This is the title of the web page

ಪ್ರಧಾನಿ ಮೋದಿ ಕಾರ್ಯಕ್ರಮದ ವಿವಾದ

ಬೆಂಗಳೂರು : ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಭಾಗಶಃ ಕಾರ್ಯ‌ನಿರ್ವಹಣೆ ಮಾಡುತ್ತಿರುವ ಡಾ.ಬಿ.ಆರ್.ಅಂಬೇಡ್ಕರ ಸ್ಕೂಲ್ ಆಫ್ ಎಕನಾಮಿಕ್ಸ್ ( ಬೇಸ್ ) ನ್ನು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಉದ್ಘಾಟನೆ ಮಾಡುತ್ತಿರುವುದು ಈಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಒಟ್ಟು 201 ಕೋಟಿ ರೂಪಾಯಿ ಮೊತ್ತದ ನೂತನ ಬೇಸ್ ಕ್ಯಾಂಪ್ ಉದ್ಘಾಟನೆಯನ್ನು ಪ್ರಧಾನಿ ಮೋದಿ ಅವರು ನಡೆಸಲಿದ್ದಾರೆ ಎಂದು ರಾಜ್ಯ ಸರಕಾರ ಕಾರ್ಯಕ್ರಮ‌ ರೂಪಿಸಿದೆ.

ಆದರೆ ತಮ್ಮ ಸರಕಾರದ ಅವಧಿಯಲ್ಲಿ ಡಾ.ಮನಮೋಹನ ಸಿಂಗ್ ಉದ್ಘಾಟನೆ ಮಾಡಿದ ಯೋಜನೆಗೆ ಮರು ಉದ್ಘಾಟನಾ ಭಾಗ್ಯ ಕರುಣಿಸುವುದೇಕೆ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸ್ಕೂಲ್ ಆಫ್ ಎಕನಾಮಿಕ್ಸ್ ಸ್ಥಾಪನೆಗೆ ಶ್ರಮ ವಹಿಸಿದ್ದ ಮಾಜಿ ಸಚಿವ ಪ್ರಿಯಾಂಕ ಖರ್ಗೆ ಈ ಬಗ್ಗೆ ಸರಣಿ ಟ್ವೀಟ್ ಮಾಡಿ ರಾಜ್ಯ ಸರಕಾರದ ನಡೆಯನ್ನು ಪ್ರಶ್ನಿಸಿದ್ದಾರೆ.

ಅಂಬೇಡ್ಕರ ಸ್ಕೂಲ್ ಆಫ್ ಎಕಾನಾಮಿಕ್ಸ್ ಸ್ಥಾಪನೆಯ ಹಿಂದಿನ ಶ್ರಮ, ಲಂಡನ್ ಪ್ರವಾಸ ಸಂದರ್ಭದಲ್ಲಿ ಅಲ್ಲಿನ ವಿದ್ಯಾ ಸಂಸ್ಥೆಗಳ ಜತೆಗೆ ನಡೆಸಿದ ಮಾತುಕತೆ ಹಾಗೂ ಉದ್ಘಾಟನೆಯವರೆಗಿನ ವಿಚಾರವನ್ನು ಸರಣಿ ಟ್ವೀಟ್ ಮೂಲಕ ಪ್ರಿಯಾಂಕ ಖರ್ಗೆ ವಿವರಿಸಿದ್ದಾರೆ. ಯೋಜನೆಯ ನೀಲನಕ್ಷೆಯನ್ನು ಪ್ರಧಾನಿ ಮೋದಿ ಈಗ ವೀಕ್ಷಿಸುತ್ತಿರುವುದನ್ನು ಅವರು ಪ್ರಶ್ನಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, 4-10-2017 ರಂದು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ಬೆಂಗಳೂರಿಗೆ ಬಂದು ನಮ್ಮ ಸರ್ಕಾರದ ಹೆಮ್ಮೆಯ ಯೋಜನೆಯಾದ ಡಾ.ಬಿ.ಆರ್.ಅಂಬೇಡ್ಕರ ಸ್ಕೂಲ್ ಆಫ್ ಎಕನಾಮಿಕ್ಸ್ ಉದ್ಘಾಟಿಸಿದ್ದು ನಾನು ಮುಖ್ಯಮಂತ್ರಿಯಾಗಿದ್ದ ಕಾಲದ ಮಧುರ ಮತ್ತು ಸಾರ್ಥಕ ನೆನಪು ಎಂದು ಸರಣಿ ಟ್ವಿಟ್ ಮಾಡಿದ್ದಾರೆ.

ಡಾ.ಬಿ.ಆರ್.ಅಂಬೇಡ್ಕರ ಸ್ಕೂಲ್ ಆಫ್ ಎಕಾನಿಮಿಕ್ಸ ಸ್ಥಾಪನೆಗೆ 2017ರಲ್ಲಿಯೇ 43.45 ಎಕರೆ ಜಮೀನು ಮತ್ತು ಹೊಸ ಕಟ್ಟಡ ಸಹಿತ ಮೂಲಸೌಕರ್ಯ ನಿರ್ಮಾಣಕ್ಕೆ 350 ಕೋಟಿ ರೂಪಾಯಿ ಮಂಜೂರು ಮಾಡಿದ್ದ ನಮ್ಮ ಸರ್ಕಾರ ಬದ್ಧತೆಯಿಂದ ಈ ಯೋಜನೆಯನ್ನು ಸಾಕಾರಗೊಳಿಸಿತ್ತು ಎಂದು ಟ್ವೀಟನಲ್ಲಿ ಹೇಳಿದ್ದಾರೆ.

ಬಾಬಾಸಾಹೇಬ  ಅಂಬೇಡ್ಕರ ಸ್ಕೂಲ್ ಆಫ್ ಎಕಾನಿಮಿಕ್ಸ್ ಕಟ್ಟಡದ ಶಂಕುಸ್ಥಾಪನೆ ಮಾಡಿದ್ದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ. ಈ ಕಟ್ಟಡವನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸಿದ್ದು ನಮ್ಮ ಸರ್ಕಾರದ ಹೆಮ್ಮೆಯ ಸಾಧನೆ. ಜ್ಞಾನಭಾರತಿ ಕ್ಯಾಂಪಸ್ ನಲ್ಲಿಯೇ ಇದ್ದ ಕಟ್ಟಡದಲ್ಲಿಯೇ 2017ರ ಜೂನ್ ನಲ್ಲಿ ತರಗತಿಗಳು ಪ್ರಾರಂಭವಾಗಿದ್ದವು ಎಂದು ಹೀಗೆ ಸರಣಿ ಟ್ವಿಟ್ ಮಾಡಿದ್ದಾರೆ.

You might also like
Leave a comment