದಂತೆ ಮಾಡಿದರು. ಕೆಲವೇ ನಿಮಿಷಗಳಲ್ಲಿ ಉಪವಾಸ ಸತ್ಯಾಗ್ರಹದ ವೇದಿಕೆಯಿಂದ ಅವರನ್ನು ಎತ್ತಿಕೊಂಡು ಆಂಬುಲೆನ್ಸ್‌ಗೆ ಕರೆದೊಯ್ಯಲಾಯಿತು. ಈ ವೇಳೆ ಪ್ರತಿಭಟನಾಕಾರರು ಪೊಲೀಸರ ಕ್ರಮವನ್ನು ವಿರೋಧಿಸಿ ಘೋಷಣೆಗಳನ್ನು ಕೂಗಿದರೂ, ಪೊಲೀಸರು ಅವರನ್ನು ಹಿಂದೆ ಸರಿಸಿ ವಾಂಗ್ಚುಕ ಅವರನ್ನು ಸಫ್ದರಜಂಗ್ ಆಸ್ಪತ್ರೆಗೆ ದಾಖಲಿಸಿದರು.
ವಾಂಗ್ಚುಕ ಅವರನ್ನು ಕರೆದೊಯ್ಯುವ ವೇಳೆ ಪ್ರತಿಭಟನಾಕಾರರು ಅಡ್ಡಿಪಡಿಸಲು ಯತ್ನಿಸಿದ ಪರಿಣಾಮ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಕೆಲವು ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರನ್ನು ಪೊಲೀಸರು ಬಲವಂತವಾಗಿ ಹಿಂದೆ ತಳ್ಳಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಘಟನೆಯ ಬಳಿಕ ಜಂತರ್ ಮಂತರ್‌ನಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಯಿತು.
ದೆಹಲಿ ಪೊಲೀಸರು ಮಾತ್ರ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ದೆಹಲಿ ಹೈಕೋರ್ಟ ಸೂಚನೆ ಹಾಗೂ ವೈದ್ಯಕೀಯ ತಜ್ಞರ ಸಲಹೆಯಂತೆ ವಾಂಗ್ಚುಕ ಅವರ ಆರೋಗ್ಯ ತೀವ್ರ ಹದಗೆಟ್ಟಿದ್ದರಿಂದ ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರತಿಭಟನಾಕಾರರು ಅಡ್ಡಿಪಡಿಸಿದ್ದರಿಂದ ಸ್ವಲ್ಪ ಗೊಂದಲ ಉಂಟಾಯಿತು. ಆದರೆ ಯಾವುದೇ ಅತಿಯಾದ ಬಲಪ್ರಯೋಗ ನಡೆಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸಫ್ದರಜಂಗ್ ಆಸ್ಪತ್ರೆ ವೈದ್ಯರ ಪ್ರಕಾರ, 21 ದಿನಗಳ ನಿರಂತರ ಉಪವಾಸದಿಂದ ವಾಂಗ್ಚುಕ ಅವರ ದೇಹದಲ್ಲಿ ತೀವ್ರ ನಿರ್ಜಲೀಕರಣ ಉಂಟಾಗಿದ್ದು, ದೇಹದ ತೂಕವೂ ಗಣನೀಯವಾಗಿ ಇಳಿಕೆಯಾಗಿದೆ. ರಕ್ತದಲ್ಲಿನ ಪೊಟ್ಯಾಸಿಯಂ ಪ್ರಮಾಣ ಕಡಿಮೆಯಾಗುವ ಲಕ್ಷಣಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಅವರನ್ನು ತುರ್ತು ಚಿಕಿತ್ಸಾ ವಿಭಾಗದಲ್ಲಿ ದಾಖಲಿಸಿ ನಿರಂತರ ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ. ಸದ್ಯ ಅವರು ಪ್ರಜ್ಞೆಯಲ್ಲಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ವಾಂಗ್ಚುಕ ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ದಿರುವ ಕ್ರಮವನ್ನು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ತೀವ್ರವಾಗಿ ಖಂಡಿಸಿದೆ. ಪಕ್ಷದ ಸಂಸ್ಥಾಪಕ ಅಭಿಜೀತ, ಪೊಲೀಸರು ವಾಂಗ್ಚುಕ ಅವರನ್ನು ಅಪರಾಧಿಯಂತೆ ಎಳೆದೊಯ್ದಿದ್ದಾರೆ ಎಂದು ಆರೋಪಿಸಿದ್ದಾರೆ. ನಾನು ಕೆಲ ನಿಮಿಷಗಳ ಕಾಲ ಹೊರಗಿದ್ದಾಗಲೇ ಪೊಲೀಸರು ಒಳನುಗ್ಗಿ ಈ ಕಾರ್ಯಾಚರಣೆ ನಡೆಸಿದರು. 21 ದಿನಗಳಿಂದ ಅನ್ನ ಸೇವಿಸದ ವ್ಯಕ್ತಿಯನ್ನು ಈ ರೀತಿ ನಡೆಸಿಕೊಂಡಿರುವುದು ಅಮಾನವೀಯ. ನನ್ನ ಮೇಲೂ ಹಲ್ಲೆ ನಡೆಸಿ ವಶಕ್ಕೆ ಪಡೆಯಲು ಯತ್ನಿಸಿದರು ಎಂದು ಅವರು ಆರೋಪಿಸಿದರು.
