This is the title of the web page

ಕೋಳಿ, ಕುರಿ ವಧೆಗೆ ಇನ್ನು ಮುಂದೆ ಸ್ಟನ್ನಿಂಗ ಕಡ್ಡಾಯ

ಬೆಂಗಳೂರು, 2- ಬಿ.ಎಸ್. ಯಡಿಯೂರಪ್ಪ ಅವರನ್ನು ಬದಲಿಸಿ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿದಾಗಿನಿಂದ ಆಗಾಗ ಹೊಸ ಹೊಸ ವಿವಾದ ಸೃಷ್ಟಿಯಾಗುತ್ತಿವೆ. ರಾಜ್ಯದಾದ್ಯಂತ ಭುಗಿಲೆದ್ದಿರುವ ಹಲಾಲ್ ಹಾಗೂ ಜಟ್ಕಾ ಕಟ್ ವಿವಾದದ ನಡುವೆ ಇನ್ನು ಮುಂದೆ ಪ್ರಾಣಿಗಳನ್ನು ಆಹಾರಕ್ಕಾಗಿ ವಧೆ ಮಾಡುವಾಗ ಅವುಗಳಿಗೆ ಹಿಂಸೆ ನೀಡಬಾರದು ಎಂದು ಸರ್ಕಾರ ಸೂಚನೆ ನೀಡಿದೆ.

ಹಿಂಸೆ ನೀಡದೆ ಪ್ರಾಣಿಗಳನ್ನು ವಧೆ ಮಾಡಬೇಕೆಂದು ಆದೇಶ ಹೊರಡಿಸಲಾಗಿದೆ. ಬೆಂಗಳೂರಿನಲ್ಲಿ ಇನ್ನು ಮುಂದೆ ಪ್ರಾಣಿ ವಧೆಗೆ ಸ್ಟನ್ನಿಂಗ್ ಕಡ್ಡಾಯವಾಗಿದೆ ಎಂದು ಪಶುಸಂಗೋಪನಾ ಇಲಾಖೆಯಿಂದ ಮಹತ್ವದ ಆದೇಶ ನೀಡಲಾಗಿದೆ.

ಪ್ರಾಣಿ ವಧೆ ಮಾಡುವ ಮುನ್ನ ಸ್ಟನ್ನಿಂಗ್ ಮಾಡಿಸಲೇಬೇಕು ಎಂದು ಹೇಳಲಾಗಿದೆ. ಕೋಳಿ, ಕುರಿ ಅಂಗಡಿಗಳಿಗೆ ಈ ಬಗ್ಗೆ ಸುತ್ತೋಲೆ ಹೊರಡಿಸಿ ಪಶುಸಂಗೋಪನಾ ಇಲಾಖೆ ಆದೇಶ ಹೊರಡಿಸಿದೆ.

ಸ್ಟನ್ನಿಂಗ್ ಎಂದರೆ, ಪ್ರಾಣಿಗಳನ್ನು ವಧೆ ಮಾಡುವ ಮುನ್ನ ಪ್ರಜ್ಞೆ ತಪ್ಪಿಸುವ ವಿಧಾನ ಆಗಿದೆ. ಪ್ರಜ್ಞೆ ತಪ್ಪಿಸುವುದರಿಂದ ಪ್ರಾಣಿಗಳನ್ನು ಸಾಯಿಸುವಾಗ ಅವುಗಳಿಗೆ ನೋವು ತಿಳಿಯುವುದಿಲ್ಲ. ಯಾವುದೇ ಅಂಗಡಿಗಳಲ್ಲಿ ಇದನ್ನು ಪಾಲನೆ ಮಾಡದ ಹಿನ್ನೆಲೆ, ಅನೇಕ ದೂರುಗಳು ಪಶು ಸಂಗೋಪನಾ ಇಲಾಖೆಗೆ ಬಂದಿದ್ದವು. ಹೀಗಾಗಿ ಈ ಆದೇಶ ಹೊರಡಿಸಲಾಗಿದೆ.

