This is the title of the web page

ಕೇಂದ್ರ ಮಂತ್ರಿ ಪುತ್ರನಿಗೆ ಸಿಕ್ಕಿತು ಜಾಮೀನು

ಲಖನೌ, 10-ಲಖಿಮಪುರ ಖೇರಿ ರೈತರ ನರಸಂಹಾರ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ ಮಿಶ್ರಾ ಟೆನಿ ಅವರ ಪುತ್ರ ಆಶಿಶ ಮಿಶ್ರಾಗೆ ಅಲಹಾಬಾದ ಹೈಕೋರ್ಟ ಗುರುವಾರ ಜಾಮೀನು ನೀಡಿದೆ.

ಏಳು ಹಂತದ ಯುಪಿ ವಿಧಾನಸಭಾ ಚುನಾವಣೆಯ ಮತದಾನ ಆರಂಭವಾದ ದಿನವೇ ಮಿಶ್ರಾ ಅವರಿಗೆ ಜಾಮೀನು ಸಿಕ್ಕಿದೆ.

ಅಕ್ಟೋಬರ್ 3, 2021 ರಂದು ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಎಸ್‌ಯುವಿ ಕಾರು ಹಾಯಿಸಿ ನಾಲ್ವರು ರೈತರು ಮತ್ತು ಪತ್ರಕರ್ತರ ನರಸಂಹಾರ ನಡೆಸಲಾಗಿತ್ತು.

ದೇಶಾದ್ಯಂತ ಈ ಬಗ್ಗೆ ಜನಾಕ್ರೋಷ ಎದ್ದಾಗ ವಿಶೇಷ ತನಿಖಾ ತಂಡ ಕೇಂದ್ರ ಸಚಿವರ ಪುತ್ರನನ್ನು ಪ್ರಮುಖ ಆರೋಪಿ ಎಂದು ಘೋಷಿಸಿ, ಅಕ್ಟೋಬರ 9, 2021 ರಂದು ಬಂಧಿಸಿತ್ತು.

ರಾಜ್ಯದ ಉಪಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯ ಅವರ ಭೇಟಿ ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಈ ಘಟನೆಯ ನಂತರ  ಇಬ್ಬರು ಬಿಜೆಪಿ ಕಾರ್ಯಕರ್ತರು ಸೇರಿದಂತೆ ಮೂವರು ಸಹ ಸಾವನ್ನಪ್ಪಿದ್ದರು.

ಕಳೆದ ವರ್ಷ ನವೆಂಬರ್‌ನಲ್ಲಿ ಕೇಂದ್ರವು ರದ್ದುಪಡಿಸಿದ ಮೂರು ಕೃಷಿ ಕಾನೂನುಗಳ ವಿರುದ್ಧ ಜಾಟ್ ಪ್ರಾಬಲ್ಯದ ಪಶ್ಚಿಮ ಉತ್ತರ ಪ್ರದೇಶದಲ್ಲಿ ರೈತರು ಈ ಪ್ರತಿಭಟನೆ ನಡೆಸುತ್ತಿದ್ದರು.

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ ಮಿಶ್ರಾ ರಾಜೀನಾಮೆಗೆ ಪ್ರತಿಪಕ್ಷಗಳು ತೀವ್ರವಾಗಿ ಒತ್ತಾಯಿಸಿದ್ದವಾದರೂ ಮೋದಿ ಸರಕಾರ ಅವರನ್ನು ತನ್ನ ಮಂತ್ರಿ ಮಂಡಲದಲ್ಲಿ ಮುಂದುವರಿಸಿದೆ.

ಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಕೊನೆಗೂ ಮೌನ ಮುರಿದು ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ರಾಜ್ಯ ಸರ್ಕಾರ ತನಿಖೆಯಲ್ಲಿ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮೋದಿ ಹೇಳಿದ್ದರು.

ಫೆಬ್ರವರಿ 23 ರಂದು ಲಖಿಂಪುರ ಖೇರಿಯಲ್ಲಿ ಚುನಾವಣೆಯ ನಾಲ್ಕನೇ ಹಂತದಲ್ಲಿ ಮತದಾನ ನಡೆಯಲಿದೆ.

You might also like
Leave a comment