This is the title of the web page

ಹಿಂದೂಗಳ ಹೊರತು ಬೇರೆಯವರಿಗೆ ಪ್ರವೇಶವಿಲ್ಲ

ಲಖನೌ, 6- ಪ್ರಧಾನಿ ನರೇಂದ್ರ ಮೋದಿ ಅವರ ಸಂಸದೀಯ ಕ್ಷೇತ್ರವಾದ ವಾರಣಾಸಿಯಲ್ಲಿ “ಹಿಂದೂಗಳು ಹೊರತು ಪಡಿಸಿ ಬೇರೆ ಧರ್ಮದ ಜನರಿಗೆ ಗಂಗಾ ತೀರಕ್ಕೆ ಭೇಟಿ ನೀಡುವುದನ್ನು ನಿಷೇಧಿಸಲಾಗಿದೆ” ಎಂಬ ಪೋಸ್ಟರ್ ಗಳನ್ನು ಅಂಟಿಸಲಾಗಿದೆ.

ಪೋಸ್ಟರ್‌ಗಳಲ್ಲಿ “ಇದು ಎಚ್ಚರಿಕೆ, ವಿನಂತಿಯಲ್ಲ” ಎಂದು ಬರೆಯಲಾಗಿದೆ. ಪಂಚಗಂಗಾ ಘಾಟ್, ರಾಮ ಘಾಟ್, ದಶಾಶ್ವಮೇಧ ಘಾಟ್, ಅಸ್ಸಿ ಘಾಟ್ ಮತ್ತು ಮಣಿಕರ್ಣಿಕಾ ಘಾಟ್ ಸೇರಿದಂತೆ ನಗರದಾದ್ಯಂತ ವಿವಿಧ ಘಾಟ್‌ಗಳಲ್ಲಿ ಪೋಸ್ಟರ್‌ಗಳನ್ನು ಈಗ ಕಾಣಬಹುದು.

ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳ ನಾಯಕರು ಈ ಪೋಸ್ಟರ್‌ಗಳನ್ನು ಹಾಕುತ್ತಿರುವ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಎಂದು ದಿ ವೈರ್ ವರದಿ ಮಾಡಿದೆ.

“ಈ ಪೋಸ್ಟರ್‌ಗಳು ಮನವಿಯಲ್ಲ ಆದರೆ ಸನಾತನ ಧರ್ಮದ ಅನುಯಾಯಿಗಳಲ್ಲದವರಿಗೆ ಎಚ್ಚರಿಕೆ” ಎಂದು ವಿಎಚ್‌ಪಿಯ ವಾರಣಾಸಿ ವಿಭಾಗದ ಕಾರ್ಯದರ್ಶಿ ರಾಜನ್ ಗುಪ್ತಾ ಹೇಳಿದ್ದಾರೆ.

ಗಂಗಾ ನದಿಯ ಘಾಟ್‌ಗಳು ಮತ್ತು ಕಾಶಿಯ ದೇವಾಲಯಗಳು ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಸಂಕೇತಗಳಾಗಿವೆ. ಇತರರು ಇವುಗಳಿಂದ ದೂರವಿರಬೇಕು ಎಂದು ಗುಪ್ತಾ ಹೇಳಿದ್ದಾರೆ.

“ಗಂಗಾ ನದಿ ನಮ್ಮ ತಾಯಿ, ಇದು ಪಿಕ್ನಿಕ್ ಸ್ಪಾಟ್ ಅಲ್ಲ. ಗಂಗೆಯನ್ನು ಪಿಕ್ನಿಕ್ ಸ್ಪಾಟ್ ಎಂದು ಪರಿಗಣಿಸುವವರು ಅದರಿಂದ ದೂರವಿರಬೇಕು” ಎಂದು ಬಜರಂಗದಳದ ವಾರಣಾಸಿ ಸಂಯೋಜಕ ನಿಖಿಲ್ ತ್ರಿಪಾಠಿ ತಿಳಿಸಿದ್ದಾರೆ.

ವಿಧಾನಸಭಾ ಚುನಾವಣೆಗೆ ಮುನ್ನ ಸಮಾಜವನ್ನು ಮತ್ತಷ್ಟು ಧ್ರುವೀಕರಣಗೊಳಿಸಲು ಇದು ಬಿಜೆಪಿಯ ಸಂಯೋಜಿತ ಪಿತೂರಿ ಎಂದು ಕಾಂಗ್ರೆಸ್ ಆರೋಪಿಸಿದ್ದು, ತಮ್ಮ ಪಕ್ಷವು ಬಲಪಂಥೀಯರ ಈ “ದುಷ್ಕೃತ್ಯಗಳ” ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದೆ ಎಂದು ಸ್ಥಳೀಯ ಕಾಂಗ್ರೆಸ್ ನಾಯಕ ರಾಘವೇಂದ್ರ ಚೌಬೆ ಹೇಳಿದರು.

