This is the title of the web page

ಸಣ್ಣ ತಪ್ಪು

ತಪ್ಪುಗಳಲ್ಲಿ ಸಣ್ಣ ತಪ್ಪು, ದೊಡ್ಡ ತಪ್ಪು ಎಂಬುದೇನೂ ಇರುವುದಿಲ್ಲ. ಅದು ತಪ್ಪು ಅಥವಾ ಸರಿ ಮಾತ್ರ ಆಗಿರುತ್ತದೆ. ಎರಡು ಮೂರು ದಿನಗಳಿಂದ ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಭಾರಿ ಹಿಂಸಾಚಾರ ನಡೆದ ಬಗ್ಗೆ ವರದಿ ಆಗುತ್ತಿದೆ. ಇದಕ್ಕೆ ಉದ್ರಿಕ್ತ ಯುವಕರು ಕಾರಣ. ಅವರಿಗೆ ಕಳೆದ ಮೂರು ವರ್ಷಗಳಿಂದ ರೇಲ್ವೆಯಲ್ಲಿ ನೌಕರಿ ದೊರೆಯುತ್ತಿಲ್ಲ. ಅದಕ್ಕೆ ಬೇಕಾದ ಪೂರ್ವಭಾವಿ ಅರ್ಹತಾ ಪರೀಕ್ಷೆಗಳು ಆಗಿದ್ದರೂ ಕಳೆದ ಮೂರು ವರ್ಷಗಳಿಂದ ಯುವಕರಿಗೆ ನೇಮಕಾತಿ ಪತ್ರ ನೀಡಿಲ್ಲ. ಒಂದಲ್ಲ ಒಂದು ನೆಪ ಹೇಳಿ ಇಡೀ ಪ್ರಕ್ರಿಯೆ ಮುಂದೂಡಲಾಗುತ್ತಿದೆ. ಇಂಥ ನೌಕರಿ ನಂಬಿ ಕುಳಿತಿರುವ ಎಷ್ಟೋ ಜನರಿಗೆ ನೌಕರಿ ಸಿಗದೇ ಇದ್ದರೆ ವಯೋಮಿತಿ ಮೀರಿ, ಅವರು ಯಾವುದೇ ಸರ್ಕಾರಿ ನೌಕರಿ ಪಡೆಯಲಾರರು. ಈ ಹಿನ್ನೆಲೆಯಲ್ಲಿ ಯುವಕರು ರೈಲು ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು. ಬಿಹಾರದ ಕೆಲವು ಕಡೆ ರೈಲಿಗೆ ಬೆಂಕಿ ಹಚ್ಚಿದ ಪ್ರಸಂಗ ಕೂಡ ನಡೆಯಿತು.

