This is the title of the web page

ವಿದ್ಯುತ್ ದರ ಏರಿಕೆಗೆ ಕಾರಣಗಳೇನು?

ದರ ಏರಿಕೆ ನಿತ್ಯದ ಸಂಗತಿ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಜೊತೆಗೆ ಈಗ ವಿದ್ಯುತ್ ದರ ಮತ್ತೆ ಏರಿಕೆ ಕಂಡಿದೆ. ಇದರಿಂದ ಜನ ಬೆಚ್ಚಿಬಿದ್ದಿದ್ದಾರೆ. ಆದರೆ ಸರ್ಕಾರವನ್ನು ತನ್ನ ನಿಲುವಿನಿಂದ ಹಿಮ್ಮೆಟ್ಟಿಸುವ ಯಾವ ಲಕ್ಷಣವೂ ಕಾಣುತ್ತಿಲ್ಲ. ವಿರೋಧ ಪಕ್ಷಗಳು ಪ್ರತಿಭಟನೆ, ಪ್ರದರ್ಶನ ನಡೆಸಿವೆ. ಆದರೆ ಹೆಚ್ಚಿನ ಮಾಧ್ಯಮಗಳು ಇದನ್ನು ತೋರಿಸುತ್ತಿಲ್ಲ, ಬರೆಯುತ್ತಿಲ್ಲ. ಹಿಂದೆ ಪೆಟ್ರೋಲ್ ದರ ಸ್ವಲ್ಪ ಹೆಚ್ಚಾದರೂ ಬೊಬ್ಬಿಡುತ್ತಿದ್ದ ಮಾಧ್ಯಮಗಳು ಇಂದು ಕೆಲವೆಡೆ 120ರ ಸಮೀಪ ಏರಿದರೂ ತೆಪ್ಪಗಿವೆ.

ರಾಜ್ಯದಲ್ಲಿ ವಿದ್ಯುತ್ ದರ ಏರಿಕೆಗೆ ಕಾರಣಗಳೇ ಇಲ್ಲ. ಆದರೂ ಯುನಿಟ್‍ಗೆ 35 ಪೈಸೆಯಂತೆ ಏರಿಕೆ ಮಾಡಲಾಗಿದೆ. ನಮ್ಮಲ್ಲಿ ವಿದ್ಯುತ್ ಸೌಕರ್ಯ ಬಂದಾಗ ಅದಕ್ಕೆ ಸಂಬಂಧಿಸಿದ ಎರಡೇ ಇಲಾಖೆಗಳು ಇದ್ದವು. ಉತ್ಪಾದನೆ ಮತ್ತು ವಿತರಣೆ ಕ್ಷೇತ್ರಗಳು. ಮೊದಲಿಗೆ ಜಲವಿದ್ಯುತ್ ಸಾಕಷ್ಟು ಲಭ್ಯ ಇತ್ತು. ಜನಸಂಖ್ಯೆ ಬೆಳೆದಂತೆ ಉತ್ಪಾದನೆ ಸಾಲದಾಯಿತು. ಆಗ ಬಂದಿದ್ದು ಉಷ್ಣ ಮತ್ತು ಅಣು ವಿದ್ಯುತ್. ಎಲ್ಲ ಉತ್ಪಾದನೆಗಳನ್ನೂ ಸರ್ಕಾರ ತನ್ನ ಅಂಗ ಸಂಸ್ಥೆಗಳ ಮೂಲಕ ಮಾಡುತ್ತಿತ್ತು. ಇಲ್ಲಿನ ಬಹುಮುಖ್ಯ ಹೊರೆ ಎಂದರೆ ವಿದ್ಯುದಾಗಾರಗಳ ನಿರ್ಮಾಣಕ್ಕೆ ತಗಲುತ್ತಿದ್ದ ಭಾರಿ ವೆಚ್ಚ ಮತ್ತು ವಿತರಣೆಯಲ್ಲಿ ಆಗುತ್ತಿದ್ದ ಸೋರಿಕೆ.
ಇದೇ ಹೊತ್ತಿಗೆ ವಿದ್ಯುತ್ ಉತ್ಪಾದನೆಯ ಹಲವು ಪರ್ಯಾಯ ಮಾರ್ಗಗಳು ಬಂದವು. ಅವುಗಳಲ್ಲಿ ಬಹುಮುಖ್ಯ ಎನಿಸಿದ್ದು ಪವನ ವಿದ್ಯುತ್ ಮತ್ತು ಸೌರ ವಿದ್ಯುತ್. ಇದಕ್ಕೆ ಹೆಚ್ಚು ಹೆಚ್ಚು ಜಮೀನು ಅಗತ್ಯ ಇತ್ತು. ಆಗ ಗುಡ್ಡಗಾಡು ಮತ್ತು ಬಂಜರು ಜಮೀನು ಗುತ್ತಿಗೆ ನೀಡಿ, ಖಾಸಗಿಯವರಿಗೆ ವಿದ್ಯುತ್ ಉತ್ಪಾದಿಸಲು ಅನುಮತಿ ನೀಡುವುದು ಮತ್ತು ಅವರು ಉತ್ಪಾದಿಸುವ ವಿದ್ಯುತ್ ಖರೀದಿಸಿ ಬಳಸುವುದು ರೂಢಿಗೆ ಬಂತು. ಇದಾಗುವ ಹೊತ್ತಿಗೆ ಉತ್ಪಾದನೆ ಮತ್ತು ವಿತರಣೆ ಜೊತೆಗೆ ಖರೀದಿ ಕೂಡ ಸೇರಿಕೊಂಡಿತು. ಇಲ್ಲಿಯೇ ಜನರಿಗೆ ಕುತ್ತು ಬಂದಿದ್ದು. ಪವನ ವಿದ್ಯುತ್ ತಯಾರಿಕೆಗೆ ತೊಡಗಿದ ದೊಡ್ಡ ದೊಡ್ಡ ಖಾಸಗಿ ವ್ಯಕ್ತಿಗಳು ಭಾರಿ ದುಬಾರಿ ಬೆಲೆಯಲ್ಲಿ ಸರ್ಕಾರಕ್ಕೆ ವಿದ್ಯುತ್ ಪೂರೈಕೆ ಮಾಡುವ ಕರಾರು ಮಾಡಿಕೊಂಡರು. ಇವರಲ್ಲಿ ಹೆಚ್ಚಿನವರು ಬೇನಾಮಿ ರಾಜಕೀಯ ಮಂದಿಯೇ ಇದ್ದಾರೆ.

