This is the title of the web page

ಇಬ್ಬಗೆ ನೀತಿ

ರಿಷಿ ಸನೂಕ್ ಬ್ರಿಟನ್‍ನ ಹಣಕಾಸು ಸಚಿವ. ಇವರು ಭಾರತೀಯ ಮೂಲದವರು. ಸದ್ಯದಲ್ಲಿಯೇ ಇವರು ಬ್ರಿಟನ್ ಪ್ರಧಾನಿ ಆಗುತ್ತಾರೆ ಎಂಬ ಸುದ್ದಿ ಇದೆ. ಈ ಸುದ್ದಿ ಪ್ರಕಟ ಆಗುತ್ತಿದ್ದಂತೆ ನಮ್ಮಲ್ಲಿ ಹಲವರು ಈ ಬೆಳವಣಿಗೆ ಕುರಿತು ಸಂತಸ ವ್ಯಕ್ತ ಮಾಡಿದರು. ಜಗತ್ತಿನ ದೊಡ್ಡ ದೊಡ್ಡ ದೇಶಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳ ಉನ್ನತ ಹುದ್ದೆಯಲ್ಲಿ ಭಾರತೀಯ ಮೂಲದ ಜನ ಇರುವುದು ನಾವೆಲ್ಲ ಎಷ್ಟೆಲ್ಲ ಪ್ರತಿಭಾವಂತರು ಎನ್ನುವುದನ್ನು ತೋರುತ್ತದೆ ಎಂಬುದು ಅವರ ನಿಲುವು. ಇದಕ್ಕೆ ಪೂರಕವಾಗಿ, ಇನ್ನೂ ಹಲವಾರು ಉನ್ನತ ಹುದ್ದೆಗಳಲ್ಲಿ ಇರುವ ಭಾರತೀಯ ಮೂಲದ ಜನ ನೆನಪಾಗುತ್ತಾರೆ.

ಅಮೇರಿಕದ ಅಧ್ಯಕ್ಷ ಜೋ ಬೈಡೆನ್ ಅವರು ತಮ್ಮ ಅಧಿಕಾರಾವಧಿಯ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಮಾತಾಡುತ್ತಾ, ತಮ್ಮ ಮುಂದಿನ ಉತ್ತರಾಧಿಕಾರಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಎಂದು ಹೇಳಿದ್ದಾರೆ. ಕಮಲಾ ಕೂಡ ಭಾರತೀಯ ಮೂಲದವರು. ಇದಲ್ಲದೇ ವಿಶ್ವ ಬ್ಯಾಂಕ್‍ನಲ್ಲಿ ಆರ್ಥಿಕ ಸಲಹೆಗಾರ್ತಿ ಆಗಿರುವ ಗೀತಾ ಗೋಪಿನಾಥ ಮತ್ತು ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಪ್ರಧಾನ ಹುದ್ದೆಯಲ್ಲಿ ಇರುವ ಸೌಮ್ಯ ಸ್ವಾಮಿನಾಥನ್ ಕೂಡ ಭಾರತೀಯ ಮೂಲದವರು. ಅಂದರೆ ಜಗತ್ತಿನ ವಿದ್ಯಮಾನಗಳ ಕುರಿತು ನಿರ್ಣಾಯಕ ಪಾತ್ರ ವಹಿಸುವ ಹುದ್ದೆಗಳಲ್ಲಿ ಭಾರತೀಯರು ಇದ್ದಾರೆ ಎಂದಾಯಿತು.