ಇದೇ ರೀತಿ ಉತ್ತರ ಪ್ರದೇಶದ ಪ್ರಯಾಗರಾಜ್ (ಅಲಹಾಬಾದ) ನಲ್ಲಿ ನೌಕರಿ ದೊರೆಯದ ಯುವಕರು ಕ್ರೋಧಿತರಾಗಿ ರೈಲು ಹಳಿಗಳ ಮೇಲೆ ಕುಳಿತು ಧರಣಿ ನಡೆಸಿದರು. ಈ ನಗರ ಅಲಹಾಬಾದ ವಿಶ್ವವಿದ್ಯಾನಿಲಯಕ್ಕಾಗಿ ಪ್ರಸಿದ್ಧ. ನಗರದ ಇನ್ನೊಂದು ಭಾಗದಲ್ಲಿ ಆಲಂಪುರ ಎಂಬ ಪ್ರದೇಶ ಇದೆ. ಅಲ್ಲಿ ನೌಕರಿಗಾಗಿ ನಡೆಯುವ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಯುವಕರಿಗೆ ತರಬೇತಿ ನೀಡುವ ಅನೇಕಾನೇಕ ಸಂಸ್ಥೆಗಳಿವೆ. ದೂರ ದೂರದ ಊರುಗಳಿಂದ ಬಂದು ಅಲ್ಲಿನ ಲಾಜ್ ಗಳಲ್ಲಿ ವರ್ಷಾನುಗಟ್ಟಲೇ ಸಿದ್ಧತೆಯಲ್ಲಿ ತೊಡಗುವ ಯುವಕರು, ಇದಕ್ಕಾಗಿ ತಂದೆ ತಾಯಿಯರಿಂದ ಹಣ ತರಿಸಿಕೊಳ್ಳುತ್ತಾರೆ. ಒಂದು ರೂಮಿನ ಬಾಡಿಗೆಯೇ ನಾಲ್ಕೈದು ಸಾವಿರ ಇರುವುದರಿಂದ 9-10 ಜನ ಒಟ್ಟಾಗಿ ಒಂದು ರೂಮು ಬಾಡಿಗೆಗೆ ಪಡೆಯುತ್ತಾರೆ. ಆ ದಿನ ರೇಲ್ವೆ ಧರಣಿ ನಡೆದ ರಾತ್ರಿ ಈ ಲಾಜ್ ಗಳ ಸಮುಚ್ಛಯಕ್ಕೆ ನುಗ್ಗಿದ ಪೊಲೀಸರು ಬಂದೂಕಿನಿಂದ ಕುಟ್ಟಿ ಗೇಟು, ಬಾಗಿಲು ಪುಡಿಪುಡಿ ಮಾಡಿದ್ದು ಅಲ್ಲದೇ ಕಿಟಕಿ ಗಾಜುಗಳನ್ನು ಕೂಡ ಒಡೆದಿದ್ದಾರೆ. ರೂಮುಗಳಿಗೆ ನುಗ್ಗಿ ಕೈಗೆ ಸಿಕ್ಕವರನ್ನು ಬಾಯಿಗೆ ಬಂದಂತೆ ನಿಂದಿಸಿದ್ದಾರೆ, ಮನಬಂದಂತೆ ಥಳಿಸಿದ್ದಾರೆ. ಹಾಗೆ ನೋಡಿದರೆ, ಆ ಲಾಡ್ಜುಗಳಲ್ಲಿ ಇದ್ದವರು ಯಾರೂ ಅಂದಿನ ಧರಣಿಯಲ್ಲಿ ಪಾಲ್ಗೊಂಡವರಲ್ಲ. ಅವರೆಲ್ಲ ಬೇರೆ ಬೇರೆ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದವರು. ಪೊಲೀಸರ ದುರ್ವರ್ತನೆಯು ವಿಡಿಯೋ ಮೂಲಕ ಬಹಿರಂಗ ಆಗುತ್ತಿದ್ದಂತೆ ಒಂಭತ್ತು ಪೊಲೀಸರನ್ನು ಅಮಾನತು ಮಾಡಲಾಗಿದೆ.

ನಮ್ಮ ದೇಶದಲ್ಲಿ ನೌಕರಿ ಕೇಳುವುದು ಕೂಡ ದುರ್ಭರ ಆಗಿದೆ. ಈ ಎಲ್ಲ ಅನಾಹುತ ಸಂಭವಿಸಿದ ಮೇಲೆ ಸಂಬಂಧಿಸಿದ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ; “ಸಣ್ಣ ತಪ್ಪಾಗಿದೆ, ಸರಿ ಮಾಡುತ್ತೇವೆ”. ಕಳೆದ ಮೂರು ವರ್ಷಗಳಿಂದ ಕೇವಲ ಒಂದು ನೇಮಕಾತಿ ಪತ್ರ ನೀಡಲು ಮತ್ತು ಹುದ್ದೆಗಳಿಗೆ ಅರ್ಜಿ ಆಹ್ವಾನ ನಡೆಸಿ ಪರೀಕ್ಷೆ ನಡೆಸದೇ ಇರಲು ಇವರಿಗೆಲ್ಲ ಅದೇನು ಅಡ್ಡಿ ಇದೆ ಎಂದು ಯಾರಿಗೂ ತಿಳಿಯದು. ತೀರಾ ಒತ್ತಾಯಿಸಿದರೆ ಕೋವಿಡ್ ನೆಪ ಹೇಳುತ್ತಾರೆ. ಇದೇ ಕೋವಿಡ್ ನಡುವೆ ಸಿಇಟಿ, ನೀಟ್, ಐಎಎಸ್ ಮುಂತಾದ ಎಲ್ಲ ಪರೀಕ್ಷೆಗಳು ನಡೆಯುತ್ತವೆ. ಆದರೆ ಕೇಂದ್ರ ಸರ್ಕಾರದ ಅಥವಾ ಅದರ ಆಧೀನ ಸಂಸ್ಥೆಗಳ ನೌಕರಿ ಭರ್ತಿಗೆ ಮಾತ್ರ ಇಂಥ ಕುಂಟು ನೆಪ ಇದೆ. ಪ್ರತಿ ಇಲಾಖೆಯಲ್ಲೂ ಲಕ್ಷಾಂತರ ಹುದ್ದೆಗಳು ಖಾಲಿ ಇವೆ. ಹುದ್ದೆ ತುಂಬುವುದಿರಲಿ, ಇರುವ ಉದ್ಯೋಗಿಗಳಿಗೆ ಬಡ್ತಿ ನೀಡಲು ಕೂಡ ಇವರದ್ದು ತಕರಾರು. ಎಷ್ಟೋ ಜನ ಅರ್ಹರು ಬಡ್ತಿ ಪಡೆಯದೇ ಕಳೆದ ಕೆಲವು ವರ್ಷಗಳಿಂದ ನಿವೃತ್ತರಾಗುತ್ತಿದ್ದಾರೆ. ವಿಚಾರಿಸಿದರೆ, ಈ ಸಂಬಂಧ ನ್ಯಾಯಾಲಯದಲ್ಲಿ ತಕರಾರು ಅರ್ಜಿ ಇದೆ ಎನ್ನುತ್ತಾರೆ. ಹಾಗೆಂದು ಎಲ್ಲ ಕಡೆ ಬಡ್ತಿ ತಡೆ ಹಿಡಿದಿಲ್ಲ, ಕೆಲವು ಕಡೆ ಆರಾಮಾಗಿ ಬಡ್ತಿ ನೀಡಲಾಗಿದೆ.