ಈ ಹಂತದಲ್ಲಿ ಮತ್ತೊಂದು ಚಾಲಾಕು ನಡೆಗೆ ಕೈ ಹಾಕಲಾಯಿತು. ಸೌರ ವಿದ್ಯುತ್ ತಯಾರಿಕೆಗೆ ಭಾರೀ ವಿಸ್ತಾರದ ಜಮೀನು ಬೇಕು. ನಮ್ಮಲ್ಲಿ ಮಳೆ ಆಧಾರಿತ ಕೃಷಿ ಹೆಚ್ಚು. ಅಲ್ಲಿ ಬರುವ ಆದಾಯ ಕೂಡ ಅಷ್ಟಕಷ್ಟ ಇದೆ. ಅಧಿಕಾರದಲ್ಲಿ ಇದ್ದ ಜನರು ತಮ್ಮವರಿಗೆ ಸಲಹೆ ನೀಡಿ ಸೌರ ವಿದ್ಯುತ್ ಘಟಕ ಸ್ಥಾಪನೆಗೆ ಪ್ರೇರಿಸಿದರು. ಜಮೀನು ಇದೆ ಎಂದು ತೋರಿಸಿದರೆ ಸಾಕು, ಅವರಿಗೆ ಬ್ಯಾಂಕುಗಳು ಅಗತ್ಯ ಸಾಲ ನೀಡುತ್ತಿದ್ದವು. ಯಂತ್ರ ತಯಾರಕರು ಬಂದು ಪ್ಯಾನೆಲ್ ನಿಲ್ಲಿಸುತ್ತಿದ್ದರು. ವಿದ್ಯುತ್ ಉತ್ಪಾದನೆ ಆರಂಭದ ದಿನದಿಂದ ಸರ್ಕಾರ ಇವರಿಂದ ವಿದ್ಯುತ್ ಖರೀದಿಸುತ್ತಿತ್ತು. ಕೃಷಿ ನಂಬಿ ನಷ್ಟ ಅನುಭವಿಸುತ್ತ ಬಂದಿದ್ದ ಸಾಕಷ್ಟು ಜಮೀನು ಉಳ್ಳವರು ಮತ್ತು ಅಧಿಕಾರಸ್ಥರಿಗೆ ಬೇಕಾದ ಜನರು ಇದರ ಲಾಭ ಪಡೆದರು. ಅವರು ಈ ಘಟಕಗಳ ಸ್ಥಾಪನೆಗೆ ಸಂಬಂಧಿಸಿದವರಿಗೆ ಲಂಚ ಕೊಡಬೇಕಿರಲಿಲ್ಲ, ಬದಲಿಗೆ ಚುನಾವಣೆ ಬಂದಾಗ ಆಯಾ ಕ್ಷೇತ್ರದ ಖರ್ಚು ವೆಚ್ಚ ನೋಡಿಕೊಳ್ಳಬೇಕಿತ್ತು.