ಇದು ಒಂದು ಕಡೆಯಾದರೆ, ಕಾರ್ಪೊರೇಟ್ ವಲಯದಲ್ಲಿ ವಿಜೃಂಭಿಸುತ್ತಿರುವ ಉನ್ನತಾಧಿಕಾರ ಸ್ಥಾನಗಳಲ್ಲಿ ನಮ್ಮ ಭಾರತೀಯರದ್ದೇ ಮೇಲುಗೈ ಇದೆ. ಗೂಗಲ್ ಮುಖ್ಯಸ್ಥ, ಮೈಕ್ರೋಸಾಫ್ಟ್‍ನ ಉನ್ನತ ಹುದ್ದೆಯಲ್ಲಿ ಇರುವವರು ಭಾರತೀಯ ಮೂಲದವರು. ಇತ್ತೀಚೆಗೆ ಪೆಪ್ಸಿಕೋ ಕಂಪನಿಯ ಮುಖ್ಯಸ್ಥೆ ಹುದ್ದೆಯಿಂದ ನಿವೃತ್ತರಾದ ಇಂದ್ರ ನೂಯಿ ಕೂಡ ಭಾರತೀಯ ಮೂಲದವರು. ಇದಲ್ಲದೇ ಇನ್ನೂ ಹಲವಾರು ಮಹತ್ವದ ಹುದ್ದೆಗಳಲ್ಲಿ ಭಾರತೀಯ ಮೂಲದ ಜನ ಇರುವುದನ್ನು ನಾವು ಗಮನಿಸಿರುತ್ತೇವೆ. ಅಮೇರಿಕಾ ಮತ್ತು ಬ್ರಿಟನ್‍ನಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಮತ್ತು ದಾದಿಯರಲ್ಲಿ ಭಾರತೀಯ ಮೂಲದವರೇ ಹೆಚ್ಚು. ಇನ್ನು ಜಗತ್ತಿನ ಸಾಫ್ಟವೇರ್ ಉದ್ಯಮದಲ್ಲಂತೂ ಭಾರತೀಯರೇ ತುಂಬಿ ತುಳುಕುತ್ತಿದ್ದಾರೆ.

ಈ ಕುರಿತು ನಮ್ಮ ರಾಜಕೀಯ ನಾಯಕರು ಬಹಳ ಹೆಮ್ಮೆಯಿಂದ ಮಾತಾಡುತ್ತಾರೆ. ಜಗತ್ತಿಗೆ ಇದು ಭಾರತದ ಕೊಡುಗೆ ಎಂಬಂಥ ಮಾತು ಕೇಳಿ ಬರುತ್ತಿದೆ. ಆದರೆ ಇವರೆಲ್ಲರ ಪ್ರತಿಭೆ ಉಳಿಸಿ, ಬೆಳೆಸಿ, ದೇಶಕ್ಕೆ ಪ್ರಯೋಜನ ಆಗುವ ರೀತಿಯಲ್ಲಿ ತಾವು ದೇಶ ಕಟ್ಟಿಲ್ಲ ಎಂದು ಕೂಡ ಇವರಿಗೆ ನಾಚಿಕೆ ಎನಿಸುವುದಿಲ್ಲ. ಹಿಂದೊಮ್ಮೆ ಭಾರತೀಯ ಪ್ರತಿಭಾವಂತರು ವಿದೇಶಕ್ಕೆ ಹೋಗಿ ನೆಲೆಸುವುದನ್ನು ಪ್ರತಿಭಾ ಪಲಾಯನ (‘ಬ್ರೈನ್ ಡ್ರೈನ್’) ಎಂದು ಗುರುತಿಸಿ, ಅದನ್ನು ತಡೆಯಲು ಯತ್ನ ನಡೆದಿತ್ತು. ಆ ಸಮಯಕ್ಕೆ ಪ್ರತಿಭಾವಂತರು ವಿದೇಶಕ್ಕೆ ತೆರಳುವುದು ಲಜ್ಜೆಯ ಸಂಗತಿ ಎಂದು ಭಾವಿಸುತ್ತಿದ್ದರು. ಹಾಗಾಗಿಯೇ ಕೆಲವು ಪ್ರತಿಭಾವಂತರು ಇಲ್ಲಿಯೇ ಉಳಿದು, ನಮ್ಮ ದೇಶದ ಪ್ರಗತಿಗೆ ಕಾರಣ ಆದರು. ಅದರಲ್ಲಿ ಬಾಹ್ಯಾಕಾಶ ಸಂಶೋಧನೆ, ಅಣು ವಿಜ್ಞಾನ ಕ್ಷೇತ್ರಗಳಲ್ಲಿ ಈಗ ಭಾರತ ಏನಾದರೂ ಪ್ರಗತಿ ಸಾಧಿಸಿದೆ ಎಂದರೆ ಅದಕ್ಕೆ ದೇಶದಲ್ಲಿಯೇ ಉಳಿದು, ಇಲ್ಲಿನ ಸಣ್ಣತನಗಳ ನಾಯಕರ ಜೊತೆ ಗುದ್ದಾಡಿ ಇಷ್ಟೆಲ್ಲಾ ಸಾಧನೆ ಮಾಡಿದವರು. ಆದರೆ ಅವರ ನೆನಪು ಕೂಡ ಯಾರೂ ತೆಗೆಯುತ್ತಿಲ್ಲ. ಹೋಗಲಿ ಈಗಲಾದರೂ ನಮ್ಮಲ್ಲಿಯೇ ಪ್ರತಿಭಾವಂತರನ್ನು ಉಳಿಸಿಕೊಂಡು, ಪೂರಕ ವಾತಾವರಣ ನಿರ್ಮಿಸೋಣ ಎಂಬ ಚಿಂತನೆ ನಡೆಯುತ್ತಿಲ್ಲ. ಬದಲಿಗೆ ತಮ್ಮ ಮಗ, ಮಗಳು, ಅಳಿಯ ವಿದೇಶದಲ್ಲಿ ನೆಲೆಸಿದ್ದಾರೆ ಎಂಬುದೇ ಹೆಮ್ಮೆಯ ಸಂಗತಿ ಎನ್ನುವಂತಾಗಿದೆ. ಇದು ನಿಜಕ್ಕೂ ದುರಂತ.

