ಒಂದು ಪ್ರದೇಶದ ಸಮಗ್ರ ಅಸ್ತಿತ್ವಕ್ಕೆ ಅದರ ಇತಿಹಾಸ ಮತ್ತು ಮುಂದಿನ ದೃಷ್ಟಿ ಮುಖ್ಯವಾದ ಅಗತ್ಯಗಳು. ಇದರಿಂದ ಈ ಹೊತ್ತು ನಾವು ಹೇಗೆ ವರ್ತಿಸಬೇಕು ಎನ್ನುವ ಸ್ಪಷ್ಟ ಕಲ್ಪನೆ ಈ ಎರಡು ಸಂಗತಿಗಳಿಂದ ದೊರೆಯುತ್ತದೆ. ದುರಂತ ಎಂದರೆ ನಮ್ಮಲ್ಲಿ ಬಹುಪಾಲು ಮಂದಿ ಇತಿಹಾಸದ ವೈಭವ, ವಿಜೃಂಭಣೆಯ ನೆನಪಲ್ಲೇ ಕಳೆದು ಹೋಗುತ್ತಾರೆ. ಗತದ ವೈಭವ ಮರಳಿ ಹೇಗೆ ತರುವುದು ಮತ್ತು ಇಂದಿನ ಸ್ಥಿತಿ ಹಿಂದೆಂದಿಗಿಂತಲೂ ಉತ್ತಮ ಆಗುವಂತೆ ಮಾಡುವುದು ಹೇಗೆ ಎಂದು ಚಿಂತಿಸಲು ಹೋಗುವುದಿಲ್ಲ. ಇದು ನಮ್ಮ ಬಹುದೊಡ್ಡ ಸಮಸ್ಯೆ.
ಕನ್ನಡ, ಕರ್ನಾಟಕದ ವಿಚಾರಕ್ಕೆ ಬಂದರೆ “ಮಾಧುರ್ಯಂಗೆ ಮಾಧುರ್ಯನ್; ಕಲಿಗೆ ಕಲಿಯುಗ ವಿಪರೀತನ್” ಎಂಬಂಥ ಶಾಸನಗಳ ಸಾಲು ಉದಾಹರಿಸುತ್ತಾ, ತಾವು ಅದಕ್ಕೇನೂ ಕಡಿಮೆ ಇಲ್ಲ ಎಂದು ಬಿಂಬಿಸಲು ಯತ್ನಿಸಲಾಗುತ್ತದೆ. ಆದರೆ ಇಂಥವರ ಮಾತನ್ನು ಯಾರೂ ನಂಬುವುದಿಲ್ಲ. ಇದನ್ನು ಮೀರಿದ ಬೆಳವಣಿಗೆಯೊಂದು ಸಾಧ್ಯ ಆಗುವುದಾದರೆ; ಆಗ ಕನ್ನಡ, ಕನ್ನಡನಾಡು ಎಲ್ಲವೂ ಸರಿದಾರಿಗೆ ಹೊರಳಿಕೊಳ್ಳಲು ಸಾಧ್ಯ.
