This is the title of the web page

ದಡ ಮತ್ತು ದೋಣಿ

ತೀರಾ ಹಳೆಯದೇನಲ್ಲ. ವಿಧಾನಸಭೆ ಕಲಾಪದಲ್ಲಿ ನಡೆದ ಒಂದು ಘಟನೆ. ಜೆ.ಎಚ್. ಪಟೇಲ್ ಮುಖ್ಯಮಂತ್ರಿ ಆಗಿದ್ದಾಗ ಅವರು ತಮ್ಮ ಸರ್ಕಾರದ ಸಾಧನೆ ಎಲ್ಲ ವಿವರಿಸಿ ಕುಳಿತರು. ವಿರೋಧ ಪಕ್ಷದ ನಾಯಕರು ಎದ್ದು ನಿಂತು, ತಮ್ಮ ನೆನಪಿನಿಂದ ಒಂದು ಕತೆ ಹೆಕ್ಕಿ ತೆಗೆದು ಹೇಳಿದರು. ಕೆಲವು ಬುದ್ಧಿವಂತರು ಸೇರಿ ದೋಣಿ ಹತ್ತಿ ಬಹುದೂರ ಹೋಗಬೇಕು ಎಂದುಕೊಂಡರು. ಇದು ಯಾರಿಗೂ ತಿಳಿಯಬಾರದು ಎಂದು ರಾತ್ರಿ ಕತ್ತಲಾದ ಮೇಲೆ ದೋಣಿ ಏರಿ ಕುಳಿತು ಭರ್ಜರಿಯಾಗಿ ಹುಟ್ಟು ಹಾಕುತ್ತಾ ಹೋದರು. ಕೊನೆಗೆ ಬೆಳಗಾಗುವ ಸಮಯಕ್ಕೆ ನೋಡಿದರೆ ದೋಣಿ ಇದ್ದಲ್ಲಿಯೇ ಇತ್ತು. ಜಾಣರು ದಡಕ್ಕೆ ಬಿಗಿದಿದ್ದ ದೋಣಿಯ ಹಗ್ಗ ಬಿಚ್ಚಿರಲೇ ಇಲ್ಲ. ಈ ಸರ್ಕಾರದ ಪ್ರಗತಿಯ ಕತೆಯೂ ಅದೇ ಎಂದು ವಿರೋಧಿ ನಾಯಕರು ಗೇಲಿ ಮಾಡಿದ್ದರು.

ಬಹುಷಃ ಎಲ್ಲ ಸರ್ಕಾರಗಳ ಕತೆಯೂ ಇದೆ ಎಂದು ಕಾಣುತ್ತದೆ. ಅವರೇನೋ ಇಷ್ಟು ಕೋಟಿ, ಅಷ್ಟು ಕೋಟಿ ಎಂದೆಲ್ಲ ಮಂಡಿಸುತ್ತಾ ಹೋಗುತ್ತಾರೆ. ಆದರೆ ಕಣ್ಣಿಗೆ ಕಾಣುವಂತೆ ಏನೂ ಆಗಿರುವುದಿಲ್ಲ. ಜನರ ಸ್ಥಿತಿ ಮಾತ್ರ ಇದ್ದಲ್ಲಿಯೇ ಇರುತ್ತದೆ. ಸರ್ಕಾರಗಳು ಅಷ್ಟೇ ಅಲ್ಲ, ವಿರೋಧ ಪಕ್ಷಗಳೂ ಇದ್ದಲ್ಲಿಯೇ ಇದ್ದು ಕೆಸರಲ್ಲಿ ಹೊರಳುತ್ತಾ ಇರುತ್ತವೆ. ಇನ್ನೂ ಸ್ವಲ್ಪ ಅಳವಾಗಿ ನೋಡಿದರೆ, ಜನಪರ ಎಂದು ಹೇಳುವ ಎಲ್ಲ ರಾಜಕೀಯ ಪಕ್ಷಗಳ ಯೋಜನೆಯ ಹಿಂದೆ ಏನಾದರೊಂದು ಹುನ್ನಾರ ಇದ್ದೇ ಇರುತ್ತದೆ. ಇತ್ತೀಚೆಗೆ ನಮ್ಮ ಮಾಜಿ ಮುಖ್ಯಮಂತ್ರಿಯೊಬ್ಬರು ತಮ್ಮ ತಂದೆ ಪ್ರಧಾನಿ ಆಗಿದ್ದಾಗ ಕೃಷ್ಣಾ ಮೇಲ್ದಂಡೆ ಯೋಜನೆಗೆ ಎಷ್ಟೆಲ್ಲ ಹಣ ತಂದರು ಎಂದು ಹೆಮ್ಮೆಯಿಂದ ಹೇಳಿದರು. ಆದರೆ ಅದೇ ಯೋಜನೆಯ ತುಂಡು ಗುತ್ತಿಗೆ ಅವ್ಯವಹಾರ ಕುರಿತು ಅವರು ಬಾಯಿ ಬಿಡುವುದೇ ಇಲ್ಲ. ಆದ್ದರಿಂದಲೇ ಸರ್ಕಾರ ಅಥವಾ ವಿರೋಧ ಪಕ್ಷಗಳು ‘ಜನಕ್ಕಾಗಿ’ ಎಂದರೆ ಅಲ್ಲಿ ಏನೋ ಲಾಭ ಇದ್ದೇ ಇರುತ್ತದೆ ಎಂದು ತಿಳಿಯಬೇಕು. ಹೀಗಾಗಿಯೇ ಸರ್ಕಾರದ ಯೋಜನೆಗಳಿಗೆ ವಿರೋಧ ಪಕ್ಷಗಳು ಮತ್ತು ವಿರೋಧ ಪಕ್ಷದ ಕಾರ್ಯಕ್ರಮಕ್ಕೆ ಸರ್ಕಾರಗಳು ಅಡ್ಡಿ ಮಾಡುತ್ತಲೇ ಇರುತ್ತವೆ. ದೋಣಿಗೆ ಹುಟ್ಟು ಹಾಕಿದ್ದೇ ಬಂತು, ದೋಣಿ ದಡ ಬಿಟ್ಟು ಕದಲಿರುವುದೇ ಇಲ್ಲ.

