This is the title of the web page

ಯುರೋಪ್ ನ ಅತಿದೊಡ್ಡ ಪರಮಾಣು ಸ್ಥಾವರದ ಮೇಲೆ ರಶಿಯಾ ದಾಳಿ

ಕೀವ್, 4- ಉಕ್ರೇನ್‌ನಲ್ಲಿರುವ ಯುರೋಪಿನ ಅತಿದೊಡ್ಡ ಪರಮಾಣು ಸ್ಥಾವರದ ಮೇಲೆ ರಶಿಯನ್ ಪಡೆಗಳು ಶುಕ್ರವಾರ ಶೆಲ್ ದಾಳಿ ನಡೆಸುತ್ತಿದ್ದು ಸ್ಥಾವರಕ್ಕೆ ಬೆಂಕಿ ಹತ್ತಿಕೊಂಡಿದೆ.

ರಶಿಯಾ ಸೇನೆ ಎಲ್ಲೆಡೆಯಿಂದ ಝೆಪೊರಿಝಿಯಾ ಅಣುವಿದ್ಯುತ್ ಕೇಂದ್ರದ ಮೇಲೆ ದಾಳಿ ನಡೆಸುತ್ತಿವೆ ಎಂದು ಉಕ್ರೇನ್ ವಿದೇಶಾಂಗ ವ್ಯವಹಾರಗಳ ಸಚಿವ ಡೈಟ್ರೊ ಕುಲೆಬಾ ಹೇಳಿದ್ದಾರೆ.

ಪರಮಾಣು ಸ್ಥಾವರಕ್ಕೆ ಈಗಾಗಲೇ ಬೆಂಕಿ ಹತ್ತಿಕೊಂಡಿದ್ದು, ಇದು ಸ್ಫೋಟಗೊಂಡರೆ ಅದು ಚೆರ್ಲೋಬಿಲ್ ದುರಂತಕ್ಕಿಂತ ಹತ್ತು ಪಟ್ಟು ದೊಡ್ಡ ಸ್ಫೋಟವಾಗಬಹುದು ಎಂದು ಅವರು ಟ್ವೀಟ್ ಮಾಡಿದ್ದಾರೆ.

ರಶಿಯಾ ಕೂಡಲೇ ಬೆಂಕಿಯನ್ನು ನಂದಿಸಬೇಕು ಹಾಗೂ ಅಗ್ನಿಶಾಮಕ ಸಿಬ್ಬಂದಿ ಭದ್ರತಾ ವಲಯವನ್ನು ಸ್ಥಾಪಿಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಬೆಂಕಿಯ ಜ್ವಾಲೆ ಮತ್ತು ದಟ್ಟ ಹೊಗೆ ಅಣುವಿದ್ಯುತ್ ಘಟಕ ಹೊಂದಿರುವ ನಗರದಿಂದ ಏಳುತ್ತಿರುವುದು ವಿಡಿಯೊಗಳಿಂದ ಕಂಡುಬರುತ್ತಿದೆ. ಈ ನಗರ 50 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಈ ಸಂಘರ್ಷ ಉಕ್ರೇನ್‌ನ 15 ಅಣು ರಿಯಾಕ್ಟರ್‌ಗಳಿಗೆ ಹಾನಿ ಮಾಡಬಹುದು ಎಂದು ವಿಶ್ವಸಂಸ್ಥೆಯ ಅಣ್ವಸ್ತ್ರ ಕಣ್ಗಾವಲು ಸಂಸ್ಥೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ದಾಳಿ ನಡೆದಿದೆ.

ಉಕ್ರೇನ್‌ನ ಝಪೊರಿಜಿಯಾ ಪರಮಾಣು ಸ್ಥಾವರದ ಬಳಿ ರಶಿಯದ ಕ್ಷಿಪಣಿ ದಾಳಿಯಿಂದ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಸದ್ಯ ಸ್ಥಾವರ ರಕ್ಷಣೆಯಲ್ಲಿದೆ. ಆದರೆ ಅಪಾಯ ಸಂಭವಿಸಿದರೆ ಪರಿಣಾಮ ಭೀಕರವಾಗಿರಲಿದೆ ಎಂದು ಉಕ್ರೇನ್ ಹೇಳಿದೆ.

ಅಮೇರಿಕ ಮನವಿ :

ಉಕ್ರೇನ್‌ನ ಜಫೋರಿಝಿಯಾದ ಪರಮಾಣು ಸ್ಥಾವರದ ಮೇಲೆ ರಷ್ಯಾ ದಾಳಿ ಮಾಡಿರುವ ಸಂಬಂಧ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಜೊತೆ ಅಮೇರಿಕಾ ಅಧ್ಯಕ್ಷ ಜೋ ಬೈಡೆನ್ ಮಾತನಾಡಿದ್ದಾರೆ.

ದೂರವಾಣಿ ಕರೆ ಮಾಡಿ ಮಾತನಾಡಿರುವ ಜೋ ಬೈಡೆನ್, ಸೈನ್ಯ, ಆರ್ಥಿಕ, ಮಾನವೀಯ ಸಹಾಯದ ಬಗ್ಗೆ ಚರ್ಚಿಸಿದ್ದಾರೆ. ಚರ್ಚೆ ಬಳಿಕ ಬಾಂಬ್ ದಾಳಿ ನಿಲ್ಲಿಸಲು ಅಮೇರಿಕದ ಅಧ್ಯಕ್ಷರು ರಶಿಯಾಗೆ ಮನವಿ ಮಾಡಿದ್ದಾರೆ.

ಈ ನಡುವೆ ಉಕ್ರೇನ್‌ನ ಒಡೆಸಾ, ಬಿಲಾ ಟೆರ್‌ಕ್ವಾ ಮತ್ತು ವೊಲಿನ್ ಒಬ್ಲಾಸ್ಟ್ ಪಟ್ಟಣಗಳ ಮೇಲೆ ವಾಯುದಾಳಿ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ನಿವಾಸಿಗಳು ಹತ್ತಿರದ ಶೆಲ್ಟರ್‌ಗಳಿಗೆ ತೆರಳುವಂತೆ ಅಧಿಕಾರಿಗಳು ಸೂಚಿಸಿದ್ದಾಗಿ ಕೀವ್ ಇಂಡಪೆಂಡೆಂಟ್ ಪತ್ರಿಕೆ ವರದಿ ಮಾಡಿದೆ.

 

You might also like
Leave a comment