ಇತಿಹಾಸವನ್ನೇ ನೋಡಿ. ಕರ್ನಾಟಕ ಕಂಡ ರಾಜಮನೆತನಗಳ ಸಂಖ್ಯೆ ವಿಪರೀತ. ಇದರ ನಡುವೆ ನಾಡು ವೈಭವಕ್ಕೆ ಏರಲು ಸಾಧ್ಯ ಆಗಿದ್ದು ಗಟ್ಟಿ ನೆಲೆಯ ಬಲಿಷ್ಠ ಪ್ರಭುತ್ವದಿಂದ ಮಾತ್ರ ಎಂದು ತಿಳಿಯುತ್ತದೆ. ಅದರ ಮೂಲಕ ಏಕತೆ ಮತ್ತು ನಾಡಿನ ಎಲ್ಲ ಜನರ ಪ್ರಗತಿ ಸಾಧಿಸುವುದು ಸುಲಭ. ಮುಖ್ಯವಾಗಿ ಸಣ್ಣ ಪುಟ್ಟ ಜಗಳ, ಕದನಗಳನ್ನು ತಪ್ಪಿಸುವುದು, ಆ ಮೂಲಕ ಜನ ಮತ್ತು ಆಡಳಿತವನ್ನು ಹೆಚ್ಚು ಕ್ರಿಯಾಶೀಲ ಮತ್ತು ಉತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಸಾಧ್ಯ. ನಮ್ಮಲ್ಲಿ ಕದಂಬರಿಂದ ಆರಂಭಿಸಿ ಮೈಸೂರಿನ ಯದುವಂಶದವರ ಆಡಳಿತದ ತನಕ ನೋಡಿ, ಇಲ್ಲಿ ಸಮರ್ಥ ಪ್ರಭುತ್ವ ಇದ್ದಿದ್ದು ಕಡಿಮೆ, ಬದಲಿಗೆ ಸಣ್ಣ ಪುಟ್ಟ ಪಾಳೇಗಾರರು, ಅವರವರ ನಡುವೆ ಕಚ್ಚಾಟ, ತಿಕ್ಕಾಟಗಳು. ಅದೇ ನೆರೆಯ ತಮಿಳುನಾಡಿನ ಇತಿಹಾಸ ಗಮನಿಸಿದರೆ, ನಮಗಲ್ಲಿ ದೊರೆಯುವುದು ಪಲ್ಲವ, ಪಾಂಡ್ಯ ಮತ್ತು ಚೋಳ ಅರಸರ ಪ್ರಭುತ್ವದ ಮೂರೇ ರಾಜ ವಂಶಗಳು. ಇದರ ಪರಿಣಾಮ ಅಂದರೆ ಅಲ್ಲಿ ಜನ ಒಗ್ಗೂಡಿ ಬಾಳುವುದು, ಸುಖ ನೆಮ್ಮದಿಗಳಿಂದ ಇರುವುದು ಇಂದಿಗೂ ಸಾಧ್ಯವಾಗಿದೆ. ಜೊತೆಗೆ ಅವರು ತಮ್ಮ ಸಂಸ್ಕೃತಿ, ಭಾಷೆ ಮತ್ತು ಅವುಗಳಿಗೆ ಸಂಬಂಧಿಸಿದ ಎಲ್ಲ ಸಂಗತಿಗಳನ್ನೂ ಕಾಪಾಡಿಕೊಳ್ಳಲು ಮತ್ತು ವಿಸ್ತರಿಸಲು ಸದಾ ಶ್ರಮಿಸುತ್ತಾ ಬಂದಿದ್ದು ಕಾಣುತ್ತದೆ. ಈ ಹೊತ್ತಿಗೂ ಅಲ್ಲಿರುವುದು ಮುಖ್ಯವಾಗಿ ಎರಡೇ ಪ್ರಮುಖ ರಾಜಕೀಯ ಪಕ್ಷಗಳು. ಅವುಗಳಲ್ಲಿ ಯಾವುದೇ ಅಧಿಕಾರಕ್ಕೆ ಬಂದರೂ ಅವರ ಮುಖ್ಯ ಕಾಳಜಿ ತಮ್ಮ ನೆಲ, ಜಲ, ಭಾಷೆ, ಸಂಸ್ಕೃತಿ ಕುರಿತಂಥದ್ದು. ಅವರು ಜಲ್ಲಿಕಟ್ಟು ನಿಷೇಧಿಸಿದರೆ ಕೋರ್ಟಿಗೆ ಹೋಗುತ್ತಾರೆ. ಕಾವೇರಿ ವಿಚಾರದಲ್ಲಿ ಅಲ್ಲಿನ ಎಲ್ಲರದ್ದೂ ಒಂದೇ ದನಿ.
