This is the title of the web page

ರೆಪೋ ದರ ಮತ್ತೆ ಹೆಚ್ಚಳ; ಹೆಚ್ಚಾಗಲಿದೆ ಬ್ಯಾಂಕ್ ಸಾಲಗಳ ಇಎಂಐ

ಮುಂಬೈ, ಜೂ.8- ಭಾರತೀಯ ರಿಸರ್ವ ಬ್ಯಾಂಕು ಇಂದು ರೆಪೋ ದರವನ್ನು 50 ಮೂಲ ಅಂಕಗಳಷ್ಟು ಹೆಚ್ಚಿಸಿದೆ. ಇದರಿಂದ ರೆಪೋ ದರ ಶೇ.4.40ರಿಂದ ಶೇ.4.90ಕ್ಕೆ ಏರಿಕೆಯಾಗಿದ್ದು ಗೃಹ, ವಾಹನ ಮತ್ತು ಇತರ ಎಲ್ಲ ಸಾಲಗಳ ಮೇಲಿನ ಇಎಂಐ ಕೂಡ ಹೆಚ್ಚಳವಾಗಲಿದೆ.

ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಬುಧವಾರ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ರೆಪೋ ದರವನ್ನು 50 ಮೂಲ ಅಂಕಗಳಷ್ಟು ಏರಿಕೆ ಮಾಡಲು ಹಣಕಾಸು ನೀತಿ ಸಮಿತಿ ಸರ್ವಾನುಮತದ ನಿರ್ಣಯ ಕೈಗೊಂಡಿದ್ದು. ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಹಾಗೂ ಪೂರೈಕೆ ವ್ಯವಸ್ಥೆಯಲ್ಲಿನ ವ್ಯತ್ಯಯದ ಹಿನ್ನೆಲೆಯಲ್ಲಿ ಈ ನಿರ್ಣಯ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.

ಕಳೆದ ಮೇ 4ರಂದು  ಆರ್ ಬಿಐ ರೆಪೋ ದರವನ್ನು 40 ಮೂಲ ಅಂಕಗಳಷ್ಟು( ಶೇ.0.40ರಷ್ಟು) ಹೆಚ್ಚಳ ಮಾಡುವ ಮೂಲಕ ರಿಸರ್ವ ಬ್ಯಾಂಕ್ ಜನಸಾಮಾನ್ಯರಿಗೆ ಶಾಕ್‌ ನೀಡಿತ್ತು. ರೆಪೋ ದರ ಹೆಚ್ಚಳದ ಬೆನ್ನಲ್ಲೇ ಸಾರ್ವಜನಿಕ ಹಾಗೂ ಖಾಸಗಿ ವಲಯದ ಬಹುತೇಕ ಬ್ಯಾಂಕುಗಳು ಈಗಾಗಲೇ ಸಾಲದ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿವೆ. ಈಗ ಮತ್ತೊಮ್ಮೆ ಸಾಲದ ಮೇಲಿನ ಬಡ್ಡಿದರ ಹೆಚ್ಚಳವಾಗಲಿದೆ.

ಏನಿದು ರೆಪೋ ದರ? 
ವಾಣಿಜ್ಯ ಬ್ಯಾಂಕುಗಳಿಗೆ  ಹಣದ ಕೊರತೆ ಎದುರಾದಾಗ ಅವು ಆರ್ ಬಿಐಯಿಂದ ಪಡೆಯುವ ಸಾಲದ ಮೇಲೆ ವಿಧಿಸುವ ಬಡ್ಡಿ ದರವೇ ರೆಪೋ ದರ. ಆರ್ ಬಿಐ ನಿರ್ದಿಷ್ಟ ದರದಲ್ಲಿ ಈ ಬ್ಯಾಂಕುಗಳಿಗೆ ಸಾಲ ನೀಡುತ್ತದೆ. ರೆಪೋ ದರ ದೇಶದಲ್ಲಿನ ಹಣದುಬ್ಬರ ನಿಯಂತ್ರಣಕ್ಕೆ ಆರ್ ಬಿಐ ಬಳಸುವ ಅತೀಮುಖ್ಯ ಸಾಧನವಾಗಿದೆ. ಉದಾಹರಣೆಗೆ ಆರ್ ಬಿಐ ರೆಪೋ ದರ ಇಳಿಕೆ ಮಾಡಿದರೆ ಬ್ಯಾಂಕುಗಳು ಕಡಿಮೆ ಬಡ್ಡಿ ದರದಲ್ಲಿ ಸಾಲಗಳನ್ನು ನೀಡುತ್ತವೆ. ಇದರಿಂದ ಆರ್ಥಿಕತೆಯಲ್ಲಿ ಹಣದ ಹರಿವು ಹೆಚ್ಚುತ್ತದೆ. ಅದೇ ರೆಪೋ ದರದಲ್ಲಿ ಏರಿಕೆ ಮಾಡಿದರೆ ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿದರ ಹೆಚ್ಚಿಸುತ್ತವೆ. ಹೀಗಾಗಿ ಹಣದುಬ್ಬರ ಏರಿಕೆಯಾಗಿರುವ ಸಮಯದಲ್ಲಿ ಆರ್ ಬಿಐ ರೆಪೋ ದರವನ್ನು ಹೆಚ್ಚಿಸುತ್ತದೆ.

ಆ ಕಾರಣ ಸಹಜವಾಗಿ ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿದರ ಹೆಚ್ಚಿಸುತ್ತವೆ. ಇದರಿಂದ ಆರ್ಥಿಕತೆಗೆ ಹಣದ ಹರಿವು ತಗ್ಗುತ್ತದೆ. ಆ ಮೂಲಕ ಹಣದುಬ್ಬರ ನಿಯಂತ್ರಣಕ್ಕೆ ಬರುತ್ತದೆ.

You might also like
Leave a comment