ಹುಬ್ಬಳ್ಳಿ : ಮಗು ಹಠ ಮಾಡುತ್ತದೆ ಎಂದು ಹೆತ್ತ ತಾಯಿಯೇ ಮಗುವಿಗೆ ಬರೆ ಹಾಕಿದ ಕುಕೃತ್ಯ ನಡೆದಿದೆ. ತಾಯಿಯ ಈ ಕೃತ್ಯಕ್ಕೆ ಮೂರು ವರ್ಷದ ಮಗು ನೋವಿನಿಂದ ನರಳಾಡುತ್ತಿದೆ.
ಹುಬ್ಬಳ್ಳಿಯ ಟಿಪ್ಪು ನಗರದಲ್ಲಿ ವಾಸವಾಗಿರುವ ಅನುಷಾ ಎಂಬುವರು ತನ್ನ ಮೂರು ವರ್ಷದ ಗಂಡು ಮಗುವಿನ ಮೈಮೇಲೆ ಕಾದ ಕಬ್ಬಿಣದ ಸಲಾಕೆಯಿಂದ ಬರೆ ಹಾಕಿದ್ದಾಳೆ.
ಮಗು ಹಠ ಮಾಡುತ್ತೆ, ಮಾತು ಕೇಳಲ್ಲ ಅಂತ ಸಿಟ್ಟಿಗೆದ್ದ ತಾಯಿ, ಮಗುವಿನ ಮೇಲೆಯೇ ರಾಕ್ಷಸಿ ಪ್ರವೃತ್ತಿ ತೋರಿಸಿದ್ದಾಳೆ. ಮಗುವಿನ ಪಾದ, ಮೊಣಕಾಲು, ಮುಖ, ಕುತ್ತಿಗೆ ಸೇರಿದಂತೆ ಅನೇಕ ಕಡೆ ಬರೆ ಹಾಕಿದ್ದಾಳೆ. ಮಗು ನರಳಾಡುತ್ತಿರುವುದನ್ನು ನೋಡಿದ ಸ್ಥಳೀಯರು, ಹಳೆ ಹುಬ್ಬಳ್ಳಿ ಠಾಣೆ ಪೊಲೀಸರಿಗೆ ಮತ್ತು ಮಕ್ಕಳ ಕಲ್ಯಾಣ ಸಮೀತಿಯವರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಮಕ್ಕಳ ಕಲ್ಯಾಣ ಸಮಿತಿ ಸಿಬ್ಬಂದಿ ಮಗುವನ್ನು ಕಿಮ್ಸ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ.
ಹೆತ್ತವರಿಂದಲೂ ದೂರವಿರುವ ಅನುಷಾ, ಪತಿಯಿಂದ ಕೂಡ ದೂರವಾಗಿದ್ದಾಳೆ. ಸದ್ಯ ಅನುಷಾಳ ವಿರುದ್ಧ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು, ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಳೆ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.