‘ನಮ್ಮ ನೀರು ನಮ್ಮ ಹಕ್ಕು’ ಎಂದು ಒತ್ತಾಯಿಸಿ ಕೈಗೊಂಡಿದ್ದ ಕಾಂಗ್ರೆಸ್ ಪಾದಯಾತ್ರೆ ಸದ್ಯಕ್ಕೆ ಸ್ಥಗಿತ ಆಗಿದೆ. ಅವರು ಯಶಸ್ವಿ ಪಾದಯಾತ್ರೆ ಮಾಡಿದರೆ ತಮ್ಮ ಜನಪ್ರಿಯತೆಗೆ ಕುಂದು ಒಂದೇ ಅಲ್ಲ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಕೈ ಮೇಲಾಗಿಬಿಡಬಹುದು ಎಂಬ ಆತಂಕದಲ್ಲಿಯೇ ಚಡಪಡಿಸಿದ್ದ ಬಿಜೆಪಿಯು ಯಾತ್ರೆ ತಡೆಯಲು ಇನ್ನಿಲ್ಲದ ಸಾಹಸ ಮಾಡಿತು. ಇವರು ಪಾದಯಾತ್ರೆಯಿಂದ ಕೊರೋನಾ ಹರಡುತ್ತಿದ್ದಾರೆ ಎಂದು ಹುಯಿಲೆಬ್ಬಿಸಿತು. ಯಾತ್ರೆ ತಡೆಯಲೆಂದೇ ಪ್ರತಿಬಂಧಕಾಜ್ಞೆ, ವಾರಾಂತ್ಯದ ಕಫ್ರ್ಯೂ ಹೇರಿತು. ಇಷ್ಟಾಗಿ ತಾವು ಜಗ್ಗುವುದಿಲ್ಲ ಎಂದು ಹೇಳಿಕೆ ನೀಡುತ್ತಿದ್ದ ಕಾಂಗ್ರೆಸ್ ನಾಯಕರು ಕೋರ್ಟಿನ ಮಧ್ಯಪ್ರವೇಶದ ನಂತರ, ಅದನ್ನೇ ನೆಪ ಮಾಡಿಕೊಂಡು ಯಾತ್ರೆ ಸ್ಥಗಿತ ಮಾಡಿದರು.

