This is the title of the web page

ಮೇ 16ರಿಂದ ಶಾಲೆ ಪುನರಾರಂಭ; ಎಸ್‍ಎಸ್‍ಎಲ್‍ಸಿ ಫಲಿತಾಂಶದ ದಿನಾಂಕ ಪ್ರಕಟಿಸಿದ ಸಚಿವ

 

ಮಡಿಕೇರಿ, 13- ಕಳೆದ ಮಾರ್ಚ ಮತ್ತು ಎಪ್ರಿಲ್ ತಿಂಗಳಲ್ಲಿ ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶವನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಮೇ 19ಕ್ಕೆ ಪ್ರಕಟಿಸಲಿದೆ. ಅದರಂತೆ ಹೊಸ ಶೈಕ್ಷಣಿಕ ವರುಷ ಮೇ 16ರಂದು ಮತ್ತೆ ಆರಂಭವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ ತಿಳಿಸಿದ್ದಾರೆ.

ಮಡಿಕೇರಿಯಲ್ಲಿ ಈ ಬಗ್ಗೆ ಪತ್ರಕರ್ತರ ಜೊತೆಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಮಾರ್ಚ 28ರಿಂದ ಏಪ್ರಿಲ್ 11ರವರೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆದಿತ್ತು. ಈ ಮೊದಲು ಮೇ 15ರಂದು ಫಲಿತಾಂಶ ಪ್ರಕಟಿಸುವುದಾಗಿ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಚಿಂತನೆ ನಡೆಸಿತ್ತು. ಆದರೆ ರಜೆಗಳು ಬಂದ ಹಿನ್ನೆಲೆಯಲ್ಲಿ ಫಲಿತಾಂಶ ಘೋಷಣೆ ತಡವಾಗಿದೆ. ರಾಜ್ಯದ ಸುಮಾರು 234 ಮೌಲ್ಯಮಾಪನ ಕೇಂದ್ರಗಳಲ್ಲಿ 63,796 ಶಿಕ್ಷಕರು ಮೌಲ್ಯಮಾಪನದಲ್ಲಿ ಪಾಲ್ಗೊಂಡಿದ್ದರು ಎಂದರು.

ರಾಜ್ಯದ 3,446 ಪರೀಕ್ಷಾ ಕೇಂದ್ರಗಳಲ್ಲಿ 15,387 ಶಾಲೆಗಳ 8.73 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಉತ್ತೀರ್ಣಕ್ಕೆ ಅತೀ ಕಡಿಮೆ ಅಂಕಗಳ ಕೊರತೆಯಿರುವ ವಿದ್ಯಾರ್ಥಿಗಳಿಗೆ ಶೇ.10ರಷ್ಟು ಗ್ರೇಸ್ ಮಾರ್ಕ್ಸ ನೀಡಲಾಗಿದೆ. ಮೂರು ವಿಷಯಗಳಲ್ಲಿ ಪಾಸಾಗಿರುವ ವಿದ್ಯಾರ್ಥಿಗಳು, ಅಕಸ್ಮಾತ್ ಉಳಿದ ಮೂರು ವಿಷಯಗಳಲ್ಲಿ ಕಡಿಮೆ ಅಂಕ ಪಡೆದು, ಫೇಲ್ ಆಗುವ ಪರಿಸ್ಥಿತಿ ಅನುಭವಿಸುತ್ತಿದ್ದರೆ ಮಾತ್ರ ಕೃಪಾಂಕ ಸಿಗುತ್ತದೆ. ಮೇ 19ರಂದು ಬೆಳಿಗ್ಗೆ 10.30ರ ನಂತರ ವೆಬ್‍ಸೈಟ್‍ನಲ್ಲಿ ಫಲಿತಾಂಶ ಲಭ್ಯವಾಗಲಿದೆ.

ಅನುತ್ತೀರ್ಣ ವಿದ್ಯಾರ್ಥಿಗಳ ಒಂದು ವರ್ಚ ಹಾಳಾಗಬಾರದು ಎಂದು ಜೂನ್ 4ನೇ ವಾರದಲ್ಲಿ ಅವರಿಗಾಗಿ ಪೂರಕ ಪರೀಕ್ಷೆ ನಡೆಯಲಿದೆ ಎಂದೂ ಸಚಿವರು ತಿಳಿಸಿದರು.

You might also like
Leave a comment