ಪಟ್ಟಣದಲ್ಲಿ ಕೇಸರಿ ವಸ್ತ್ರಧಾರಿ ಯುವಕರು ಆರಂಭಿಸಿರುವ ದ್ವೇಷ ಅಭಿಯಾನದ ಕುರಿತು ವರುಣಾ ವಲಯದ ಡಿಸಿಪಿ ಅವರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದೇನೆ ಎಂದು ಚೌಬೆ ಹೇಳಿದರು. ಈ ರೀತಿಯ ಕೃತ್ಯಗಳು ಶಾಂತಿ ಮತ್ತು ನೆಮ್ಮದಿಗೆ ಭಂಗ ತರಬಹುದು ಮತ್ತು ಚುನಾವಣಾ ವಾತಾವರಣದ ಮೇಲೂ ಪ್ರಭಾವ ಬೀರುವುದರಿಂದ ನಿಯೋಗವೊಂದು ಜಿಲ್ಲೆಯ ಅಧಿಕಾರಿಗಳನ್ನು ಭೇಟಿ ಮಾಡಲಿದೆ ಎಂದು ಕಾಂಗ್ರೆಸ್ ನಾಯಕ ತಿಳಿಸಿದ್ದಾರೆ.

ಗಂಗಾ ಮತ್ತು ಅದರ ಘಾಟ್‌ಗಳು ಎಂದಿಗೂ ಒಂದು ಧರ್ಮದವರಿಗೆ ಸೇರಿಲ್ಲ. ಭಾರತ ರತ್ನ ಉಸ್ತಾದ ಬಿಸ್ಮಿಲ್ಲಾ ಖಾನ್ ಅವರು ಗಂಗಾ ಸ್ನಾನದ ನಂತರ ನಮಾಜ ಮಾಡುತ್ತಿದ್ದರು ಎಂದು ಹಿರಿಯ ಪತ್ರಕರ್ತ ವಿಜಯ ವಿನೀತ ಪ್ರತಿಕೃಯಿಸಿದ್ದಾರೆ.

“ನಿರ್ಣಾಯಕ ಉತ್ತರ ಪ್ರದೇಶ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಪಕ್ಷದ ನಿರೀಕ್ಷೆಗಳು ತುಂಬಾ ಮಂಕಾಗಿರುವುದರಿಂದ ಅದು ಸಮಾಜವನ್ನು ಕೋಮುವಾದದ ಆಧಾರದ ಮೇಲೆ ಮತ್ತಷ್ಟು ವಿಭಜಿಸಲು ಬಯಸುತ್ತಿದೆ ಎಂದು ವಾರಣಾಸಿಯ ಕುರಿತು ಹಲವಾರು ಪುಸ್ತಕಗಳನ್ನು ಬರೆದಿರುವ ವಿನೀತ ಹೇಳಿದ್ದಾರೆ.

ಈ ಮಧ್ಯೆ ಘಟನೆಗೆ ಬಲಪಂಥೀಯ ಸಂಘಟನೆಗಳನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ಪ್ರತಿಪಾದಿಸಿದೆ. ಇದನ್ನು ಕೆಲವು “ಕಿಡಿಗೇಡಿಗಳು” ಮಾಡಿದ್ದಾರೆ ಎಂದು ಬಿಜೆಪಿ ವಕ್ತಾರ ರಾಕೇಶ ತ್ರಿಪಾಠಿ ಮಾಧ್ಯಮಗಳಿಗೆ ತಿಳಿಸಿದರು.

ವಾರಣಾಸಿಯ ಗಂಗಾ ಮತ್ತು ದೇವಾಲಯಗಳು ಪವಿತ್ರ ಸ್ಥಳಗಳಾಗಿವೆ ಮತ್ತು ಅದನ್ನು ಪಿಕ್ನಿಕ್ ತಾಣವೆಂದು ಪರಿಗಣಿಸಬಾರದು. ಆದಾಗ್ಯೂ ಈ ಸ್ಥಳಗಳಿಗೆ ಭೇಟಿ ನೀಡುವುದನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ ಎಂದು ಅವರು ಹೇಳಿದರು.

ಈ ಪೋಸ್ಟರ್‌ಗಳನ್ನು ಹಾಕಿರುವವರ ಮುಖವನ್ನು ತೋರಿಸುವ ಫೋಟೋಗಳು ಲಭ್ಯವಿದ್ದು ವಿವಾದಾತ್ಮಕ ಪೋಸ್ಟರ್‌ಗಳ ಬಗ್ಗೆ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ವಾರಣಾಸಿ ಡಿಐಜಿ ಕಚೇರಿಯ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ. ಈ ವಿಷಯ ಪೊಲೀಸರ ಗಮನಕ್ಕೆ ತಂದಿದ್ದು, ತನಿಖೆಯ ನಂತರ ಅಗತ್ಯವಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

You might also like
Leave a comment