This is the title of the web page

ಭರವಸೆಗಳು

ಸಾಮಾನ್ಯವಾಗಿ ಸರ್ಕಾರದ ನಿಲುವುಗಳಲ್ಲಿನ ಲೋಪ ಕುರಿತು ಮಾತಾಡಿದಾಗೆಲ್ಲ ಇದು ಪೂರ್ವಾಗ್ರಹ ನಿಲುವು ಎಂದು ಕೆಲವರಿಗಾದರೂ ಅನ್ನಿಸುತ್ತದೆ. ಹೀಗಾಗಿ ಬಜೆಟ್ ಕುರಿತು ಮಾತಾಡುವ ಮುನ್ನ ಎಚ್ಚರದಿಂದ ಗಮನಿಸಿಯೇ ಕೆಲವಾದರೂ ಅಂಶಗಳನ್ನು ಇಲ್ಲಿ ದಾಖಲಿಸಬೇಕು ಎನಿಸಿದ್ದು ನಿಜ. ಭಾರತ ವೈವಿಧ್ಯಮಯ ದೇಶ. ಇಲ್ಲಿ ಶ್ರೀಮಂತಿಕೆಯೂ ಇದೆ, ಕಡು ಬಡತನವೂ ಇದೆ. ರಾತ್ರಿ ಹಸಿವಿನಿಂದ ಮಲಗುವ ಜನ ಇದ್ದಾರೆ, ಉಂಡು ಹೆಚ್ಚಾಗಿ ಆಹಾರ ಚೆಲ್ಲುವ ಮಂದಿಯೂ ಇದ್ದಾರೆ. ಇಲ್ಲಿ ಹೆಚ್ಚು ಸಂಖ್ಯೆಯಲ್ಲಿ ಇರುವ ಬಡವರಿಗೆ ಸಣ್ಣದೊಂದು ಅನುಕೂಲ ಆದರೂ ಅದು ಮಹತ್ವದ್ದು ಎನಿಸುತ್ತದೆ. ಆದ್ದರಿಂದ ಕ್ರಿಪ್ಟೋ ಕರೆನ್ಸಿ ಅಥವಾ ಡಿಜಿಟಲ್ ಕರೆನ್ಸಿಗಿಂತ ಹೆಚ್ಚು ಇಂಥವರ ಪಾಡು ಏನಾಗಿದೆ ಎಂದು ನೋಡುವುದು ಸರಿ ಕ್ರಮ.

