This is the title of the web page

ದೇಶವನ್ನು ಮುಜುಗರದ ಸ್ಥಿತಿಗೆ ತಂದ ಆರ್ ಎಸ್ ಎಸ್ – ಪಿಣರಾಯಿ ವಿಜಯನ್

ತಿರುವನಂತಪುರಂ, ಜೂ. 7- ಮೊಹಮ್ಮದ ಪೈಗಂಬರ ಅವರ‌ ವಿರುದ್ಧ ಬಿಜೆಪಿಯ ರಾಷ್ಟ್ರೀಯ ವಕ್ತಾರೆ ನುಪೂರ‌ ಶರ್ಮಾ ಹಾಗೂ ನವೀನ‌ ಕುಮಾರ್‌ ಜಿಂದಾಲ್‌ ನೀಡಿರುವ ವಿವಾದಾತ್ಮಕ ಹೇಳಿಕೆಗಳ ಕುರಿತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಂಗಳವಾರ ತೀವ್ರ ಪ್ರತಿಕ್ರಿಯೆ ನೀಡಿದ್ದು ಸಂಘ ಪರಿವಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮತಾಂಧ ಶಕ್ತಿಗಳ ವಿರುದ್ಧ ಸರ್ವಾನುಮತದಿಂದ ಧ್ವನಿ ಎತ್ತುವಂತೆ ಕೇರಳ ಮುಖ್ಯಮಂತ್ರಿ ಜನರನ್ನು ಒತ್ತಾಯಿಸಿದ್ದಾರೆ.

ಪ್ರವಾದಿ ಮೊಹಮ್ಮದ ಪೈಗಂಬರ‌ ಅವರ ವಿರುದ್ಧ ಬಿಜೆಪಿ ಇಬ್ಬರು ಈ ವಕ್ತಾರರು ಮಾಡಿದ ಅವಹೇಳನಕಾರಿ ಹೇಳಿಕೆಗಳ ಮೂಲಕ ಸಂಘ ಪರಿವಾರವು ನಮ್ಮ ಪೂಜ್ಯ ಜಾತ್ಯತೀತ ಪ್ರಜಾಪ್ರಭುತ್ವವನ್ನು ಪ್ರಪಂಚದ ಮುಂದೆ ಮತ್ತೊಮ್ಮೆ ಅವಮಾನಿಸಿದೆ. ಮತಾಂಧ ಶಕ್ತಿಗಳ ವಿರುದ್ಧ ಒಮ್ಮತದ ಧ್ವನಿ ಎತ್ತಲು ಇದು ಸಮಯ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಟ್ವೀಟ್ ಮಾಡಿದ್ದಾರೆ.

“ಮೊಹಮ್ಮದ ಪೈಗಂಬರ ಅವರ‌ ವಿರುದ್ಧದ ವಿವಾದಾತ್ಮಕ ಹೇಳಿಕೆಗಳ ವಿರುದ್ಧ ಹಲವಾರು ಕೊಲ್ಲಿ ರಾಷ್ಟ್ರಗಳು ಪ್ರತಿಭಟನೆಯ ಭಾಗವಾಗಿ ಸೇರಿಕೊಂಡಿದ್ದರಿಂದ ಆರ್‌ಎಸ್‌ಎಸ್ ದೇಶವನ್ನು ಮುಜುಗರದ ಸ್ಥಿತಿಗೆ ತಂದಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ದ್ವೇಷ ಪ್ರಚಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ, ಪ್ರವಾದಿಗಳ ವಿರುದ್ಧದ ದ್ವೇಷದ ಹೇಳಿಕೆಗಳು ಸಂಘ ಪರಿವಾರದ ಅಜೆಂಡಾದ ಒಂದು ಭಾಗವಾಗಿದೆ. ಈ ಬಗೆಯ ಟೀಕೆಗಳು ಸಾಮಾಜಿಕ ಭದ್ರತೆ ಮಾತ್ರವಲ್ಲದೇ ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತವೆ” ಎಂದು ಹೇಳಿದರು.

ಪ್ರವಾದಿಗಳ ಕುರಿತ ಹೇಳಿಕೆಗೆ ಭಾರೀ ಪ್ರತಿಭಟನೆ ಮತ್ತು ಖಂಡನೆಗೆ ಕಾರಣವಾದ ವಿವಾದಾತ್ಮಕ ಹೇಳಿಕೆಗಳ ನಂತರ ಬಿಜೆಪಿ ಭಾನುವಾರ ತನ್ನ ವಕ್ತಾರರಾದ ನುಪೂರ ಶರ್ಮಾ ಅವರನ್ನು ಅಮಾನತುಗೊಳಿಸಿತ್ತು. ದೆಹಲಿಯ ಮಾಧ್ಯಮ ಮುಖ್ಯಸ್ಥ ನವೀನ ಕುಮಾರ ಜಿಂದಾಲ್ ಅವರನ್ನು ಉಚ್ಚಾಟಿಸಿದೆ. ವಾರಣಾಸಿಯ ಜ್ಞಾನವಾಪಿ ಮಸೀದಿ ವಿವಾದದ ಬಗ್ಗೆ ಮಾತನಾಡುವಾಗ ಶರ್ಮಾ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು.

ಈ ಆಕ್ಷೇಪಾರ್ಹ ಹೇಳಿಕೆಗಳು ಕುವೈತ್, ಇರಾನ್, ಕತಾರ್, ಸೌದಿ ಅರೇಬಿಯಾ, ಓಮನ್, ಲಿಬಿಯಾ, ಮಾಲ್ಡೀವ್ಸ್, ಇಂಡೋನೇಷ್ಯಾ, ಯುಎಇ, ಬಹ್ರೇನ್, ಜೋರ್ಡಾನ್, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಸೇರಿದಂತೆ ಕೊಲ್ಲಿ ರಾಷ್ಟ್ರಗಳಿಂದ ತೀವ್ರ ಟೀಕೆಗಳಿಗೆ ಕಾರಣವಾಗಿದ್ದವು. ಕೆಲವು ಭಾಗಗಳಲ್ಲಿ ಟ್ವಿಟರ್ ಬಳಕೆದಾರರು ಈ ಘಟನೆಯನ್ನು ಖಂಡಿಸಿದ್ದಾರೆ. ಅಲ್ಲದೇ ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಒತ್ತಾಯಿಸಿದ್ದರು.

ಈ ನಡುವೆ ನುಪೂರ‌ ಶರ್ಮಾ ಅವರನ್ನು ಬಿಜೆಪಿಯಿಂದ ಅಮಾನತುಗೊಳಿಸಿದ ಸ್ವಲ್ಪ ಸಮಯದ ನಂತರ, ಅವರು ಕ್ಷಮೆಯಾಚಿಸಿದರು, ಟ್ವೀಟ್‌ನಲ್ಲಿ “ಯಾರನ್ನೂ ನೋಯಿಸುವುದು ನನ್ನ ಉದ್ದೇಶವಲ್ಲ” ಎಂದು ಬರೆದಿದ್ದಾರೆ.

You might also like
Leave a comment