This is the title of the web page

ಅಂಬೇಡಕರ ಭಾವಚಿತ್ರ ಕಡ್ಡಾಯ – ಹೈಕೋರ್ಟ

ಬೆಂಗಳೂರು, 5- ಹೈಕೋರ್ಟ‌‌ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ದಿನ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ ಭಾವಚಿತ್ರ ಇಡುವುದನ್ನು ಕಡ್ಡಾಯಗೊಳಿಸಲು ಹೈಕೋರ್ಟ ನಿರ್ಧರಿಸಿದೆ.

ಗಣರಾಜ್ಯೋತ್ಸವ ದಿನದಂದು ರಾಯಚೂರಿನ ಜಿಲ್ಲಾ ನ್ಯಾಯಾಧೀಶರು ಅಂಬೇಡ್ಕರ ಭಾವಚಿತ್ರ ತೆಗೆಸಿ ಅಪಮಾನ ಮಾಡಿದರು ಎಂಬ ವರದಿಗಳ ಬೆನ್ನೆಲ್ಲೆ ಈ ತೀರ್ಮಾನವನ್ನು ಹೈಕೋರ್ಟ ಕೈಗೊಂಡಿದೆ.

ಹೈಕೋರ್ಟ‌ ಮುಖ್ಯ ನ್ಯಾಯಮೂರ್ತಿ ರಿತುರಾಜ‌ ಅವಸ್ಥಿ ಅವರ ನೇತೃತ್ವದಲ್ಲಿ ಶುಕ್ರವಾರ ನಡೆದ ಆಡಳಿತಾತ್ಮಕ ಪೂರ್ಣಪೀಠ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಸಿಜೆ ಆದೇಶದ ಮೇರೆಗೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಟಿ.ಜಿ. ಶಿವಶಂಕರೇಗೌಡ ಸುತ್ತೋಲೆ ಹೊರಡಿಸಿದ್ದಾರೆ.

ಗಾಂಧೀಜಿಯ ಭಾವಚಿತ್ರವನ್ನು ನ್ಯಾಯಾಂಗ ಇಲಾಖೆಯ ಕಾರ್ಯಕ್ರಮದಲ್ಲಿಡುವ ಸಂಬಂಧ ಪೂರ್ಣಪೀಠವು ಹಿಂದೆಯೇ ಗೊತ್ತುವಳಿ ಅಂಗೀಕರಿಸಿತ್ತು, ಆದರೆ ಅಂಬೇಡ್ಕರ ಭಾವಚಿತ್ರವನ್ನು ಇಡುವುದಕ್ಕೆ ಸಂಬಂಧಿಸಿದ ಪ್ರಕರಣವು ಎರಡು ವರ್ಷಗಳಿಂದ ಪೂರ್ಣಪೀಠದ ಮುಂದೆ ಪರಿಶೀಲನೆಗೆ ಬಾಕಿ ಇತ್ತು. ಇದೀಗ ಪೂರ್ಣಪೀಠ ಒಪ್ಪಿಗೆ ನೀಡಿದೆ.

ಜ.26ರಂದು ಗಣರಾಜ್ಯೋತ್ಸವ, ಅಗಸ್ಟ15 ಸ್ವಾತಂತ್ರ್ಯೋತ್ಸವ ಹಾಗೂ ನ.26ರಂದು ಸಂವಿಧಾನ ದಿನದ ಅಂಗವಾಗಿ ಹೈಕೋರ್ಟ ಪ್ರಧಾನ ಪೀಠ, ಧಾರವಾಡ, ಕಲಬುರಗಿ ಪೀಠಗಳು ಹಾಗೂ ಎಲ್ಲ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಆಯೋಜಿಸಲಾಗುವ ಅಧಿಕೃತ ಕಾರ್ಯಕ್ರಮಗಳಲ್ಲಿ ಡಾ.ಬಿ.ಆರ್. ಅಂಬೇಡ್ಕರ ಅವರ ಭಾವಚಿತ್ರವಿಡಲು ಕ್ರಮ ಕೈಗೊಳ್ಳುವಂತೆ ಆಯಾ ನ್ಯಾಯಾಲಯಗಳ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.

ಕಳೆದ ವಾರ ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಡಾ.ಬಿ.ಆರ್‌ ಅಂಬೇಡ್ಕರ್‌ ಭಾವಚಿತ್ರ ತೆಗೆಸಿ ಅಪಮಾನ ಮಾಡಿದ್ದಾರೆನ್ನಲಾದ ಆರೋಪ ಸಂಬಂಧ ವರದಿ ತರಿಸಿಕೊಂಡು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೈಕೋರ್ಟ‌ ಮುಖ್ಯ ನ್ಯಾಯಮೂರ್ತಿ ಋತುರಾಜ‌ ಅವಸ್ಥಿ ಈ ಹಿಂದೆ ಭರವಸೆ ನೀಡಿದ್ದರು.

ಗಣರಾಜ್ಯೋತ್ಸವ ಧ್ವಜಾರೋಹಣ ನಡೆಯುತ್ತಿದ್ದ ಸ್ಥಳದಲ್ಲಿ ಡಾ.ಬಿ. ಆರ್ ಅಂಬೇಡ್ಕರ ಅವರ ಭಾವಚಿತ್ರವನ್ನು ಇರಿಸಲಾಗಿತ್ತು. ಆದರೆ, ರಾಯಚೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರು ಧ್ವಜಾರೋಹಣ ಸ್ಥಳದಿಂದ ಡಾ.ಬಿ.ಆರ್. ಅಂಬೇಡ್ಕರ ಅವರ ಭಾವಚಿತ್ರವನ್ನು ತೆಗೆಸಿದ್ದರು.

You might also like
Leave a comment