ಇದೆಲ್ಲ ಗಮನಿಸಿದರೆ ಕಳ್ಳನಿಗೊಂದು ಪಿಳ್ಳೆ ನೆವ ಎನ್ನುವಂತೆ ಇವರು ಮಾಡುತ್ತಿರುವುದು ಕಾಣುತ್ತ್ತಿದೆ. ಆದರೆ ಚುನಾವಣೆ ಬಂತೆಂದರೆ ಸಾಕು, ಚುರುಕಾಗಿ ಭರ್ತಿ ಕಾರ್ಯ ಆರಂಭಿಸುತ್ತಾರೆ. ಅದಕ್ಕೆ ಅಂಕಿ-ಸಂಖ್ಯೆಗಳ ಪುರಾವೆ ಇದೆ. ಎಷ್ಟೋ ಸಲ ಚುನಾವಣೆಗೆ ಮುನ್ನ ಭರ್ತಿ ನಾಟಕ ಮಾಡಿ, ಚುನಾವಣೆ ಮುಗಿದ ನಂತರ ನೇಮಕಾತಿ ಆದೇಶ ನೀಡದೇ ವೋಟು ಪಡೆದುಕೊಂಡು ಪಂಗನಾಮ ಹಾಕುವ ಕೆಲಸ ನಡೆದಿರುವುದನ್ನು ಕಾಣುತ್ತಿದ್ದೇವೆ.

ಒಂದು ಸಣ್ಣ ತಪ್ಪು ತಿದ್ದಿ ವ್ಯವಸ್ಥೆ ದುರಸ್ತಿಗೊಳಿಸಲಾಗದ ಇವರು ದೇಶ ನಡೆಸುತ್ತಾರೆ ಎನ್ನುವುದೇ ಆಶ್ಚರ್ಯದ ಸಂಗತಿ. ಇದು ಕೇವಲ ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ಸಂಗತಿ ಅಷ್ಟೇ ಅಲ್ಲ. ನಮ್ಮ ರಾಜ್ಯದ ಹಣೆ ಬರಹ ಕೂಡ ಇದೇ ಆಗಿದೆ. ಕಳೆದ ಕೆಲವು ವರ್ಷಗಳಿಂದ ಕರ್ನಾಟಕ ಲೋಕಸೇವಾ ಆಯೋಗವು ನಾಲ್ಕು ಸಾವಿರಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಕ್ರಮ ಕೈಗೊಂಡಿಲ್ಲ. ಕಾರಣ ಕೇಳಿದರೆ ಯಾರಿಗಾದರೂ ನಗು ಬರುತ್ತದೆ. ಆಯೋಗದಲ್ಲಿ ಪರೀಕ್ಷೆ ನಡೆಸುವ ಅಧಿಕಾರಿ ಇಲ್ಲವಂತೆ, ಅದಕ್ಕಾಗಿ ಸಾವಿರಾರು ಜನ ಯುವಕರ ಭವಿಷ್ಯ ಹಾಳು ಮಾಡುವ ಕೆಲಸವನ್ನು ಸರ್ಕಾರ ಯಶಸ್ವಿಯಾಗಿ ಮಾಡುತ್ತಿದೆ.