ಜನರಿಂದ ವಿದ್ಯುತ್ ದರ ರೂಪದಲ್ಲಿ ಸುಲಿಗೆ ಮಾಡಿದ ಹಣವನ್ನೇ ಅವರಿಗೆ ಒಂದಿಷ್ಟು ಕೊಟ್ಟು, ಮರಳಿ ಗದ್ದುಗೆ ಏರುವ ಈ ತಂತ್ರ ಎಂಥ ದೊಡ್ಡ ಆವಿಷ್ಕಾರ ಅಲ್ಲವೇ? ಹೀಗೆ ಖರೀದಿ, ಉತ್ಪಾದನೆ ಎಲ್ಲ ಹಂತಗಳಲ್ಲಿಯೂ ಹಣ ಹೊಡೆಯುವ ವ್ಯವಸ್ಥಿತ ಕ್ರಮ ಒಂದನ್ನು ಜಾರಿಗೆ ತರಲಾಯಿತು. ಇನ್ನು ಹೊರ ರಾಜ್ಯಗಳ ವಿದ್ಯುತ್ ಉತ್ಪಾದಕರೊಂದಿಗೆ ಮಾಡಿಕೊಂಡ ಖರೀದಿ ಒಪ್ಪಂದದಲ್ಲಿ ಸಹ ಲೂಟಿ ಹೊಡೆಯಲಾಗುತ್ತಿದೆ. ಇದೆಲ್ಲದರ ಪರಿಣಾಮ ನಾವೀಗ ಹೆಚ್ಚಿನ ದರ ನೀಡಬೇಕಿದೆ.

ಬಹಳಷ್ಟು ದೇಶಗಳಲ್ಲಿ ವಿದ್ಯುತ್ ದೊಡ್ಡ ಸಮಸ್ಯೆ ಅಲ್ಲ. ಅಲ್ಲದೇ ಅಲ್ಲೆಲ್ಲ ಉತ್ತಮ ಸರಬರಾಜು ವ್ಯವಸ್ಥೆ ಇದೆ. ಕೆಲವು ದೇಶಗಳಲ್ಲಿ ಹೇಳದೇ ಕೇಳದೆ ವಿದ್ಯುತ್ ನಿಲುಗಡೆ ಆದರೆ ವಿದ್ಯುತ್ ಪೂರೈಸುವ ಕಂಪನಿ ಜನರಿಗೆ ಸೂಕ್ತ ಪರಿಹಾರ ನೀಡಬೇಕಾಗುತ್ತದೆ. ಆದರೆ ನಮ್ಮಲ್ಲಿ ವಿದ್ಯುತ್ ಸರಬರಾಜು ಆದರೆ ಅದೇ ಪುಣ್ಯ. ಹಳ್ಳಿಗಾಡುಗಳಲ್ಲಿ ದಿನಗಟ್ಟಲೇ ವಿದ್ಯುತ್ ಇರುವುದಿಲ್ಲ. ಇನ್ನು ಕೆಲವು ಕಡೆ ಓವರ್ ಲೋಡ್‍ನಿಂದ ಬಲ್ಬ, ಟಿವಿ, ಫ್ರಿಜ್ ಮತ್ತು ಯಂತ್ರಗಳು ಕೆಟ್ಟು ಹೋಗುತ್ತವೆ. ಬಹುಪಾಲು ಕಡೆಗಳಲ್ಲಿ ಲೋಡ್ ಇಲ್ಲದೇ ದೀಪಗಳು ಮಂಕು ಬಡಿದಂತೆ ಉರಿಯುತ್ತಿರುತ್ತವೆ. ನಮ್ಮಲ್ಲಿ ಒಂದೂ ಗುಂಡಿ ಇಲ್ಲದ ಒಂದೇ ಒಂದು ಕಿಲೋ ಮೀಟರ್ ರಸ್ತೆ ತೋರಿಸಿ ಕೊಡಿ ಎಂದು ನಾಗರಿಕರೊಬ್ಬರು ಸರ್ಕಾರಕ್ಕೆ ಸವಾಲು ಹಾಕಿದ್ದರು. ಇದೇ ರೀತಿ ಸವಾಲನ್ನು ವಿದ್ಯುತ್ ಪೂರೈಕೆ ವ್ಯವಸ್ಥೆಗೆ ಕೂಡ ಹಾಕಬಹುದು, ಆದರೆ ಸವಾಲು ಸ್ವೀಕರಿಸಲು ಯಾರೂ ಮುಂದೆ ಬರುವುದಿಲ್ಲ ಎಂಬುದೇ ದೊಡ್ಡ ಸಮಸ್ಯೆ.