ಇನ್ನೊಂದು ಸಂಗತಿ ಇಲ್ಲಿ ಪ್ರಸ್ತಾಪಿಸುವುದು ಮುಖ್ಯ. ರಿಷಿ ಅವರನ್ನು ಬ್ರಿಟನ್ ಪ್ರಧಾನಿ ಮಾಡಬೇಕು ಎನ್ನುವ ಕೂಗು ಎದ್ದಿರುವುದು ಕೇವಲ ಅವರ ಪ್ರತಿಭೆ ಗುರುತಿಸಿ ಅಲ್ಲ. ಕೋವಿಡ್‍ನ ಎರಡನೇ ಅಲೆ ನಿರ್ವಹಣೆ ಸಮಯದಲ್ಲಿ ಅಲ್ಲಿನ ಪ್ರಧಾನಿ ತೋರಿದ ಬೇಜವಾಬ್ದಾರಿಯ ಕಾರಣ ಅವರನ್ನು ಬದಲಿಸಿ, ಪರ್ಯಾಯ ಎನಿಸಿದ ರಿಷಿ ಅವರು ಪ್ರಧಾನಿ ಆಗಲಿ ಎನ್ನುವುದು ಅಲ್ಲಿನ ರಾಜಕೀಯ ವಲಯದ ಅಭಿಮತ. ಈ ಕುರಿತು ಯಾರೂ ಗಂಭೀರವಾಗಿ ತಮ್ಮ ವಿಚಾರ ಬಯಲು ಮಾಡುವುದೇ ಇಲ್ಲ. ರಿಷಿ ಪ್ರಧಾನಿ ಆಗಲಿದ್ದಾರೆ ಎಂಬುದು ಇವರಿಗೆ ಮುಖ್ಯವೇ ಹೊರತು, ಏಕೆ ಈ ಬದಲಾವಣೆ ಆಗುತ್ತಿದೆ ಎನ್ನುವ ಕುರಿತು ಯಾರೂ ಪ್ರಸ್ತಾಪಿಸುತ್ತಿಲ್ಲ. ಇದು ನಮ್ಮಲ್ಲಿನ ಇಬ್ಬಗೆ ನೀತಿಗೆ ದೊಡ್ಡ ಉದಾಹರಣೆ.

