This is the title of the web page

ಮಳೆಯ‌ ಆರ್ಭಟಕ್ಕೆ ಅವಾಂತರ ಸೃಷ್ಟಿ : ಕಂಗಾಲಾದ ಕೃಷಿಕರು,ಜಲಾವೃತ್ತಗೊಂಡ ಬಡಾವಣೆಗಳು

ಚಾಮರಾಜನಗರ: ನವೆಂಬರ್ 19 ಕಳೆದ 15ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದ ಜಿಲ್ಲಾದ್ಯಂತ ಅವಾಂತರ ಸೃಷ್ಟಿಯಾಗಿದೆ. ಇದರಿಂದ ಬಹುಪಾಲು ಬೆಳೆ ನಾಶವಾಗಿದೆ. ಕೃಷಿಕರು ಕಂಗಾಲಾಗಿದ್ದಾರೆ. ಜಿಲ್ಲೆಯಲ್ಲಿ ಮುಂದುವರೆದ ಮಳೆಯ ಆರ್ಭಟಕ್ಕೆ ಬರೋಬ್ಬರಿ 110 ಮನೆಗಳು ಹಾನಿಯಾಗಿ ಬಡವರ ಬದುಕು ಬೀದಿಗೆ ಬಿದ್ದಿದೆ. ಜೊತೆಗೆ ಕಾಲುವೆ ಒಡೆದು ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪ್ರಕೃತಿ ವಿಕೋಪ ಶಾಖೆ ನೀಡಿರುವ ಮಾಹಿತಿ ಪ್ರಕಾರ, ನ.1ರಿಂದ 18 ರವರೆಗೆ ಹನೂರು ತಾಲೂಕಿನಲ್ಲಿ 48, ಯಳಂದೂರಿನಲ್ಲಿ 24, ಕೊಳ್ಳೇಗಾಲದಲ್ಲಿ 20, ಗುಂಡ್ಲುಪೇಟೆಯಲ್ಲಿ 9, ಚಾಮರಾಜನಗರದಲ್ಲಿ 9 ಮನೆಗಳ ಗೋಡೆಗಳು ಕುಸಿದಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಜಿಲ್ಲೆಯಲ್ಲಿ ನವೆಂಬರ್​ ತಿಂಗಳ 14 ದಿನಗಳಲ್ಲಿ 146 ಎಂಎಂ ಮಳೆಯಾಗಿದ್ದು, ಅತಿವೃಷ್ಠಿಯಿಂದ 1,500ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದ ಬೆಳೆಹಾನಿಯಾಗಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.

ಕಟಾವಿಗೆ ಬಂದಿದ್ದ ರಾಗಿ, ಕಬ್ಬು, ಮೆಕ್ಕೆಜೋಳ, ಕಡಲೆ ಸೇರಿದಂತೆ ಹತ್ತಾರು ಬೆಳೆಗಳು ನಾಶವಾಗಿದೆ. ಹಲವೆಡೆ ಮೇವಿಗೂ ಉಪಯೋಗಿಸಲಾರದ ಮಟ್ಟಿಗೆ ಫಸಲು ಕೈಕೊಟ್ಟಿದ್ದು ಸೂಕ್ತ ಪರಿಹಾರಕ್ಕೆ ರೈತರು ಒತ್ತಾಯಿಸಿದ್ದಾರೆ.

ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಷ್ಟೇ ಅಲ್ಲದೇ ಇನ್ನು ಹತ್ತಾರು ಕೆರೆಗಳು ಭರ್ತಿಯಾಗಿವೆ. ಗುಂಡ್ಲುಪೇಟೆ ತಾಲೂಕಿನ‌ ಹಿರಿಕೆರೆ, ಯಳಂದೂರು ತಾಲೂಕಿನ‌ ಹೊಂಗನೂರು ಕೆರೆ ಕೋಡಿ ಬಿದ್ದಿದೆ. ಚಾಮರಾಜನಗರ ತಾಲೂಕಿನ ಬೇಡರಪುರದ ವಡ್ಡರ ಕಟ್ಟೆ, ಮುದ್ದಯ್ಯನ ಕಟ್ಟೆ, ಅಯ್ಯನ ಕಟ್ಟೆ, ಶಿವಗಂಗೆ ಕೆರೆ, ಇರಸವಾಡಿ ಕೆರೆ ಒಂದೇ ದಿನಕ್ಕೆ ಭರ್ತಿಯಾಗಿ ಕೋಡಿ ಬಿದ್ದಿದೆ.
15 ವರ್ಷದ ಬಳಿಕ ಸಂಪೂರ್ಣ ಭರ್ತಿಯಾಗಿರುವ ಹನೂರು ತಾಲೂಕಿನ ಹುಬ್ಬೆಹುಣಸೆ ಜಲಾಶಯ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ಅಲ್ಲದೆ ಚಾಮರಾಜನಗರ ತಾಲೂಕಿನ ಅವಳಿ ಜಲಾಶಯಗಳಾದ ಸುವರ್ಣಾವತಿ ನಾಲ್ಕು ವರ್ಷದ ಬಳಿಕ ತುಂಬಿ ಹರಿದು ಜಲಾಶಯದಿಂದ ನದಿಗೆ ನೀರು ಹರಿ ಬಿಡಲಾಗಿದೆ.

ಕೊಳ್ಳೇಗಾದಲ್ಲಿ ತುಂಬಿ ಹರಿಯುತ್ತಿರುವ ಸರ್ಕಟನ್ ಕಾಲುವೆಯಿಂದ ಹೆಚ್ಚಿನ ಪ್ರಮಾಣದ ನೀರು ಹೊರಹರಿದ ಪರಿಣಾಮ ಇಂದಿರಾಗಾಂಧಿ ಬಡಾವಣೆ ಸಂಪೂರ್ಣ ಜಲಾವೃತಗೊಂಡಿದೆ. ಮನೆಗಳಿಗೆ ನೀರು ನುಗ್ಗಿ ಜನರು ಪರಿತಪಿಸುವಂತಾಗಿದೆ. ಅಲ್ಲದೆ ಕಾಲುವೆ ನೀರಿನಿಂದ ಜಲಾವೃತ್ತಗೊಂಡ ಬಡಾವಣೆಯಲ್ಲಿ ಹಾವು,ಚೇಳುಗಳಿಂದ ಜನರು ತಪ್ಪಿಸಿಕೊಳ್ಳಲು ಪರದಾಡುವಂತಾಗಿದೆ.

You might also like
Leave a comment