ಹುಬ್ಬಳ್ಳಿ: ದರೋಡೆಗೆ ಯತ್ನಿಸಿದ ತಂಡವು ಪೊಲೀಸರ ಮೇಲೆಯೇ ದಾಳಿಗೆ ಮುಂದಾದಾಗ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಒಬ್ಬ ದರೋಡಕೋರನ ಕಾಲಿಗೆ ಗುಂಡು ತಗುಲಿದ ಘಟನೆ ರೇವಡಿಹಾಳ ಸೇತುವೆ ಬಳಿ ಸೋಮವಾರ ಬೆಳಗಿನ ಜಾವ ನಡೆದಿದೆ.
ಸೋಮವಾರ ಬೆಳಗಿನ ಜಾವ 3:00 ಗಂಟೆ ಸುಮಾರಿಗೆ ಗೋಕುಲ ಗ್ರಾಮದಲ್ಲಿ 5-6 ಜನರ ತಂಡವು ರಜನಿಕಾಂತ ದೊಡ್ಡಮನಿ ಎಂಬುವರ ಮನೆಗೆ ನುಗ್ಗಿ ದರೋಡೆಗೆ ಯತ್ನಿಸಿದೆ. ಈ ವೇಳೆ ಮನೆಯವರು ಎಚ್ಚರಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯ ಪ್ರವೃತ್ತರಾದ ಗೋಕುಲ ರೋಡ್ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ದರೋಡೆಕೋರರನ್ನು ಹಿಡಿಯಲು ಯತ್ನಿಸಿದ್ದಾರೆ. ಆಗ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಪರಾರಿಯಾಗಲು ಮುಂದಾದಾಗ ಪಿಎಸ್ಐ ಸಚಿನ ದಾಸರೆಡ್ಡಿ ಮೊದಲು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ನಂತರ ಮಹೇಶ ಕಾಳೆ ಎಂಬ ದರೋಡೆಕೋರನ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ. ಆದರೆ ಇನ್ನುಳಿದ ದರೋಡೆಕೋರರು ಪರಾರಿಯಾದರು.
ಈ ವೇಳೆ ಪಿಎಸ್ಐ ಸಚಿನ ದಾಸರೆಡ್ಡಿ ಮತ್ತು ಹೆಡ್ ಕಾನ್ಸಟೇಬಲ್ ವಸಂತ ಗುಡಗೇರಿ ಅವರು ಗಾಯಗೊಂಡರು. ಗುಂಡೇಟು ತಿಂದ ದರೋಡೆಕೋರ ಮತ್ತು ಪೊಲೀಸರು ಸೇರಿ ಮೂವರು ಗಾಯಾಳುಗಳು ಕೆಎಂಸಿಆರ್ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದೇ ತಂಡವು ಕೆಲ ದಿನಗಳಿಂದ ಗೋಕುಲದಲ್ಲಿ 2-3 ಮನೆಗಳಲ್ಲಿ ದರೋಡೆ ಮಾಡಿತ್ತು. ನಿನ್ನೆಯೂ ಸಹ ಓರ್ವರ ಮನೆಗೆ ನುಗ್ಗಿ ದರೋಡೆ ಮಾಡಲು ಮುಂದಾಗಿದ್ದಾಗ ಅವರ ಮೇಲೆ ದಾಳಿ ಮಾಡಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದರೋಡೆಕೋರರ ತಂಡವು ಮನೆಗೆ ನುಗ್ಗುವ ಮುನ್ನ ಹಾಪ್ ಪ್ಯಾಂಟ್ ಧರಿಸಿ, ಮುಖಕ್ಕೆ ಮಂಕಿ ಕ್ಯಾಪ್ ಹಾಕಿಕೊಂಡು ದರೋಡೆಗೆ ಹೊಂಚು ಹಾಕುತ್ತಿರುವ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಗೋಕುಲ ರೋಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.