This is the title of the web page

15 ದಿನಗಳಲ್ಲಿ 10 ರೂ. ಸಮೀಪ ಏರಿಕೆಯಾಯ್ತು ಪೆಟ್ರೋಲ್ ದರ

ಹೊಸದಿಲ್ಲಿ, ೫- ಐದು ರಾಜ್ಯಗಳ ಚುನಾವಣೆಗಳು ಮುಗಿದ ನಂತರ ದಿನನಿತ್ಯ ದೇಶದಲ್ಲಿ ತೈಲ ಬೆಲೆಗಳು ಏರಿಕೆಯಾಗುತ್ತಿದ್ದು ಮಂಗಳವಾರ ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಮಾಡಲಾಗಿದೆ.

ಕಳೆದ 15 ದಿನಗಳಲ್ಲಿ ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್ ಬೆಲೆ 13ನೇ ಬಾರಿ ಹೆಚ್ಚಳವಾಗಿದ್ದು 15 ದಿನಗಳಲ್ಲಿ ಲೀಟರ್‌ಗೆ ಒಟ್ಟು 9.60 ರೂಪಾಯಿ ಏರಿಕೆ ಆಗಿದೆ.

ಉತ್ತರ ಪ್ರದೇಶ ಸೇರಿದಂತೆ ದೇಶದ ಐದು ರಾಜ್ಯಗಳ ಚುನಾವಣೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ 137 ದಿನಗಳ ಕಾಲ ಪೆಟ್ರೋಲ್‌ ಹಾಗೂ ಡೀಸೆಲ್ ದರವನ್ನು ಏರಿಕೆ ಮಾಡಲಾಗಿರಲಿಲ್ಲ. ಈಗ ಚುನಾವಣೆಗಳೆಲ್ಲ ಮುಗಿದ ನಂತರ ದಿನ ನಿತ್ಯ ಬೆಲೆ ಏರಿಕೆ ಮಾಡಲಾಗುತ್ತಿದೆ. ಕಳೆದ 15 ದಿನಗಳಲ್ಲಿ ಒಂದೆರಡು ದಿನ ಮಾತ್ರ ದರ ಸ್ಥಿರವಾಗಿತ್ತು. ಉಳಿದ ದಿನಗಳಲ್ಲಿ ಏರಿಕೆ ಕಂಡಿದೆ.

ಸರ್ಕಾರಿ ಸ್ವಾಮ್ಯದ ಮೂರು ಪ್ರಮುಖ ತೈಲ ಕಂಪನಿಗಳು ಏಪ್ರಿಲ್‌ 5ರಂದು ಪೆಟ್ರೋಲ್, ಡೀಸೆಲ್ ದರ ಮತ್ತೆ ಪರಿಷ್ಕರಣೆ ಮಾಡಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈಗ ಪೆಟ್ರೋಲ್ ಬೆಲೆ 80 ಪೈಸೆ ಏರಿಕೆ ಹೊಂದಿ, ಪ್ರತಿ ಲೀಟರ್‌ಗೆ ರೂ. 104.61 ಆಗಿದೆ. ಇನ್ನು ಡಿಸೇಲ್ ಬೆಲೆಯು ಕೂಡಾ ಲೀಟರ್‌ಗೆ 80 ಪೈಸೆ ಹೆಚ್ಚಳವಾಗಿ, 95.87ಗೆ ತಲುಪಿದೆ.

ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ 84 ಪೈಸೆ ಏರಿಕೆಯಾಗಿ ಇಂದು 110.25 ಆಗಿದೆ. ಇನ್ನು ಡೀಸೆಲ್ ಬೆಲೆಯು ಕೂಡಾ ಏರಿಕೆಯಾಗಿದೆ. ಡಿಸೇಲ್ ಬೆಲೆಯು 78 ಪೈಸೆ ಏರಿಕೆಯಾಗಿದ್ದು, 94.01 ರೂ ಆಗಿದೆ.

ಹೈದರಾಬಾದ‌ನಲ್ಲಿ ಪೆಟ್ರೋಲ್ ದರ 118.59 ರೂಪಾಯಿ ಆಗಿದ್ದರೆ, ಡೀಸೆಲ್ ದರ 103.62 ರೂಪಾಯಿ ಆಗಿದೆ.

ಚೆನ್ನೈನಲ್ಲಿ ಪೆಟ್ರೋಲ್ ದರ 110.11 ರೂಪಾಯಿ, ಡೀಸೆಲ್ ದರ 100.19 ರೂಪಾಯಿ ಇದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ದರ 114.28 ರೂಪಾಯಿ, ಡೀಸೆಲ್ ದರ 99.02 ರೂಪಾಯಿ ಆಗಿದೆ.

ಮುಂಬೈನಲ್ಲಿ ಇಂದು ಪೆಟ್ರೋಲ್ ಬೆಲೆ 85 ಪೈಸೆ ಹೆಚ್ಚಳವಾಗಿದ್ದು, ರೂ. 119.67 ಗೆ ತಲುಪಿದರೆ, ಡೀಸೆಲ್ ಬೆಲೆ 85 ಪೈಸೆ ಹೆಚ್ಚಳವಾಗಿ ರೂ. 103.92 ಆಗಿದೆ.

ಇನ್ನು ಡೀಸೆಲ್ ದರವು ದೇಶದ ಕೆಲವು ಪ್ರಮುಖ ನಗರದಲ್ಲಿ ನೂರರ ಗಡಿಯನ್ನು ದಾಟಿದೆ. ಹೈದರಾಬಾದ್‌, ಮುಂಬೈ, ತಿರುವನಂತಪುರ, ಭುವನೇಶ್ವರ, ಚೆನ್ನೈ, ಜೈಪುರ, ಪಾಟ್ನಾದಲ್ಲಿ ಡೀಸೆಲ್ ದರವು ನೂರು ದಾಟಿದೆ.

You might also like
Leave a comment