ದೆಹಲಿ ಹೊರವಲಯದಲ್ಲಿ ವರ್ಷಗಟ್ಟಲೇ ಧರಣಿ ಕುಳಿತ ರೈತರ ಹಾಗೆ ಇವರೂ ಏನಾದರೊಂದು ಮಾಡುತ್ತಾರೆ ಎಂದು ಈ ನಾಯಕರ ಮಾತು ಕೇಳಿದ್ದ ಜನರು ನಿರೀಕ್ಷಿಸಿದ್ದರು. ಆದರೆ ಹಾಗೇನೂ ಆಗಲಿಲ್ಲ. ಏಕೆಂದರೆ ರೈತರಿಗೆ ಅದು ಅಳಿವು ಉಳಿವಿನ ಪ್ರಶ್ನೆ ಆಗಿತ್ತು, ಇವರಿಗೆ ಹಾಗಲ್ಲ. ಅದರಂತೆ ಕಾಂಗ್ರೆಸ್ ಯಾತ್ರೆಯಿಂದ ಹೆಚ್ಚು ತಳಮಳಕ್ಕೆ ಈಡಾಗಿದ್ದವರು ಜೆಡಿಎಸ್‍ನ ರಾಜ್ಯಾಧ್ಯಕ್ಷರು. ಅವರಿಗೆ ಈ ಯಾತ್ರೆಯಿಂದ ಜಿಲ್ಲೆಯ ಮೇಲಿನ ತಮ್ಮ ಹಿಡಿತ ಎಲ್ಲಿ ಸಡಿಲವಾಗುತ್ತದೋ ಎಂಬ ಆತಂಕ ಇತ್ತು. ಅವರು ಯಾತ್ರೆಯ ಮುಖ್ಯ ಉದ್ದೇಶವಾದ ಮೇಕೆದಾಟು ಯೋಜನೆಯ ಸಾಧಕ ಬಾಧಕಗಳ ಕುರಿತು ಮಾತಾಡಲೇ ಇಲ್ಲ. ಅವರೇನು ರೈತರೇ? ಪಂಚೆ ಕಟ್ಟಿಕೊಂಡರೆ ರೈತರಾಗ್ತಾರಾ? ಬಂಡೆ ತಿಂದು ಅರಗಿಸಿಕೊಂಡವರು. ಎಂದೆಲ್ಲ ವೈಯಕ್ತಿಕ ನಿಂದನೆಯಲ್ಲಿ ತೊಡಗಿದರೇ ಹೊರತು, ಒಂದು ವಿರೋಧ ಪಕ್ಷವಾಗಿ ಜವಾಬ್ದಾರಿಯುತ ನಡೆ ತೋರಲೇ ಇಲ್ಲ.

ಇಂಥ ಹುಚ್ಚಾಟಗಳು ರಾಜಕೀಯದಲ್ಲಿ ಇದ್ದೇ ಇರುತ್ತವೆ. ಅಣೆಕಟ್ಟುಗಳ ನಿರ್ಮಾಣ ನಾವು ಅಂದುಕೊಂಡಷ್ಟು ಅನುಕೂಲಕರ ಅಲ್ಲ ಎಂದು ಈಗಾಗಲೇ ಸಾಬೀತಾಗಿದೆ. ಬಳ್ಳಾರಿ, ರಾಯಚೂರು ಭಾಗದ ಜನರಿಗೆ ವರದಾನ ಎನಿಸಿಕೊಂಡಿದ್ದ ತುಂಗಭದ್ರಾ ಆಣೆಕಟ್ಟು ಹೂಳು ತುಂಬಿ ನೀರೆಲ್ಲ ಅನಾಯಾಸವಾಗಿ ಆಂಧ್ರ ಮತ್ತು ತೆಲಂಗಾಣಾ ರಾಜ್ಯಗಳಿಗೆ ಹರಿದು ಹೋಗುತ್ತಿದೆ. ಹೂಳು ಎತ್ತಲಾಗದ ನಮ್ಮ ರಾಜಕೀಯ ಮಂದಿ ಹೊಸಪೇಟೆ ಮತ್ತು ರಾಯಚೂರು ನಡುವೆ ಇನ್ನೊಂದು ಆಣೆಕಟ್ಟೆ ನಿರ್ಮಿಸಿ ನಮ್ಮ ಪಾಲಿನ ನೀರು ಉಳಿಸಿಕೊಳ್ಳೋಣ ಎನ್ನುತ್ತಾರೆ. ಆ ಆಣೆಕಟ್ಟು ಕೂಡ ಹೂಳು ತುಂಬಿದರೆ ಏನು ಮಾಡುತ್ತಾರೆ? ಅಂದಂದಿಗೆ ಏನೋ ಒಂದು ಪರಿಹಾರ ಸೂಚಿಸಿ, ಅದರಿಂದ ಲಾಭ ಮಾಡಿಕೊಂಡು ಜಾಗ ಖಾಲಿ ಮಾಡುವುದೇ ರಾಜಕೀಯದ ಬಹುಮುಖ್ಯ ದುರುದ್ದೇಶ ಆಗಿರುತ್ತದೆ. ಇತ್ತೀಚಿನ ಪಾದಯಾತ್ರೆ ಅದಕ್ಕೆ ಹೊರತೇನೂ ಅಲ್ಲ. ಅವರು ದೋಣಿ ಏರಿದರೆ, ಇವರು ಹಗ್ಗ ಕಟ್ಟಿ ಮುಂದೆ ಚಲಿಸದಂತೆ ಮಾಡುತ್ತಾರೆ, ಇವರು ಹೊರಟರೆ ಅವರು ಹಾಗೆ ಮಾಡುತ್ತಾರೆ.