ಈ ದೇಶದ ಸುಮಾರು ನೂರಿಪ್ಪತ್ತು ಜಿಲ್ಲೆಗಳಲ್ಲಿ ಜನರಿಗೆ ಜೀವನಾಧಾರ ಎಂದರೆ ಸರ್ಕಾರ ಉಚಿತವಾಗಿ ಒದಗಿಸುವ ಐದು ಕೆಜಿ ಧಾನ್ಯ ಎಂದರೆ ಯಾರಿಗಾದರೂ ಆಶ್ಚರ್ಯ ಆಗಬಹುದು. ಇದರರ್ಥ ಇಲ್ಲಿನ ಬಹುಪಾಲು ಜನರಿಗೆ ಜಮೀನು ಇಲ್ಲ, ಕೆಲಸ ಇಲ್ಲ. ಅವರ ಸಂಖ್ಯೆ ಕೂಡ ಅಪಾರ ಎನ್ನುವುದು ಸರ್ಕಾರ ಒದಗಿಸಿದ ಅಂಕಿ ಅಂಶಗಳಿಂದ ತಿಳಿಯುತ್ತದೆ. ಆದರೆ ಇಲ್ಲಿ ಜನರಿಗೆ ಕನಿಷ್ಠ ಆದಾಯದ ನೌಕರಿ ಕಲ್ಪಿಸುವ ಬಗ್ಗೆ ಸರ್ಕಾರ ಚಿಂತಿಸಬೇಕಿತ್ತು ಅಲ್ಲವೇ? ಹಾಗೆ ಆಗಿಲ್ಲ ಎನ್ನುವುದೇ ನಮ್ಮ ಆತಂಕಕ್ಕೆ ಕಾರಣ. ಕ್ರಿಪ್ಟೋ ಕರೆನ್ಸಿ ಕುರಿತು ನಾನಾ ರೀತಿಯ ಹೇಳಿಕೆಗಳು ಈ ಮುಂಚೆ ಸರ್ಕಾರ ಹೊರಡಿಸಿತ್ತು. ಆ ಹೇಳಿಕೆಗಳ ಪ್ರಕಾರ ಕ್ರಿಪ್ಟೋ ಕರೆನ್ಸಿ ಕಾನೂನು ಬಾಹಿರ. ಆದರೆ ಬಹುಪಾಲು ರಾಜಕೀಯ ಮಂದಿ ಇದೇ ಕರೆನ್ಸಿಯಲ್ಲಿ ಹಣ ಹೂಡಿ, ತಮ್ಮ ಅಕ್ರಮ ಸಂಪತ್ತು ಜೋಪಾನ ಮಾಡಿಕೊಂಡಿರುವ ಕಾರಣ ಅದಕ್ಕೆ ಒಂದಿಷ್ಟು ತೆರಿಗೆ ವಿಧಿಸಿ, ಅವರೆಲ್ಲರನ್ನು ಸುರಕ್ಷಿತಗೊಳಿಸಿದ್ದನ್ನು ನೋಡಿದರೆ ಸರ್ಕಾರದ ನಿಲುವು ಏನು ಎಂಬ ಪ್ರಶ್ನೆ ಹುಟ್ಟುತ್ತದೆ. 2014ರ ಚುನಾವಣೆಗೆ ಮುನ್ನ ವಿದೇಶದಲ್ಲಿ ಭಾರತೀಯರು ಇರಿಸಿರುವ ಕಪ್ಪು ಹಣ ಹಿಂದೆ ತರುವ ವೀರಾವೇಶದ ಮಾತು ಆಡಿದ ಇದೇ ಜನ, ಈಗ ಮನೆಯೊಳಗೇ ಕಪ್ಪು ಹಣ ಜೋಪಾನವಾಗಿಡಲು ಅವಕಾಶ ಕಲ್ಪಿಸಿ ಮೀಸೆ ತಿರುವುತ್ತಿದ್ದಾರೆ, ಎಂಥ ವಿಪರ್ಯಾಸ!

ಬಹುಪಾಲು ಸರ್ಕಾರದ ಯೋಜನೆಗಳು ಕಾಗದದ ಮೇಲೆ ಮಾತ್ರ ಇರುತ್ತವೆ. ಅವು ಎಂದೂ ಕಾರ್ಯರೂಪಕ್ಕೆ ಬರುವುದೇ ಇಲ್ಲ. ಇದು ವರೆಗಿನ ಸರ್ಕಾರಗಳು ಘೋಷಿಸಿದ್ದ ಎಲ್ಲ ಯೋಜನೆಗಳು ಕಾರ್ಯಗತ ಆಗಿದ್ದರೆ ನಮ್ಮ ದೇಶ ಸ್ವರ್ಗ ಆಗಿರುತ್ತಿತ್ತು. ಯೋಜನೆ ಪೂರ್ಣವಾಗದೇ ಇರುವುದಕ್ಕೆ ಬಹುಮುಖ್ಯ ಕಾರಣ ನಮ್ಮಲ್ಲಿ ಇರುವ ಭ್ರಷ್ಠಾಚಾರ ಎಂಬುದನ್ನು ನಿರ್ಭಿಡೆಯಿಂದ ಒಪ್ಪಿಕೊಳ್ಳೋಣ. ಆದರೆ ಒಂದು ಯೋಜನೆ ಅಸ್ತಿತ್ವ ಪಡೆಯಬೇಕಾದರೆ ಎಷ್ಟು ಹಣ ಬೇಕು ಮತ್ತು ಎಷ್ಟು ಕಾಲ ಬೇಕು ಎಂಬ ಅಂದಾಜಿನಲ್ಲಿಯೇ ಸರ್ಕಾರ ಎಡವಿರುತ್ತದೆ. 25 ಸಾವಿರ ಕಿಲೋ ಮೀಟರ್ ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, 400 ವಂದೇ ಭಾರತ್ ರೈಲುಗಳಿಗೆ ಚಾಲನೆ ಮುಂತಾದವುಗಳ ಬಗ್ಗೆ ಬಜೆಟ್‍ನಲ್ಲಿ ಹೇಳಲಾಗಿದೆ. ಆದರೆ ಅದಕ್ಕೆ ಒದಗಿಸಿದ ಹಣದ ಸುದ್ದಿಯೇ ಇಲ್ಲ. ಇದನ್ನು ಗಮನಿಸಿದಾಗ, ಆಕಾಶದ ಚಂದ್ರನನ್ನು ತಂದು ಕೈಗಿಡುವುದಾಗಿ ಹೇಳುವ ಪ್ರೇಮಿಯ ಹುಸಿ ಭರವಸೆಯಂತೆ ಇದು ಕಾಣುತ್ತದೆ.