ಆಹಾರಕ್ಕಾಗಿ ಪ್ರಾಣಿವಧೆ ಮಾಡುವಾಗ ಹಿಂಸೆ ನೀಡಬಾರದು, ಹಿಂಸೆ ನೀಡದೆ ಪ್ರಾಣಿಗಳನ್ನು ವಧೆ ಮಾಡಬೇಕು. ಬೆಂಗಳೂರು ವ್ಯಾಪ್ತಿಯಲ್ಲಿ ‘ಸ್ಟನ್ನಿಂಗ್’ ಮಾಡುವುದು ಕಡ್ಡಾಯ ಎಂದು ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕ ಉಮಾಪತಿ ತಿಳಿಸಿದ್ದಾರೆ.
ಪ್ರಾಣಿಗಳಿಗೆ ಹಿಂಸೆ ನೀಡಿದರೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಆದೇಶ ಮೀರಿದರೆ 50 ಸಾವಿರದಿಂದ 1 ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು ಎಂದು ತಿಳಿಸಲಾಗಿದೆ.

ಸ್ಟನ್ನಿಂಗ್ ‌ವಿಧಾನದಿಂದ ಪ್ರಾಣಿಗಳು ನರಳಾಟದಿಂದ ಸಾಯುವುದಿಲ್ಲ. ಸ್ಟನ್ನಿಂಗ್ ವೇಳೆ ಪ್ರಾಣಿಗಳ ತಲೆಗೆ ಜೋರಾಗಿ ಹೊಡೆಯಲಾಗುತ್ತದೆ. ಆಗ ಪ್ರಾಣಿಗಳ ತಲೆಗೆ ಪೆಟ್ಟು ಬಿದ್ದು ಅವುಗಳ ಮೆದುಳು ನಿಷ್ಕ್ರಿಯಗೊಳ್ಳುತ್ತದೆ. ಆ ವೇಳೆ ಪ್ರಾಣಿಗಳನ್ನು ವಧೆ ಮಾಡಲಾಗುತ್ತದೆ. ಹೀಗೆ, ಇನ್ನು ಮುಂದೆ ಕೋಳಿ, ಕುರಿ ಅಂಗಡಿಗಳಿಗೆ ಲೈಸೆನ್ಸ್ ಕೊಡುವಾಗಲೂ ಸ್ಟನ್ನಿಂಗ್ ವ್ಯವಸ್ಥೆ ಕಡ್ಡಾಯ ಆಗಿ ಇರಲೇಬೇಕು.
ಸ್ಟನ್ನಿಂಗ್ ವ್ಯವಸ್ಥೆ ಇಲ್ಲದಿದ್ದರೆ ಪರವಾನಗಿ ನೀಡಬಾರದು. 2001ರ ಸೆಕ್ಷನ್ 6 ಮತ್ತು 4ರ ಅಡಿಯಲ್ಲಿ ಸ್ಟನ್ನಿಂಗ್ ನಿಯಮ ಇದೆ. ನಿಯಮ ಪಾಲಿಸದವರಿಗೆ 1960 ಆಕ್ಟ್ ಪ್ರಕಾರ 5 ಸಾವಿರದಿಂದ 50 ಸಾವಿರದವರೆಗೂ ದಂಡ ವಿಧಿಸಲಾಗುವುದು ಎಂದು ಸೂಚನೆ ಕೊಡಲಾಗಿದೆ.

ನಿಯಮದ ಅಡಿಯಲ್ಲಿ ಪ್ರಾಣಿ ಹಿಂಸೆಯ ಪ್ರಕರಣ ದಾಖಲು ಮಾಡಲಾಗುವುದು ಎಂದು ಹೇಳಲಾಗಿದೆ. ಹೀಗಾಗಿ ಆಹಾರಕ್ಕಾಗಿ ಕೋಳಿ, ಕುರಿ ವಧೆ ಮಾಡುವವರು ಸ್ಟನ್ನಿಂಗ್ ನಿಯಮ ಅನುಸರಿಸಬೇಕಾಗಿದೆ.

You might also like
Leave a comment