ಎಷ್ಟೋ ವೇಳೆ ಜನರಿಗೆ ನಿಜಕ್ಕೂ ಒಳ್ಳೆಯದಾಗುವ ಕಾರ್ಯಕ್ರಮ ಹಮ್ಮಿಕೊಂಡಾಗ, ಅವರ ಜನಪ್ರಿಯತೆ ಎಲ್ಲಿ ಹೆಚ್ಚುತ್ತದೋ ಎಂದು ಕಲ್ಲು ಹಾಕುವ ಮಂದಿಯೇ ಹೆಚ್ಚು. ನಮ್ಮ ದೇಶದ ರಾಜಕಾರಣವನ್ನು ಏಡಿಗಳಿಂದ ತುಂಬಿದ ಬಿದರಿನ ಬುಟ್ಟಿಗೆ ಹೋಲಿಸುವುದು ಸಾಮಾನ್ಯ. ಅದನ್ನು ತೆರೆದಿಟ್ಟರೂ ಸಹ ಯಾವೊಂದು ಏಡಿಯೂ ಬುಟ್ಟಿ ಬಿಟ್ಟು ಹೊರಗೆ ಹೋಗುವುದಿಲ್ಲ. ಏಕೆಂದರೆ ಒಂದು ಮೇಲೇರಲು ತೊಡಗಿದರೆ, ಉಳಿದವು ಅದರ ಕಾಲು ಹಿಡಿದು ಜಗ್ಗಿ ಕೆಳಕ್ಕೆ ತರುತ್ತವೆ. ಈ ಮೇಲೇರುವ ಮತ್ತು ಕೆಳಗೆ ತಳ್ಳುವ ಕ್ರಿಯೆ ನಿರಂತರವಾಗಿ ಸಾಗುವುದರಿಂದಲೇ ತೆರೆದ ಬುಟ್ಟಿಯಿಂದ ಕೂಡ ಏಡಿಗಳು ಹೊರಕ್ಕೆ ಹೋಗಲಾರವು. ಮೇಕೆದಾಟು ಪಾದಯಾತ್ರೆ ಪೂರ್ಣಗೊಂಡಿದ್ದರೆ ಮಹತ್ವದ್ದೇನೋ ಆಗಿ ಬಿಡುತ್ತಿತ್ತು ಎಂದಲ್ಲ. ಆದರೆ ಭವಿಷ್ಯದ ದೃಷ್ಟಿಯಿಂದ ಸಣ್ಣದೊಂದು ಹೆಜ್ಜೆ ಆಗಿದ್ದ ಯಾತ್ರೆಯನ್ನು ಅಸೂಯೆ, ಅಹಮಿಕೆಯಿಂದ ತಡೆದ ರೀತಿ ಗಮನಿಸಿದರೆ ನಮ್ಮ ರಾಜಕೀಯದ ಒಳಸುಳಿಗಳ ಚಿತ್ರಣ ಸ್ಪಷ್ಟ ಆಗುತ್ತದೆ.
-ಎ.ಬಿ.ಧಾರವಾಡಕರ
ಸಂಪಾದಕ

You might also like
Leave a comment