ಇನ್ನು ಸಾಮಾನ್ಯ ಜನರಿಗೆ ವಸತಿಯದ್ದೇ ಬಹುದೊಡ್ಡ ಸಮಸ್ಯೆ. ಅದು ನೀಗಿಸಲು ದೇಶದಲ್ಲಿ 80 ಲಕ್ಷ ಮನೆ ನಿರ್ಮಾಣ ಯೋಜನೆ ಹಮ್ಮಿಕೊಳ್ಳಲಾಗಿದೆ. ಅದಕ್ಕೆ ಮೀಸಲಿಟ್ಟ ಹಣ 43500 ಕೋಟಿ ರೂಪಾಯಿ. ಈ ಹಣದಿಂದ ಎಂಭತ್ತು ಲಕ್ಷ ಮನೆ ನಿರ್ಮಿಸುವುದು ಕನಸಿನ ಮಾತೇ ಸರಿ. ಅದಕ್ಕೆ ಸುಮಾರು ಎರಡೂವರೆ ಲಕ್ಷ ಕೋಟಿ ಹಣ ಬೇಕು. ಆದರೆ ಬಜೆಟ್ ಮಂಡನೆ ನಂತರ ಶ್ರೀಮಂತರಿಗೆ ಆ ಬಗ್ಗೆ ಗಮನ ಇರದು, ಬಡವರಿಗೆ ಅದು ಅರ್ಥ ಆಗದು. ಏನೋ ತಲೆ ಮೇಲೊಂದು ಸೂರು ಕಲ್ಪಿಸುತ್ತಾರಲ್ಲ ಎಂದು ಭರವಸೆ ತಾಳುತ್ತಾರೆ. ಆದರೆ ಅವು ಎಂದೆಂದಿಗೂ ಪೂರೈಸದ ಯೋಜನೆಗಳಾಗಿ ಕೇವಲ ಕಾಗದದ ಮೇಲೆ ಉಳಿಯುವ ಕನಸುಗಳಾಗಿ ಬಿಡುತ್ತವೆ.

ಇಂಥದೊಂದು ಪ್ರಮಾದಕ್ಕೆ ಕಾರಣ ಏನು? ಅಂದಾಜು ಮಾಡಿದವರಿಗೆ ಕಲ್ಪನೆ ಇರಲಿಲ್ಲವೇ? ಒದಗಿಸಿದ ಹಣಕ್ಕೆ ಸರಿಯಾಗಿ ಮನೆಗಳ ಸಂಖ್ಯೆಯನ್ನಾದರೂ ನಿಗದಿ ಮಾಡಬಹುದಿತ್ತು. ಇಲ್ಲವೇ 80 ಲಕ್ಷ ಮನೆಗಳ ನಿರ್ಮಾಣಕ್ಕೆ ಸೂಕ್ತ ಮೊತ್ತ ನಿಗದಿ ಮಾಡಬಹುದಿತ್ತು. ಯಾವುದೂ ಆಗಿಲ್ಲ ಎಂಬುದೇ ಬೇಸರದ ಸಂಗತಿ. ಆದರೂ ತಾವೊಂದು ಮಹತ್ವಪೂರ್ಣ ಬಜೆಟ್ ನೀಡಿರುವುದಾಗಿ ಸರ್ಕಾರದ ಮಂದಿ ಹೇಳುತ್ತಿದ್ದಾರೆ. ಇಂಥ ಹೇಳಿಕೆಗಳನ್ನು ಕಟುವಾಗಿ ಟೀಕಿಸುವುದು ಕೂಡ ಇಂದಿನ ದಿನಮಾನದಲ್ಲಿ ಅರ್ಥಹೀನ ಆಗಿದೆ. ಬಡವರಿಂದ ತುಂಬಿದ ನಮ್ಮ ದೇಶದಲ್ಲಿ ಕೇವಲ ಕಾರ್ಪೋರೇಟ್‍ಗಳು, ಶ್ರೀಮಂತರ ಸುಖ ಮಾತ್ರ ಮುಖ್ಯ ಎನಿಸಿರುವುದೇ ವಿಷಾದಕರ.

