This is the title of the web page

ಖ್ಯಾತ ಸಂಗೀತ ನಿರ್ದೇಶಕ ಬಪ್ಪಿ ಲಹಿರಿ ಇನ್ನಿಲ್ಲ

ಮುಂಬೈ, 16- ಹಿಂದಿ ಸಿನೆಮಾ ಜಗತ್ತಿನ ಖ್ಯಾತ ಸಂಗೀತ ನಿರ್ದೇಶಕ ಬಪ್ಪಿ ಲಹಿರಿ ಅವರು ಬುಧವಾರ ಬೆಳಿಗ್ಗೆ ನಿಧನರಾದರು. ಅವರಿಗೆ 69 ವರ್ಷ ವಯಸ್ಸಾಗಿತ್ತು.

ಅನಾರೋಗ್ಯದಿಂದಾಗಿ ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ಗಾಯಕ, ಸಂಯೋಜಕ ಬಪ್ಪಿ ಲಹಿರಿ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಬಪ್ಪಿ ಲಹರಿ ಎಂದು ಜನಪ್ರಿಯರಾಗಿದ್ದ ಅವರು ಭಾರತೀಯ ಗಾಯಕ, ಸಂಯೋಜಕ, ರಾಜಕಾರಣಿ ಮತ್ತು ರೆಕಾರ್ಡ ನಿರ್ಮಾಪಕರಾಗಿದ್ದರು. ಅವರು ಭಾರತೀಯ ಸಿನೆಮಾದಲ್ಲಿ ಡಿಸ್ಕೋ ಸಂಗೀತದ ಬಳಕೆಯನ್ನು ಜನಪ್ರಿಯಗೊಳಿಸಿದ್ದರು.

ತಮ್ಮದೇ ಆದ ಕೆಲವು ರಚನೆಗಳನ್ನು ಹಾಡಿದ್ದು, ಅಮರ್ ಸಂಗೀತಾ, ಆಶಾ ಓ ಭಾಲೋಬಾಷಾ, ಅಮರ್ ತುಮಿ, ಅಮರ ಪ್ರೇಮ, ಮಂಡಿರಾ, ಬದನಾಮ್, ರಕ್ತೆಖಾ, ಪ್ರಿಯಾ ಮುಂತಾದ ಬಂಗಾಳಿ ಚಿತ್ರಗಳಲ್ಲಿ ಅವರು ಸಂಗೀತ ನೀಡಿದ್ದಾರೆ.

ಲಕ್ಷ್ಮೀಕಾಂತ-ಪ್ಯಾರೇಲಾಲ, ಆರ್.ಡಿ. ಬರ್ಮನ್ ಅವರುಗಳು ಉನ್ನತ ಸ್ಥಾನದಲ್ಲಿದ್ದಾಗ ತನ್ನ ವಿಶಿಷ್ಠ ಡಿಸ್ಕೊ ಶೈಲಿಯ ಸಂಗೀತದೊಂದಿಗೆ ಬಪ್ಪಿ ಲಹಿರಿ ಬಂದಾಗ ಆರ್.ಡಿ.ಬರ್ಮನ್ ಅವರನ್ನು ಹಿಂದಿಕ್ಕಿ ಮುನ್ನಡೆ ಸಾಧಿಸಿದ್ದರು. ಆಗ ಆರ್ ಡಿ ಬರ್ಮನ್ ಗೆ ಚಿತ್ರಗಳು ಸಿಗುವುದು ಕಡಿಮೆಯಾಗಿತ್ತು. ಅವರ ಸಂಯೋಜಿಸಿದ್ದ ಡಿಸ್ಕೊ ಡಾನ್ಸರ್ ಚಿತ್ರದ ಸಂಗೀತ ಜಗತ್ತಿನೆಲ್ಲೆಡೆ ಸುನಾಮಿ  ಎಬ್ಬಿಸಿತ್ತು. ಅದರ ಹಾಡುಗಳು ಸೋವಿಯತ್ ರಾಷ್ಟ್ರಗಳ ಮನೆ ಮನೆಗಳಲ್ಲಿ ಕೇಳಲಾಗುತ್ತಿತ್ತು.

ಅವರು 1980 ಮತ್ತು 1990ರ ದಶಕದಲ್ಲಿ ವಾರದಾತ್, ಡಿಸ್ಕೊ ಡ್ಯಾನ್ಸರ್, ನಮಕ ಹಲಾಲ, ಶರಾಬಿ, ಕಮಾಂಡೋ, ಸಾಹೇಬ, ಗ್ಯಾಂಗ್ ಲೀಡರ್, ಸೈಲಾಬ, ಟಾರ್ಜನ್ ನಂತಹ 700 ಚಿತ್ರಗಳಿಗೆ ಅವರು ಸಂಗೀತ ನೀಡಿದ್ದರು.

ವಿಷ್ಟುವರ್ಧನ್ ಅಭಿನಯಿಸಿದ್ದ ಕೃಷ್ಣಾ ನೀ ಬೇಗನೆ ಬಾರೋ ಸೇರಿದಂತೆ ಕನ್ನಡದ ಹಲವು ಚಿತ್ರಗಳಿಗೂ ಸಹ ಅವರು ಸಂಗೀತ ನೀಡಿದ್ದಾರೆ.

ಲಹಿರಿ 2004 ರಲ್ಲಿ ಬಿಜೆಪಿ ಸೇರಿದರು. 2014ರ ಭಾರತೀಯ ಸಾರ್ವತ್ರಿಕ ಚುನಾವಣೆಗೆ ಪಶ್ಚಿಮ ಬಂಗಾಳದ ಶ್ರೀರಾಂಪುರ (ಲೋಕಸಭಾ ಕ್ಷೇತ್ರ) ನಿಂದ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಟಿಕೆಟ್ ನೀಡಲಾಗಿತ್ತು. ಆದರೆ ಚುನಾವಣೆಯಲ್ಲಿ ಸೋತಿದ್ದರು.

You might also like
Leave a comment