ಇತ್ತೀಚೆಗೆ ಮುಗಿದ ರಾಜ್ಯ ಪೊಲೀಸ ಇಲಾಖೆ ಆಯ್ಕೆ ಪ್ರಕ್ರಿಯೆಯ ಫಲಿತಾಂಶ ಹೊರಬಿದ್ದು, ಆಗಲೇ ಸಾಕಷ್ಟು ತಕರಾರುಗಳು ಕಾಣಿಸಿಕೊಂಡಿವೆ. ಕೆಲವರು ಇದರ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಒಂದೆಡೆ ನಡೆಯಬೇಕಾದ ಪರೀಕ್ಷೆ ನಡೆಯುವುದೇ ಇಲ್ಲ. ಅಕಸ್ಮಾತ್ ನಡೆದರೆ, ಅಲ್ಲಿ ಲಂಚ, ರುಷುವತ್ತಿನ ತಾಂಡವ ನಡೆದಿರುತ್ತದೆ.

ಇದು ಒಂದು ರೀತಿಯಲ್ಲಿ ನಿತ್ಯದ ಗೋಳಾಗಿದೆ. ಈಗ ಯುವಕರು ಎಚ್ಚೆತ್ತು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಹಿಂದೆ 1975ರಲ್ಲಿ ಕಾಲೇಜು ಕ್ಯಾಂಟೀನ್ ತಿಂಡಿಗಳ ದರ ಏರಿಕೆ ವಿರೋಧಿಸಿ ವಿದ್ಯಾರ್ಥಿಗಳು ಅಹಮದಾಬಾದ್‍ನಲ್ಲಿ ಪ್ರತಿಭಟನೆ, ಮುಷ್ಕರ ಆರಂಭಿಸಿದ್ದರು. ಇದು ನವ ನಿರ್ಮಾಣ ಸಮಿತಿ ರೂಪುಗೊಳ್ಳಲು ಕಾರಣ ಆಗಿತ್ತು. ಅದು ಮುಂದೆ ಬೆಳೆದು ದೊಡ್ಡ ಮಟ್ಟದಲ್ಲಿ ರಾಜಕೀಯ ಪರಿಣಾಮಗಳನ್ನು ಕಂಡಿತು. ಆಗ ಮೊಟ್ಟಮೊದಲ ಬಾರಿಗೆ ಕೇಂದ್ರದಲ್ಲಿ ಕಾಂಗ್ರೆಸ್ ನೆಲೆ ಕಳೆದುಕೊಂಡಿತ್ತು.

ಈಗ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯು ಜನರಿಗೆ ಸವಿ ಸವಿ ಮಾತು ಉಣಬಡಿಸಿ, ತಮ್ಮ ಸ್ವಾರ್ಥ ಸಾಧಿಸಿಕೊಳ್ಳಬಹುದು ಎಂದು ಭಾವಿಸಿದಂತಿದೆ. ಈ ಮುಂಚೆ ಆರಂಭವಾದ ಸಿ.ಎ.ಎ. ಮತ್ತು ಎನ್.ಆರ್.ಸಿ. ವಿರುದ್ಧದ ಚಳವಳಿಗಳನ್ನು ನಿರ್ಲಕ್ಷಿಸಿ, ಗೇಲಿ ಮಾಡಿ, ಆರೋಪಗಳ ಸುರಿಮಳೆ ಸುರಿಸಿ ಹತ್ತಿಕ್ಕಲಾಯಿತು. ಆದರೆ ರೈತರ ಮುಷ್ಕರಕ್ಕೆ ಕೊನೆಗೂ ಮಣಿಯಬೇಕಾಯಿತು. ಈಗ ಯುವ ಜನರು ಸಿಡಿದು ನಿಂತಿದ್ದಾರೆ. ಮತ್ತೇನು ತಂತ್ರ ಹೂಡುತ್ತಾರೆಯೋ ತಿಳಿಯದು. ಸಣ್ಣ ತಪ್ಪು ಸುಧಾರಿಸಲಾಗದವರು ಇನ್ನೂ ಅದೇನೇನು ಪ್ರಮಾದಗಳ ಮೂಲಕ ದೇಶದ ಜನರನ್ನು ಅದ್ಯಾವ ಅಪಾಯಕ್ಕೆ ದೂಡಲಿದ್ದಾರೆಯೋ ತಿಳಿಯದು.
-ಎ.ಬಿ.ಧಾರವಾಡಕರ

You might also like
Leave a comment