This is the title of the web page

ಶಿಕ್ಷಕರ ತಲೆ ಮೇಲೆ ಬಕೆಟ್ ಇಟ್ಟು ಅಪಹಾಸ್ಯ ಮಾಡಿದ ವಿದ್ಯಾರ್ಥಿಗಳು

ದಾವಣಗೆರೆ, 10- ಗುರುಗೆ ನಮ್ಮ ದೇಶದಲ್ಲಿ ಉನ್ನತ ಸ್ಥಾನ ಇದೆ. ಆದರೆ ಪ್ರೌಢಶಾಲಾ ಶಿಕ್ಷಕರೊಬ್ಬರ ತಲೆಯ ಮೇಲೆ ವಿದ್ಯಾರ್ಥಿಗಳು ಖಾಲಿ ಪ್ಲಾಸ್ಟಿಕ್ ಬಕೆಟ್ ಇಟ್ಟು, ಮೊಬೈಲ್ ನಲ್ಲಿ ವಿಡಿಯೋ ಮಾಡಿ ಅಪಹಾಸ್ಯದ ಮಾತುಗಳನ್ನಾಡಿರುವ ವಿಕೃತ ಘಟನೆ ದಾವಣಗೆರೆ ತಾಲೂಕಿನ ನಲ್ಲೂರು ಪ್ರೌಢಶಾಲೆಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ವಿದ್ಯಾರ್ಥಿಗಳು ಮಾಡಿರುವ ವಿಡಿಯೋ ವೈರಲ್ ಆಗಿದ್ದು ಘಟನೆಯನ್ನು ತೀವ್ರವಾಗಿ ಖಂಡಿಸಲಾಗುತ್ತಿದೆ.

ನಲ್ಲೂರು ಸರ್ಕಾರಿ ಜೂನಿಯರ್ ಕಾಲೇಜಿನ ಹೈಸ್ಕೂಲ್ ವಿಭಾಗದಲ್ಲಿ ಹಿಂದಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಕಾಶ ಬೋಗಾರ್ ಅವರು ತಮ್ಮ ವಿದ್ಯಾರ್ಥಿಗಳಿಂದಲೇ ಈ ತರಹದ ಅಪಮಾನಕ್ಕೆ ಒಳಗಾಗಿದ್ದಾರೆ. ಬೋಗಾರ್ ಅತ್ಯಂತ ಸರಳ, ಸೌಮ್ಯ, ಸಜ್ಜನ ಸ್ವಭಾವದ ಶಿಕ್ಷಕರು. ಮಾತ್ರವಲ್ಲ, ಹೃದಯ ಸಂಬಂಧಿ ಕಾಯಿಲೆಯಿಂದಲೂ ಬಳಲುತ್ತಿದ್ದಾರೆ. ದೂರು ಕೊಟ್ಟರೆ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತದೆ ಎಂದು ಸುಮ್ಮನಾಗಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.

ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಚನ್ನಗಿರಿ ಶಾಸಕ ಮಾದಾಳ ವಿರೂಪಾಕ್ಷಪ್ಪ ಅವರು ನಲ್ಲೂರಿಗೆ ಭೇಟಿ ನೀಡಿ, ಶಾಲೆಯ ಶಿಕ್ಷಕರು, ಪ್ರಾಂಶುಪಾಲರು ಮತ್ತು ಗ್ರಾಮಸ್ಥರ ಜೊತೆ ಚರ್ಚೆ ನಡೆಸಿದ್ದಾರೆ.

ಶಿಕ್ಷಕ ಪ್ರಕಾಶ ಅವರಿಗೆ ಅವಮಾನ ಮಾಡಿರುವ ವಿದ್ಯಾರ್ಥಿಗಳು ಯಾರು ಎಂಬ ಕುರಿತು ಮಾಹಿತಿ ಪಡೆದಿದ್ದು ತಪ್ಪು ಮಾಡಿರುವವರಿಗೆ ಶಿಕ್ಷೆಯಾಗಬೇಕು. ಮುಂಬರುವ ದಿನಗಳಲ್ಲಿ ಇಂಥ ಪ್ರಕರಣ ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ.

ದಾವಣಗೆರೆಯಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು, ನಲ್ಲೂರಿನ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಶಿಕ್ಷಕರಿಗೆ ಕುಚೇಷ್ಟೆ ಮಾಡಿ ಅವಮಾನ ವಿಡಿಯೋ ವೈರಲ್ ಆಗಿರುವುದು ಗಮನಕ್ಕೆ ಬಂದಿದೆ. ಯಾರೇ ತಪ್ಪು ಮಾಡಿದ್ದರೂ ಕ್ರಮ ತೆಗೆದುಕೊಳ್ಳುತ್ತೇವೆ. ವಿದ್ಯಾರ್ಥಿಗಳು ಈ ರೀತಿಯಾದ ಅವಮಾನ ಮಾಡಿರುವುದಕ್ಕೆ ಕಾರಣವೇನು ಎಂಬ ಬಗ್ಗೆ ವರದಿ ನೀಡುವಂತೆ ಡಿಡಿಪಿಐ ಅವರಿಗೆ ಸೂಚನೆ ನೀಡಲಾಗುವುದು ಎಂದು ಹೇಳಿದ್ದಾರೆ.

You might also like
Leave a comment