ಇಂಥ ಸೂಕ್ಷ್ಮ ವಿಚಾರ ಹೇಳಿದರೆ ಕೂಡ ಕೆಲವರಿಗೆ ಸಹನೆ ಆಗುವುದಿಲ್ಲ. ಏಕೆಂದರೆ ಅವರಿಗೆ ತಮ್ಮವರು ಏನು ಮಾಡಿದರೂ ಚೆನ್ನ ಮತ್ತು ಉಳಿದವರು ಯಾರೂ ತಕರಾರು ಮಾಡಬಾರದು. ಎಲ್ಲರಿಗಾಗಿ ಎಲ್ಲರೂ ಶ್ರಮಿಸಬೇಕಾದ ತುರ್ತು ಅಗತ್ಯ ಇರುವ ಕಾಲದಲ್ಲಿ ಇಂದಿನ ಮಹತ್ವದ ಸಮಸ್ಯೆಗಳ ನಿವಾರಣೆಗೆ ಕ್ರಮ ಜರುಗಿಸದೇ ಮುಂದಿನ 25 ವರ್ಷಗಳಲ್ಲಿ ಭೂಮಿಗೆ ಸ್ವರ್ಗವನ್ನೇ ತಂದು ಇಳಿಸುವುದಾಗಿ ಹೇಳುವ ಮಾತು ಅಪ್ಪಟ ಸುಳ್ಳು ಅಲ್ಲದೇ ಮತ್ತೇನೂ ಅಲ್ಲ.

29 ಪುಟಗಳ ಬಜೆಟ್‍ನಲ್ಲಿ ಮೊದಲ 20 ಪುಟಗಳ ತುಂಬ ಈ 25 ವರ್ಷಗಳಲ್ಲಿ ಮುಂದೆ ತಾವು ಮಾಡಬಹುದಾದ ಸಾಧನೆ ಬಗ್ಗೆಯೇ ಗೀಚಲಾಗಿದೆ. ಹಳ್ಳಿಗಳಲ್ಲಿ ‘ತೋಟ ಶೃಂಗಾರ ಒಳಗೆ ಗೋಣಿ ಸೊಪ್ಪು’ ಅನ್ನುತ್ತಾರೆ. ಮೇಲೆ ಕಾಣುವ ಚಂದಕ್ಕಿಂತ ಒಳಗಿನ ಹೂರಣ ಮುಖ್ಯ. ಅಲ್ಲದೇ ಇಲ್ಲಿಷ್ಟು ಕಿತ್ತು ಅಲ್ಲಿ ಹಾಕಿ, ಅಲ್ಲಿನದು ಕಿತ್ತು ಒಂದಿಷ್ಟು ಇಲ್ಲಿ ಹಾಕುವುದೇ ಬಜೆಟ್ ಎಂದು ಯಾರಾದರೂ ಭಾವಿಸುವುದಾದರೆ ಇದನ್ನು ಬಜೆಟ್ ಎಂದು ಕರೆಯಲು ಅಡ್ಡಿ ಇಲ್ಲ. ಬಹುಷಃ ನಮ್ಮ ಹಣಕಾಸು ಸಚಿವರು ‘ಕೆತ್ತು ಅಂದರೆ ಕೆತ್ತು, ಮೆತ್ತು ಅಂದರೆ ಮೆತ್ತು’ ಎನ್ನುವ ನಮ್ಮ ಉತ್ತರ ಕರ್ನಾಟಕದ ಕಡೆ ಆಡುವ ಮಾತಿಗೆ ಬದ್ಧರಾಗಿ ನಡೆದುಕೊಂಡಿದ್ದಾರೆ ಎನ್ನಿಸುತ್ತದೆ.

-ಎ.ಬಿ.ಧಾರವಾಡಕರ

You might also like
Leave a comment