ಬೆಂಗಳೂರು, ಸೆ. 23 : (ಸಮದರ್ಶಿ ಸುದ್ದಿ) - ವಿಜಯಪುರ ಜಿಲ್ಲೆಯ ಇಂಡಿ ಮತ್ತು ಚಡಚಣ ತಾಲೂಕುಗಳನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಇಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್ ಬುಧವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ವಿಧಾನಸಭೆ ಸಭಾಧ್ಯಕ್ಷರನ್ನು ಭೇಟಿಯಾಗಿ ರಾಜೀನಾಮೆ ಪತ್ರ ನೀಡಿರುವ ಅವರು, ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೂ ಮಾಹಿತಿ ನೀಡಿದ್ದಾರೆ.
2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಇಂಡಿ ತಾಲೂಕಿನಲ್ಲಿ ಆರಂಭದಲ್ಲಿ ಸ್ವಲ್ಪ ಮಳೆಯಾದ ಹಿನ್ನೆಲೆಯಲ್ಲಿ ರೈತರು ಸಾಲ ಮಾಡಿ ಬೀಜ, ಗೊಬ್ಬರ ಖರೀದಿಸಿ ಬಿತ್ತನೆ ಮಾಡಿದ್ದರು. ನಂತರ ಸಕಾಲಕ್ಕೆ ಮಳೆಯಾಗದೆ ಬೆಳೆಗಳು ಒಣಗಿದ್ದು, ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯೂ ಎದುರಾಗಿದೆ ಎಂದು ಪಾಟೀಲ್ ತಮ್ಮ ರಾಜೀನಾಮೆ ಪತ್ರದಲ್ಲಿ ವಿವರಿಸಿದ್ದಾರೆ.
ಈ ಪರಿಸ್ಥಿತಿಯನ್ನು ಗಮನಿಸಿ ಇಂಡಿ ತಾಲೂಕನ್ನು ಬರಪೀಡಿತವೆಂದು ಘೋಷಿಸುವಂತೆ ಆಗಸ್ಟ್ 28ರಂದೇ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ನಂತರವೂ ಹಲವು ಬಾರಿ ಸರ್ಕಾರದ ಗಮನ ಸೆಳೆದಿದ್ದರೂ ಇಂಡಿ ಮತ್ತು ಚಡಚಣ ತಾಲೂಕುಗಳನ್ನು ಪಟ್ಟಿಗೆ ಸೇರಿಸಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಹಂತ ಹಂತವಾಗಿ ಒಟ್ಟು 188 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿದ್ದರೂ ಈ ಎರಡು ತಾಲೂಕುಗಳು ಪಟ್ಟಿಯಿಂದ ಹೊರಗುಳಿದಿವೆ ಎಂದು ವರದಿಯಾಗಿದೆ.
ಆಡಳಿತ ಪಕ್ಷದ ಶಾಸಕನಾಗಿರುವುದರಿಂದ ಸರ್ಕಾರಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ವಿಷಯವನ್ನು ಸೂಕ್ಷ್ಮವಾಗಿ ಹಲವು ಬಾರಿ ಗಮನಕ್ಕೆ ತಂದಿದ್ದೇನೆ. ಆದರೂ ತಮ್ಮ ಮಾತು ಮತ್ತು ಕ್ಷೇತ್ರದ ಜನರ ಭಾವನೆಗಳಿಗೆ ಸೂಕ್ತ ಸ್ಪಂದನೆ ಸಿಗಲಿಲ್ಲ ಎಂದು ಪಾಟೀಲ್ ಹೇಳಿದ್ದಾರೆ.
ಪ್ರಸಕ್ತ ರಾಜಕೀಯ ವಾತಾವರಣದ ಬಗ್ಗೆಯೂ ಅಸಮಾಧಾನ ಹೊರಹಾಕಿರುವ ಅವರು, ಪ್ರಭಾವ ಬೀರುವವರು ಹಾಗೂ ಒತ್ತಡ ತಂತ್ರ ಅನುಸರಿಸುವವರಿಗೆ ಹೆಚ್ಚಿನ ಮನ್ನಣೆ ಸಿಗುತ್ತಿದೆ; ತಮ್ಮಂತಹ ಸೌಮ್ಯ ಸ್ವಭಾವದವರಿಗೆ ಕ್ಷೇತ್ರದ ಕೆಲಸಗಳನ್ನು ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಕ್ಷೇತ್ರದ ಜನರ ಆಶೆ-ಆಕಾಂಕ್ಷೆಗಳಿಗೆ ಸ್ಪಂದಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಶಾಸಕ ಸ್ಥಾನದಲ್ಲಿ ಮುಂದುವರಿಯುವುದು ಸೂಕ್ತವಲ್ಲ ಎಂಬ ಕಾರಣದಿಂದ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.
ಪಾಟೀಲ್ ಅವರ ರಾಜೀನಾಮೆ ವಿಚಾರ ವಿಧಾನಸಭೆಯಲ್ಲೂ ಪ್ರತಿಧ್ವನಿಸಿದ್ದು, ಕೆಲಕಾಲ ವಾಕ್ಸಮರಕ್ಕೆ ಕಾರಣವಾಯಿತು. ಆದರೆ ಅವರು ಸಲ್ಲಿಸಿರುವ ರಾಜೀನಾಮೆ ಪತ್ರವನ್ನು ಇನ್ನೂ ಅಂಗೀಕರಿಸಲಾಗಿಲ್ಲ; ಪತ್ರ ನಿಯಮಾನುಸಾರ ಇಲ್ಲ ಎಂಬ ಕಾರಣಕ್ಕೆ ಅಂಗೀಕಾರ ನೀಡಿಲ್ಲ ಎಂದು ಸಭಾಧ್ಯಕ್ಷರು ಸದನದಲ್ಲಿ ಸ್ಪಷ್ಟಪಡಿಸಿದ್ದಾರೆ.