ನಮ್ಮಲ್ಲಿ ನೋಡಿ ಕಾವೇರಿ ಸಮಸ್ಯೆ ಬಗ್ಗೆ ಕೃಷ್ಣಾ ತೀರದ ಜನರಿಗೆ ಬೇಸರ, ಕೃಷ್ಣೆಯ ವಿಚಾರ ನಮಗೇಕೆ ಎಂದು ಕಾವೇರಿ ನಾಡಿನ ಜನರ ಅಸಡ್ಡೆ. ಇದರ ಮೇಲೆ ದಕ್ಷಿಣ ಕರ್ನಾಟಕ ಭಾಗದ ಕನ್ನಡಿಗರಿಗೆ ಎಲ್ಲ ರಂಗಗಳಲ್ಲೂ ಮೊದಲ ಪ್ರಾತಿನಿಧ್ಯ. ಭಾಷೆ ಆಧಾರದ ಮೇಲೆ ರಾಜ್ಯಗಳ ರಚನೆ ಆಯಿತು. ಈಗಲೂ ಸೇಲಂವರೆಗೂ ಕನ್ನಡ ಮಾತಾಡುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದನ್ನು ಕಾಣಬಹುದು. ಹಾಗೆಯೇ ಕಾಸರಗೋಡು ಕೇರಳಕ್ಕೆ ಸೇರಿದರೂ ನಮಗೆ ಖಬರಿರಲಿಲ್ಲ. ಇತ್ತ ಸಾಂಗ್ಲಿ, ಸೋಲಾಪುರ ಮುಂತಾದ ೩-೪ ಜಿಲ್ಲೆಗಳ ಕನ್ನಡ ಭಾಷಾ ಪ್ರದೇಶಗಳು ಮಹಾರಾಷ್ಟ್ರಕ್ಕೆ ಕೈಬಿಟ್ಟು ಹೋದರೂ ನಮ್ಮ ತಕರಾರಿಲ್ಲ.
ಇಷ್ಟು ದೊಡ್ಡ ಆನೆಗೆ ಆನೇನೇ ಮಹಾರಾಷ್ಟ್ರಕ್ಕೆ ಹೋದರೂ ಸಹ ಬೆಳಗಾವಿಯೂ ಅವರಿಗೆ ಬೇಕಂತೆ!. ಇದಕ್ಕಾಗಿ ಹಲವಾರು ದಶಕಗಳಿಂದ ನಿತ್ಯ ಜಟಾಪಟಿ ಮುಂದುವರಿದಿದೆ. ಅದರಲ್ಲೂ ನವೆಂಬರ ಒಂದು ಬಂದರೆ ಇಲ್ಲಿನ ಮಹಾರಾಷ್ಟ್ರ ಏಕೀಕರಣ ಸಮಿತಿ ಸದಸ್ಯರ ತಲೆಯಲ್ಲಿ ಹುಳ ಬಿಟ್ಟ ಹಾಗೆ ಆಗುತ್ತದೆ. ಏನೋ ತಂಟೆ, ಎಂಥದೋ ತಕರಾರು. ಇವರ್ಯಾರಿಗೂ ನಮ್ಮ ದೇಶವು ನಾನಾ ಭಾಷೆ, ರಿವಾಜುಗಳನ್ನು ಕಂಡಿದ್ದು ಅದರ ನಡುವೆಯೂ ಬಹಳಷ್ಟು ಪ್ರದೇಶಗಳು ತನ್ನತನವನ್ನು ಉಳಿಸಿಕೊಂಡು ಬಂದಿವೆ ಅನ್ನುವ ತಿಳಿವಳಿಕೆ ಇಲ್ಲ. ಅಮೇರಿಕದಂಥ ಅತ್ಯಾಧುನಿಕ ದೇಶದಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ಸವಲತ್ತುಗಳನ್ನು ಬಳಸದೇ ಇಂದಿಗೂ ಬದುಕುತ್ತಿರುವ ಅಮಿಶ್ ಎನ್ನುವ ಜನಾಂಗ ಇದೆ ಅನ್ನೋದು ಇಂಥವರಿಗೆ ಗೊತ್ತಿಲ್ಲ. ಸುಮ್ಮನೆ ಇರಲಾರದೇ ರಾಜ್ಯೋತ್ಸವದ ದಿನ ಕಪ್ಪು ದಿನ ಆಚರಣೆಗೆ ಕರೆ ಕೊಡುವುದನ್ನು ನೋಡಿದರೆ ಇರುವೆ ಬಿಟ್ಟುಕೊಂಡರು ಎನ್ನುವಂತಿದೆ ಎಂಇಎಸ್ ಪೇಚಾಟ.
-ಎ.ಬಿ.ಧಾರವಾಡಕರ