ಜನರಲ್ಲಿ ಜಾಗೃತಿ ಮತ್ತು ಸಂಘಟಿತ ಹೋರಾಟ ಇಲ್ಲದಿರುವುದೇ ನಮ್ಮಲ್ಲಿನ ಬಹುಪಾಲು ಸಮಸ್ಯೆಗಳಿಗೆ ಕಾರಣ. ಮುಂದುವರಿದ ದೇಶಗಳಲ್ಲಿ ಗ್ರಾಹಕರ ನಿರ್ಣಾಯಕ ಸಂಘಟನೆ ಇರುತ್ತದೆ. ಅದರ ಒಪ್ಪಿಗೆ ಇಲ್ಲದೇ ಯಾವೊಂದು ಸರಕು ಅಥವಾ ಸೇವೆಯ ದರ ಏರಿಸುವಂತಿಲ್ಲ. ದರ ಏರಿಸಬೇಕಾದಾಗ ಸರ್ಕಾರಗಳು ಈ ಗ್ರಾಹಕ ಸಂಘಟನೆಗಳಿಗೆ ದರ ಏರಿಕೆಯ ಕಾರಣ ಮತ್ತು ಏರಿಕೆಯ ಮೊತ್ತ ತಿಳಿಸಬೇಕು. ಅದರ ಕುರಿತು ಅಧ್ಯಯನ ಮಾಡಿ, ವಿಮರ್ಶಿಸಿ ಗ್ರಾಹಕ ಸಂಘಟನೆ ಒಪ್ಪುತ್ತದೆ ಇಲ್ಲವೇ ನಿರಾಕರಿಸುತ್ತದೆ. ಸಂಘಟನೆಯ ತೀರ್ಪಿಗೆ ವಿರುದ್ಧವಾಗಿ ಸರ್ಕಾರ ದರ ಏರಿಸಿದರೆ, ಆ ಸರಕು ಅಥವಾ ಸೇವೆ ಬಳಸುವುದನ್ನು ನಿಲ್ಲಿಸುವಂತೆ ಸಂಘಟನೆ ಕರೆ ನೀಡುತ್ತದೆ ಮತ್ತು ಎಲ್ಲ ನಾಗರಿಕರು ಆ ಸೂಚನೆಗೆ ತಲೆ ಬಾಗುತ್ತಾರೆ. ಅದರಿಂದ ಉತ್ಪಾದಕ ಕಂಪನಿ ಮತ್ತು ಸರ್ಕಾರಗಳಿಗೆ ಅಪಾರ ನಷ್ಟ ಸಂಭವಿಸುತ್ತದೆ. ಆ ಕಾರಣಕ್ಕೆ ಅಲ್ಲಿ ಸರ್ಕಾರಗಳು ಹುಚ್ಚುಚ್ಚಾಗಿ ದರ ಏರಿಕೆ ಮಾಡುವಂತಿಲ್ಲ. ನಮ್ಮಲ್ಲಿ ಹೇಳುವವರು, ಕೇಳುವವರು ಇಲ್ಲ, ಹಾಗಾಗಿ ಸರ್ಕಾರಗಳು ಮನಬಂದಂತೆ ವರ್ತಿಸುತ್ತವೆ. ಜನರು ಅನಿವಾರ್ಯತೆ ಕಾರಣ ಹೊರೆ ಹೊತ್ತು ಮುಂದೆ ನಡೆಯುತ್ತಾರೆ. ಇದರಿಂದ ಲಾಭ ಆಗುವುದು ಆಡಳಿತ ನಡೆಸುವ ಮಂದಿಗೆ ಮತ್ತು ಅವರ ಆಪ್ತೇಷ್ಟರಿಗೆ ಮಾತ್ರ. ಎಲ್ಲಿಯ ವರೆಗೆ ನಮ್ಮಲ್ಲಿ ಸೇವೆ ಮತ್ತು ಸರಕುಗಳ ಗ್ರಾಹಕ ಸಂಘಟನೆ ಬಲ ಆಗುವುದಿಲ್ಲವೋ, ಅಲ್ಲಿಯ ವರೆಗೂ ಈ ಗೋಳು ಇದ್ದಿದ್ದೇ.

-ಎ.ಬಿ.ಧಾರವಾಡಕರ

You might also like
Leave a comment