ನಮ್ಮ ದೇಶ ಮತ್ತು ರಾಜ್ಯಗಳ ಚುಕ್ಕಾಣಿ ಹಿಡಿದ ನಾಯಕರು ಬದಲಾಗುವುದು ಚುನಾವಣೆಯಲ್ಲಿ ಸೋತಾಗ ಅಥವಾ ಯಾವುದೋ ಜಾತಿ ಅಥವಾ ವರ್ಗದಿಂದ ಒತ್ತಡ ಬಂದಾಗಲೇ ವಿನಹ ಅವರು ಅಪ್ರಮಾಣಿಕರು, ಅಸಮರ್ಥರು ಎಂದಲ್ಲ. ಹೀಗಾಗಿಯೇ ಇಲ್ಲಿ ಎಷ್ಟೋ ಜನರ ಕೊಲೆಗಳನ್ನು ಮಾಡಿ ಜೈಲಿಗೆ ಹೋಗಿ ಬಂದವರು, ಜಾಮೀನಿನ ಮೇಲೆ ಇರುವವರು ಸಹ ಆಡಳಿತದ ಚುಕ್ಕಾಣಿ ಹಿಡಿಯುತ್ತಾರೆ. ಭಾರೀ ಕ್ರಿಮಿನಲ್ ಪ್ರಕರಣ ಇರುವವರು ಮುಖ್ಯಮಂತ್ರಿಯಾಗಿ, ತಮ್ಮ ವಿರುದ್ಧದ ಕೇಸುಗಳನ್ನು ತಾವೇ ರದ್ದು ಮಾಡಿಕೊಳ್ಳುತ್ತಾರೆ. ನಮ್ಮ ಕೋವಿಡ್ ನಿರ್ವಹಣೆ ಹಳ್ಳ ಹಿಡಿದು ಹೋದಾಗಲೂ, ಅತ್ಯಂತ ಯಶಸ್ವಿ ನಿರ್ವಹಣೆ ಮಾಡಲಾಯಿತು ಎಂದು ತಮಗೆ ತಾವೇ ಸರ್ಟಿಫಿಕೇಟ್ ಕೊಟ್ಟುಕೊಳ್ಳುತ್ತಾರೆ. ಆದರೂ ಜನರಾಗಲಿ, ರಾಜಕೀಯ ಧುರೀಣರಾಗಲಿ ಇಂಥವರನ್ನು ತೆಗೆದು ಬಿಸಾಕಿ ಸರಿಯಾದವರನ್ನು ತನ್ನಿ ಎಂದು ಪಟ್ಟು ಹಿಡಿಯುವುದಿಲ್ಲ. ಭ್ರಷ್ಠಾಚಾರದ ವಿರುದ್ಧ ದನಿ ಎತ್ತಿ ಉಪವಾಸ ಮಾಡಿದ ಮಹಾನುಭಾವರು ಅದೆಲ್ಲೋ ಕಾಣೆಯಾಗಿ ಬಿಡುತ್ತಾರೆ.

ನಮ್ಮ ನಾಯಕರು ಏನು ಮಾಡಿದರೂ ಸರಿ. ಏಕೆಂದರೆ, ಅವರಿಂದ ನಮಗೆ ಅನುಕೂಲ ಇದೆ, ಜನ ಹಾಳಾಗಿ ಹೋದರೆ ನಮಗೇನು ಎಂದು ಯೋಚಿಸುವ ರಾಜಕೀಯ ಚೇಲಾಗಳೇ ತುಂಬಿಕೊಂಡಿರುವಾಗ ಅಸಮರ್ಥರ ವಿರುದ್ಧ ದನಿ ಎತ್ತುವ ಯಾರೂ ಇಲ್ಲಿ ಕಾಣುತ್ತಿಲ್ಲ. ಜನರಿಗೆ ಮಾದರಿ ಆಗಿರಬೇಕಾದ ವ್ಯಕ್ತಿ ಸುಳ್ಳು ಹೇಳಿದರೆ, ತಪ್ಪಿ ನಡೆದರೆ ಆತನನ್ನು ಸಮರ್ಥಿಸಿಕೊಂಡು ಕಿರುಚಾಡುವವರ ದಂಡೇ ತುಂಬಿರುವ ರಾಜಕೀಯದಲ್ಲಿ ಬದಲಾವಣೆ ಸಾಧ್ಯವೇ?

ಎಲ್ಲಿಯ ವರೆಗೆ ನಾವು ಅಮೇರಿಕದಲ್ಲಿ ಇರುವ ಮಗ, ಮಗಳು, ಅಳಿಯನ ಬಗ್ಗೆ ಹೆಮ್ಮೆ ಪಡುತ್ತೇವೆಯೋ; ಎಲ್ಲಿಯವರೆಗೆ ಮಾನಸಿಕವಾಗಿ ಭ್ರಷ್ಠರಾಗಿರುವ ಅಯೋಗ್ಯ ನಾಯಕರನ್ನು ಸಹಿಸಿಕೊಂಡು ಇರುತ್ತೇವೆಯೋ, ಅಲ್ಲಿಯತನಕ ನಮ್ಮ ಇಬ್ಬಂದಿತನದಿಂದ ನಾವೇ ದುರಂತವನ್ನು ಆಹ್ವಾನಿಸಿಕೊಳ್ಳುತ್ತಾ ಇರುತ್ತೇವೆ. ಜನರಲ್ಲಿ ಎಚ್ಚರ ಮೂಡಿ ತಿದ್ದಿಕೊಂಡ ಘಳಿಗೆಯಿಂದ ಈ ದೇಶದಲ್ಲಿ ಒಳಿತು ಕಾಣಲು ಸಾಧ್ಯ.

-ಎ.ಬಿ.ಧಾರವಾಡಕರ

You might also like
Leave a comment