This is the title of the web page

ಕೇರಳ ಬಗ್ಗೆ ಟೀಕಿಸಿದ ಯೋಗಿಗೆ ತಿರುಗೇಟು ನೀಡಿದ ಪಿಣರಾಯಿ

ತಿರುವನಂತಪುರಂ, 12- ಉತ್ತರ ಪ್ರದೇಶದಲ್ಲಿ ಮತದಾರರು ಸ್ವಲ್ಪ ಎಡವಿದರೂ ರಾಜ್ಯವು ಮತ್ತೊಂದು ಕೇರಳ, ಪಶ್ಚಿಮ ಬಂಗಾಳ ಅಥವಾ ಕಾಶ್ಮೀರವಾಗಿ ಪರಿವರ್ತನೆ ಆಗುತ್ತದೆ ಎಂಬ ಮುಖ್ಯಮಂತ್ರಿ ಆದಿತ್ಯನಾಥ ಹೇಳಿಕೆಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಾಕ್ಷಿ ಸಮೇತ ತಿರುಗೇಟು ನೀಡಿದ್ದಾರೆ.

ದೇಶದ ಬಹುತೇಕ ವಲಯಗಳಲ್ಲಿ ಕೇರಳ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ. ಉತ್ತಮ ಆಡಳಿತ, ಕಾನೂನು ವ್ಯವಸ್ತೆ, ಶಿಕ್ಷಣ, ಆರೋಗ್ಯ, ಅತ್ಯಂತ ಕಡಿಮೆ ಶಿಶು ಮರಣ ಪ್ರಮಾಣ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ನೀತಿ ಆಯೋಗವು ನೀಡಿದ ಸೂಚ್ಯಂಕಗಳ ಸಮೇತವಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿಗೆ ಪಿಣರಾಯಿ ವಿಜಯನ್ ಸರಿಯಾಗಿ ತಿರುಗೇಟು ನೀಡಿದ್ದಾರೆ.

ಆರೋಗ್ಯ, ಶಿಕ್ಷಣ, ಅಭಿವೃದ್ಧಿ ಸೇರಿದಂತೆ ಎಲ್ಲ ವಲಯಗಳಲ್ಲಿ ಕೇರಳ ಉತ್ತಮ ಸ್ಥಾನದಲ್ಲಿದೆ. ಸಾರ್ವಜನಿಕ ವ್ಯವಹಾರಗಳ ಸೂಚ್ಯಂಕ 2021 ರ ಪ್ರಕಾರ ಕೇರಳವು ಭಾರತದಲ್ಲಿ ಅತ್ಯುತ್ತಮ ಆಡಳಿತವನ್ನು ಹೊಂದಿರುವ ರಾಜ್ಯ ಎಂದು ಗುರುತಿಸಲ್ಪಟ್ಟಿದೆ ಎಂದು ಕೇರಳ ಮುಖ್ಯಮಂತ್ರಿ ವಿವರಿಸಿದ್ದಾರೆ.

ಕೇರಳದಲ್ಲಿ ಬಡವರ ಸಂಖ್ಯೆ ತೀರಾ ಕಡಿಮೆಯಾಗಿದೆ. ನೀತಿ ಆಯೋಗದ ಬಹು ಆಯಾಮದ ಬಡತನ ಸೂಚ್ಯಂಕದ ಕುರಿತು ಸ್ವತಃ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟ್ವೀಟ್ ಮಾಡಿದ್ದಾರೆ.

ನೀತಿ ಆಯೋಗದ ಬಡತನ ಸೂಚ್ಯಂಕದ ಪ್ರಕಾರ, ಭಾರತದಲ್ಲಿ ಒಟ್ಟು ಬಡವರ ಪ್ರಮಾಣ ಶೇ.25.02ರಷ್ಟಿದೆ. ಈ ಪೈಕಿ ಅತಿಕಡಿಮೆ ಬಡವರನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಕೇರಳ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ. ಕೇರಳದಲ್ಲಿ ಶೇ.0.71ರಷ್ಟು ಜನರು ಮಾತ್ರ ಬಡತನದಲ್ಲಿದ್ದಾರೆ ಎಂದು ನೀತಿ ಆಯೋಗ ವರದಿಯಲ್ಲಿ ತಿಳಿಸಿದೆ.

ಇನ್ನೊಂದು ದಿಕ್ಕಿನಲ್ಲಿ ಬಿಹಾರದಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ಬಡವರಿದ್ದು, ಬಡತನ ರೇಖೆಗಿಂತ ಕೆಳಗಿರುವವರ ಶೇಕಡಾವಾರು ಪ್ರಮಾಣ 51.91ರಷ್ಟಿದೆ. ಜಾರ್ಖಂಡ್ ಶೇ.42.16ರಷ್ಟಿದ್ದರೆ, ಉತ್ತರ ಪ್ರದೇಶ ಶೇ.37.79ರಷ್ಟಿದೆ. ಇನ್ನು ಮಧ್ಯ ಪ್ರದೇಶದಲ್ಲಿ ಶೇ.36.65ರಷ್ಟು ಮಂದಿ ಬಡವರಾಗಿದ್ದರೆ, ಮೇಘಾಲಯದಲ್ಲಿ ಶೇ.32.67ರಷ್ಟಿದೆ ಎಂಬುದು ಸೂಚ್ಯಂಕದಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಕೇರಳದಲ್ಲಿ ಸಾಕ್ಷರತೆ ಪ್ರಮಾಣ ಶೇ.98.25 ರಷ್ಟಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ – 5ರ ಪ್ರಕಾರ, ಕೇರಳ ಜನಸಂಖ್ಯೆಯ ಶೇ.98.25ರಷ್ಟು ಜನರು ಸಾಕ್ಷರತೆಯನ್ನು ಹೊಂದಿದ್ದಾರೆ. ಪುರುಷರು ಶೇ.97.40ರಷ್ಟು ಸಾಕ್ಷರರಾಗಿದ್ದರೆ, ಮಹಿಳೆಯರಲ್ಲಿ ಸಾಕ್ಷರತೆ ಪ್ರಮಾಣ ಶೇ.97.10ರಷ್ಟಿದೆ ಎಂದು ಪಿಣರಾಯಿ ವಿಜಯನ್ ಟ್ವೀಟ್ ಸಂದೇಶದಲ್ಲಿ ಹಂಚಿಕೊಂಡಿದ್ದಾರೆ.

You might also like
Leave a comment