This is the title of the web page

ಹೆಸರಾಂತ ನಟ ರಾಜೇಶ ನಿಧನ

ಬೆಂಗಳೂರು, ಫೆ 19- ಕನ್ನಡ ಚಿತ್ರರಂಗದ ಹೆಸರಾಂತ ನಟ ರಾಜೇಶ ಅವರು ಶನಿವಾರ​ ಮುಂಜಾನೆ ನಿಧನರಾದರು.
ಅವರಿಗೆ 82 ವರ್ಷ ವಯಸ್ಸಾಗಿತ್ತು. ಉಸಿರಾಟದ ಸಮಸ್ಯೆ ಮತ್ತು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಫೆ.9ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿದ್ದ ರಾಜೇಶ​​ ಅವರಿಗೆ ವೆಂಟಿಲೇಟರ್​ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತು.

ರಾಜೇಶ ಅಗಲಿಕೆಗೆ ಕನ್ನಡ ಚಿತ್ರರಂಗದ ಅನೇಕ ಕಲಾವಿದರು, ಅಭಿಮಾನಿಗಳು ಮತ್ತು ಆಪ್ತರು ಕಂಬನಿ ಮಿಡಿಯುತ್ತಿದ್ದಾರೆ. ಶನಿವಾರ ಸಂಜೆ 6 ಗಂಟೆಯವರೆಗೆ ಬೆಂಗಳೂರಿನ ವಿದ್ಯಾರಣ್ಯಪುರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

1932ರ ಏ.15ರಂದು ಬೆಂಗಳೂರಿನಲ್ಲಿ ಜನಿಸಿದ್ದ ರಾಜೇಶ , ಅಭಿನಯದ ಬಗ್ಗೆ ಅವರು ಚಿಕ್ಕ ವಯಸ್ಸಿನಲ್ಲೇ ಆಸಕ್ತಿ ಹೊಂದಿದ್ದರು. ಶಾಲಾ- ಕಾಲೇಜು ದಿನಗಳಲ್ಲಿ ಅವರು ನಾಟಕಗಳಲ್ಲಿ ಅಭಿನಯಿಸುತ್ತಿದ್ದರು.

ರಾಜೇಶ ಅವರ ಮೂಲ ಹೆಸರು ಮುನಿ ಚೌಡಪ್ಪ. ಬಳಿಕ ಅವರು ನಾಟಕಗಳಲ್ಲಿ ಅಭಿನಯಿಸುವಾಗ ವಿದ್ಯಾಸಾಗರ​ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದರು. 1960ರ ದಶಕದಲ್ಲಿ ಅವರು ಚಿತ್ರರಂಗಕ್ಕೆ ಕಾಲಿಟ್ಟು, ನಂತರ ನೂರಾರು ಸಿನಿಮಾಗಳಲ್ಲಿ ನಟಿಸಿ ತಲಾತಪಸ್ವಿ ಬಿರುದು ಪಡೆದರು.

ರಾಜೇಶ​ ಅವರ ಪುತ್ರಿ ಆಶಾರಾಣಿ ಕೂಡ ಚಿತ್ರರಂಗದಲ್ಲಿ ಯಶಸ್ಸು ಕಂಡವರು. ಆಶಾರಾಣಿ ಅವರನ್ನು ನಟ ಅರ್ಜುನ್​ ಸರ್ಜಾ 1988ರಲ್ಲಿ ಮದುವೆ ಆಗಿದ್ದರು.

ಸೊಸೆ ತಂದ ಸೌಭಾಗ್ಯ, ದೇವರ ದುಡ್ಡು, ಕಲಿಯುಗ, ದೇವರ ಗುಡಿ, ವೀರ ಸಂಕಲ್ಪ, ಗಂಗೆ ಗೌರಿ ಸೇರಿದಂತೆ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ರಾಜೇಶ​ ನಟಿಸಿದ್ದರು.
ಫೆ.25ರಂದು ಬಿಡುಗಡೆ ಆಗಲಿರುವ ‘ಓಲ್ಡ್​ ಮಾಂಕ್​’ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿರುವ ರಾಜೇಶ, ಆ ಚಿತ್ರದ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇರುವಾಗ ನಿಧನರಾಗಿದ್ದಾರೆ.

You might also like
Leave a comment