This is the title of the web page

ಸಾಕು ನಾಯಿ ಸಾವು; ಮೂರು ಲಕ್ಷ ರೂ. ಪರಿಹಾರ ಪಡೆದ ಮಾಲೀಕ

ಚಂದ್ರಾಪುರ, 23- ಖಾಸಗಿ ಕಂಪನಿಯೊಂದರ ಸುರಕ್ಷತೆಯಲ್ಲಿದ್ದ ತಮ್ಮ ಸಾಕು ನಾಯಿ ರಸ್ತೆ ಅಪಘಾತಯೊಂದರಲ್ಲಿ ಮೃತಪಟ್ಟಿದ್ದಕ್ಕೆ ಅದರ ಮಾಲೀಕ ಒಂಭತ್ತು ವರ್ಷ ಕಾನೂನು ಹೋರಾಟ ಮಾಡಿ ಮೂರು ಲಕ್ಷ ರೂಪಾಯಿ ಪರಿಹಾರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮಹಾರಾಷ್ಟ್ರದ ಚಂದ್ರಾಪುರದ ಉಮೇಶ ಭಟ್ಕರ ಎಂಬವರು ಉತ್ತಮ ತಳಿಯ ನಾಯಿಯೊಂದನ್ನು ಮನೆಯಲ್ಲಿ ಸಾಕಿ ಅದಕ್ಕೆ “ಜಾನ್” ಎಂದು ನಾಮಕರಣ ಮಾಡಿದ್ದರು. “ಆರತಿ ಇನ್ಫ್ರಾ” ಎಂಬ ಕಂಪನಿ ತನ್ನ ಭದ್ರತೆಯ ‘ಶ್ವಾನದಳ’ ವಿಭಾಗದಲ್ಲಿ ಅದನ್ನು ಕೆಲಸಕ್ಕೆ ಸೇರಿಸಿಕೊಂಡು ಸೇವೆಯ ಅವಧಿಯಲ್ಲಿ ಊಟ, ತಿಂಡಿ, ನೀರು ಉಚಿತವಾಗಿ ನೀಡಿ ಪ್ರತಿ ತಿಂಗಳಿಗೆ 8000 ರೂಪಾಯಿ ಸಂಬಳವನ್ನು “ಗೌರವಧನ” ವಾಗಿ ನಾಯಿಯ ಮಾಲೀಕನಿಗೆ ನೀಡುತ್ತಿತ್ತು.

ಆದರೆ, 2013ರ ಜನವರಿ 10 ರಂದು ತಮ್ಮ ನಾಯಿಯೊಂದಿಗೆ ವಾಕಿಂಗ್‌ ಹೋಗಿದ್ದಾಗ “ರಹೀಮ್ ಟ್ರಾವೆಲ್ಸ್‌” ಗೆ ಸೇರಿದ ಶಾಲಾ ವಾಹನ ಢಿಕ್ಕಿ ಹೊಡೆದ ಪರಿಣಾಮ, ಅದು ಸ್ಥಳದಲ್ಲೇ ಮೃತಪಟ್ಟಿತ್ತು.

ಅತೀ ಪ್ರೀತಿಯಿಂದ ಸಾಕಿದ ಉಮೇಶ ಭಟ್ಕರ ಅವರಿಗೆ ಈ ದುರ್ಘಟನೆ ಭಾರಿ ಆಘಾತ ಉಂಟು ಮಾಡಿತ್ತು. ನಾಯಿಯ ದುಡಿಮೆ ಕುಟುಂಬ ನಿರ್ವಹನೆಗೆ ತುಂಬಾ ಅನುಕೂಲವಾಗಿತ್ತು. ಆದರೆ ಅಪಘಾತದಲ್ಲಿ ಜಾನ್‌ ಮೃತಪಟ್ಟ ಪರಿಣಾಮ ಇವರಿಗೆ ಆರ್ಥಿಕ ಮುಗ್ಗಟ್ಟು ಎದುರಿಸುವಂತಾಯಿತು.

ಶಾಲಾ ಬಸ್ ಮಾಲೀಕರು ಹಾಗೂ ವಿಮಾ ಕಂಪನಿ ಪರಿಹಾರ ನೀಡುವಂತೆ ಮನವಿ ಮಾಡಿದರೂ ಸ್ಪಂದಿಸಿರಲಿಲ್ಲ. ಹೀಗಾಗಿ ಭಟ್ಕರ‌ ಅವರು ಪೊಲೀಸರಿಗೆ ದೂರು ನೀಡಿದರು. ನಾಯಿಯ ಶವಪರೀಕ್ಷೆ ಮಾಡಲಾಯಿತು. ವರದಿಯಲ್ಲಿ ಜಾನ್‌ ಅಪಘಾತದಿಂದ ಮೃತಪಟ್ಟಿರುವುದು ಸ್ಪಷ್ಟವಾಯಿತು.

ನಂತರ ಭಟ್ಕರ ಅವರು ಚಂದ್ರಾಪುರದ ಮೋಟಾರು ಅಪಘಾತ ಕ್ಲೇಮ್ಸ್ ಟ್ರಿಬ್ಯೂನಲ್‌ನಲ್ಲಿ ಪ್ರಕರಣ ದಾಖಲಿಸಿದರು. ವಿಮಾ ಕಂಪನಿ ಬಜಾಜ್ ಅಲಯನ್ಸ್, ಟ್ರಾವೆಲ್ಸ್ ಮಾಲೀಕ ಹಾಗೂ ಚಾಲಕ ಸುಧಾಕರ ವಿರುದ್ಧ ಮೊಕದ್ದಮೆ ಹೂಡಿದ್ದರು. ನಾಯಿಯ ಸಾವಿನಿಂದ ಆರ್ಥಿಕ ನಷ್ಟ ಉಂಟಾಗಿದ್ದು ತನಗೆ 5 ಲಕ್ಷ ರೂ.ಗಳ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದರು.

ಬರೋಬ್ಬರಿ 8 ವರ್ಷ 11 ತಿಂಗಳ ಕಾಲ ವಾದ-ಪ್ರತಿವಾದಗಳನ್ನು ಆಲಿಸಿದ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಸ್.ಜೆ.ಅನ್ಸಾರಿ ಅವರು ಅರ್ಜಿದಾರರ ಪರ ತೀರ್ಪು ನೀಡಿದ್ದಾರೆ. 1.62 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶ ಮಾಡಿದ್ದಾರೆ. ಜೊತೆಗೆ ಪರಿಹಾರದ ಹಣಕ್ಕೆ ವರ್ಷಕ್ಕೆ ಶೇ.8ರಷ್ಟು ಬಡ್ಡಿ ನೀಡುವಂತೆ ಹೇಳಿದ್ದಾರೆ. ಹೀಗಾಗಿ, ಸುಮಾರು 9 ವರ್ಷಕ್ಕೆ ಉಮೇಶ‌ ಭಟ್ಕರ‌ ಒಟ್ಟು 3 ಲಕ್ಷ ರೂ.ಗಳ ಪರಿಹಾರ ಪಡೆದಿದ್ದಾರೆ.

You might also like
Leave a comment