ವಾಂಗ್ಚುಕ ಅವರನ್ನು ಆಸ್ಪತ್ರೆಗೆ ಕರೆದೊಯ್ದ ಬೆನ್ನಲ್ಲೇ ಅಭಿಜೀತ ಜಂತರ್ ಮಂತರ್‌ನಲ್ಲೇ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. "ನಾನು ಇಂದಿನಿಂದ ಉಪವಾಸ ಸತ್ಯಾಗ್ರಹ ಆರಂಭಿಸುತ್ತಿದ್ದೇನೆ. ಯಾರೂ ಹಿಂದೆ ಸರಿಯಬೇಡಿ. ವಾಂಗ್ಚುಕ ಅವರನ್ನು ತೆರವುಗೊಳಿಸಿದರೆ ಹೋರಾಟ ಕೊನೆಗೊಳ್ಳುತ್ತದೆ ಎಂದು ಸರ್ಕಾರ ಭಾವಿಸಿದ್ದರೆ ಅದು ಅವರ ತಪ್ಪು ಲೆಕ್ಕಾಚಾರ. ಈ ಚಳವಳಿ ಇಲ್ಲಿಂದಲೇ ಮುಂದುವರಿಯಲಿದೆ. ಜುಲೈ 20ರಂದು ನಿಗದಿಯಂತೆ 'ಚಲೋ ಸಂಸದ್' ಮೆರವಣಿಗೆ ನಡೆಯಲಿದೆ" ಎಂದು ಅವರು ಘೋಷಿಸಿದರು.
ಇದಲ್ಲದೆ, ಇದುವರೆಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸುತ್ತಿದ್ದ ಸಿಜೆಪಿ, ಪೊಲೀಸರ ಈ ಕ್ರಮದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ರಾಜೀನಾಮೆಗೂ ಒತ್ತಾಯಿಸುವುದಾಗಿ ಅಭಿಜೀತ ಘೋಷಿಸಿದ್ದಾರೆ. "ಸೋನಮ್ ಸರ್ ಅವರನ್ನು ಇಲ್ಲಿಂದ ಕರೆದೊಯ್ದರೆ ಚಳವಳಿ ನಿಲ್ಲುತ್ತದೆ ಎಂದು ಅವರು ಭಾವಿಸಿದ್ದರೆ ಅದು ತಪ್ಪು. ನಾವು ಇಲ್ಲೇ ಇರುತ್ತೇವೆ. ಜುಲೈ 20ರಂದು 'ಚಲೋ ಸಂಸದ್' ಮೆರವಣಿಗೆಯನ್ನು ನಿಗದಿಯಂತೆ ನಡೆಸುತ್ತೇವೆ. ಪೊಲೀಸರ ಈ ಕೃತ್ಯದ ಬಳಿಕ ಈಗ ಪ್ರಧಾನಿ ನರೇಂದ್ರ ಮೋದಿ ಅವರ ರಾಜೀನಾಮೆಯನ್ನೂ ನಾವು ಆಗ್ರಹಿಸುತ್ತೇವೆ" ಎಂದು ಅವರು ಹೇಳಿದರು.
ವಾಂಗ್ಚುಕ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆಯೇ ದೆಹಲಿ ಹೈಕೋರ್ಟ ಪ್ರತಿದಿನ ವೈದ್ಯಕೀಯ ತಪಾಸಣೆ ನಡೆಸುವಂತೆ ಹಾಗೂ ಅಗತ್ಯವಿದ್ದರೆ ತಕ್ಷಣ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿತ್ತು. ಆದರೆ, ಪ್ರತಿಭಟನಾಕಾರರ ಪ್ರಕಾರ, ವಾಂಗ್ಚುಕ ಅವರನ್ನು ಅವರ ಒಪ್ಪಿಗೆಯಿಲ್ಲದೆ ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಘಟನೆ ಬಳಿಕ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದ್ದು, ಜುಲೈ 20ರಂದು ನಡೆಯಲಿರುವ 'ಚಲೋ ಸಂಸದ್' ಮೆರವಣಿಗೆಗೆ ದೇಶದ ವಿವಿಧ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ಸಾಧ್ಯತೆ ಇದೆ.